ADVERTISEMENT

ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ

ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಇಷ್ಟೊಂದು ವ್ಯಾಪಿಸಿದ್ದಾದರೂ ಏಕೆ?

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 20:08 IST
Last Updated 20 ಜನವರಿ 2018, 20:08 IST
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ
ಕೆರೆಯ ಒಡಲೊಳಗೆ ಅಗೆದಷ್ಟು ಬೆಂಕಿ   

ಬೆಂಗಳೂರು: ಕೆರೆಯ ಮೇಲ್ಭಾಗದಲ್ಲಿ ಬೆಂಕಿ ಆರಿತ್ತು. ಆದರೆ, ನೆಲದೊಳಗೆ ಕುದಿಯುತ್ತಿತ್ತು. ನಾವು ಹೂಳನ್ನು ಅಗೆದು, ಅಗೆದು ಬೆಂಕಿ ಆರಿಸಿದೆವು. ಒಂದೆಡೆ ಬೆಂಕಿ ಆರಿಸಿದರೆ ಮತ್ತೊಂದೆಡೆ ಧುತ್ತೆಂದು ಜ್ವಾಲೆ ಕಾಣಿಸಿಕೊಳ್ಳುತ್ತಿತ್ತು. ಉರಿವ ಬೆಂಕಿಯ ಮೇಲೆ ನಿಂತು ಕಾರ್ಯಾಚರಣೆ ನಡೆಸಿದೆವು.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯ ಕಷ್ಟವನ್ನು ಕಟ್ಟಿಕೊಟ್ಟಿದ್ದು ಹೀಗೆ. ಕೆರೆಯಂಚಿನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಇಷ್ಟೊಂದು ವ್ಯಾಪಿಸಿದ್ದಾದರೂ ಹೇಗೆ? ಎಂಬ ಯಕ್ಷ ಪ್ರಶ್ನೆಗೂ ಅವರೇ ಉತ್ತರಿಸಿದರು.

‘ಘಟನೆ ಬಗ್ಗೆ ಈಗಾಗಲೇ ಸ್ಥಳೀಯರ ಹೇಳಿಕೆಗಳನ್ನು ಸಂಗ್ರಹಿಸಿದ್ದೇವೆ. ಅವರ ಪ್ರಕಾರ, 15 ವರ್ಷಗಳಿಂದ ಕೆರೆಗೆ ನಿರಂತರವಾಗಿ ತ್ಯಾಜ್ಯ ಸುರಿಯಲಾಗಿದೆ. ಅದರ ಮೇಲೆ ಹುಲ್ಲು ಬೆಳೆದಿದೆ. ನಾವು ಹುಲ್ಲಿಗೆ ಬಿದ್ದ ಬೆಂಕಿಯನ್ನು ಆರಿಸುವಷ್ಟರಲ್ಲಿ ನೆಲದೊಳಗೆ ವರ್ಷಾನುಗಟ್ಟಲೆ ಸಂಗ್ರಹವಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡಿದೆ’ ಎಂದು ಸಿಬ್ಬಂದಿ ವಿವರಿಸಿದರು.

ADVERTISEMENT

‘ದೊಮ್ಮಲೂರು, ಈಜಿಪುರ, ಕೋರಮಂಗಲ, ಸರ್ಜಾಪುರ, ಅಗರ, ಬೆಳ್ಳಂದೂರು ಹಾಗೂ ಸುತ್ತಮುತ್ತಲ ಪ್ರದೇಶದ ತ್ಯಾಜ್ಯವನ್ನೆಲ್ಲ ತಂದು ಕೆರೆಯಲ್ಲಿ ಸುರಿಯಲಾಗುತ್ತಿತ್ತು. ವರ್ಷದ ಹಿಂದಷ್ಟೇ ಕೆರೆಯ ಪಕ್ಕದ ಜಾಗದಲ್ಲಿ ವಸತಿ ಗೃಹ ನಿರ್ಮಿಸುವುದಕ್ಕಾಗಿ ಸೇನೆಯು ಗೋಡೆ ನಿರ್ಮಿಸಿದೆ. ಆ ಬಳಿಕವಷ್ಟೇ ತ್ಯಾಜ್ಯ ಸಾಗಾಟ ನಿಂತಿದೆ.’

‘ಇಲ್ಲಿ ನೀರಿನ ಬದಲು ತ್ಯಾಜ್ಯವೇ ಹೆಚ್ಚಿದೆ. ಅವೆಲ್ಲವೂ ಒಂದೇ ಭಾಗಕ್ಕೆ ತೇಲುತ್ತಾ ಬಂದು ಸೇರುತ್ತಿವೆ.  ಕಾಲಕ್ರಮೇಣ ಸಂಗ್ರಹವಾಗಿರುವ ತ್ಯಾಜ್ಯ ಹೂಳಾಗಿ ಪರಿವರ್ತನೆ ಆಗಿದೆ. ಹಾಗಾಗಿ ಕೆರೆಯ ಅಂಚಿನ ಭಾಗ ಮೈದಾನವಾಗಿ ಮಾರ್ಪಡುತ್ತಿದೆ. ಅದರ ಮೇಲೆ ಹುಲ್ಲು, ಕಸ–ಕಡ್ಡಿ ದಟ್ಟವಾಗಿ ಬೆಳೆದಿದೆ. ಸದ್ಯದ ಸ್ಥಿತಿ ನೋಡಿದರೆ, ಬೆಳ್ಳಂದೂರು ಕೆರೆ ಬೆಂಕಿಯಿಂದಲೇ ವಿನಾಶವಾಗಲೂ ಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮೇಲ್ಭಾಗದ ಬೆಂಕಿ ನಂದಿಸಿದ್ದೇವೆ ಹೊರತು, ತಳಭಾಗದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕೆರೆಯ ಆಳದಲ್ಲಿ ಬೆಂಕಿ ಹಾಗೆಯೇ ಇರುವ ಸಾಧ್ಯತೆಯೂ ಇದೆ. ಹೀಗಾಗಿ ಆತಂಕ ಇದ್ದೇ ಇದೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಅಗೆದಷ್ಟು ಗಾಜಿನ ಬಾಟಲಿಗಳು, ಕೊಳೆತ ತ್ಯಾಜ್ಯ, ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ಕಳೇಬರ ಕೈಗೆ ಸಿಕ್ಕವು. ಕಾಲಿಟ್ಟಲೆಲ್ಲ ಕೆಂಡ ತುಳಿದ ಅನುಭವವಾಗುತ್ತಿತ್ತು ಎಂದು ಇನ್ನೊಬ್ಬ ಸಿಬ್ಬಂದಿ ವಿವರಿಸಿದರು.

‘ಗುದ್ದಲಿ, ಹಾರೆಯಂಥ ಹಲವು ಸಲಕರಣೆಗಳನ್ನು ಹಿಡಿದು ಕೆರೆಯಲ್ಲಿದ್ದ ಹೂಳು ತೆಗೆದಿದ್ದೇವೆ. ಕೆಲ ನಿಮಿಷದಲ್ಲೇ ಆ ಸಲಕರಣೆಗಳೂ ಬಿಸಿಯಾದವು. ಹಿಡಿದುಕೊಳ್ಳಲೂ ಆಗಲಿಲ್ಲ. ಅಷ್ಟು ಕಾವು ಹೂಳಿನಲ್ಲಿತ್ತು’ ಎಂದು ಮಾಹಿತಿ ನೀಡಿದರು.

‘ಕೆರೆ ಪಕ್ಕದಲ್ಲಿರುವ ಸೇನೆಯ ತರಬೇತಿ ಶಿಬಿರದ ಕ್ಯಾಂಟಿನ್‌ ಜಾಗದಲ್ಲಿ ವಾರಕ್ಕೊಮ್ಮೆಯಾದರೂ ಹುಲ್ಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅವಾಗಲೆಲ್ಲ ಇಲ್ಲಿಗೆ ಬಂದು ಬೆಂಕಿ ಆರಿಸುತ್ತೇವೆ. ಆದರೆ, ಈ ಬಾರಿ ಕೆರೆಯ ಬೆಂಕಿ ಆರಿಸಲು ಬಂದಿದ್ದೇವೆ’ ಎಂದರು.

**

ನೀರು, ಆಹಾರಕ್ಕೆ ಪರದಾಟ

ರಕ್ಷಣಾ ಪಡೆಯ ಸಿಬ್ಬಂದಿಯು ಕುಡಿಯುವ ನೀರು ಹಾಗೂ ಆಹಾರಕ್ಕೆ ಪರದಾಡಿದರು.

ಬಿಸ್ಕತ್‌ ತಿಂದೇ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದರು. ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಅವರ ಆಹಾರಕ್ಕೆ ವ್ಯವಸ್ಥೆ ಮಾಡಲಿಲ್ಲ. ಶನಿವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಯೇ ಪಲಾವ್‌ ತಂದು ಕೊಟ್ಟರು. ಸಿಬ್ಬಂದಿಗೆ ಅದು ಸಾಕಾಗಲಿಲ್ಲ. ಅರೆಹೊಟ್ಟೆಯಲ್ಲೇ 28 ಗಂಟೆ ಕಾರ್ಯಾಚರಣೆ ಮಾಡಿದ ಅವರು, ಎಲ್ಲ ಮುಗಿದ ಮೇಲೆ ತರಬೇತಿ ಕೇಂದ್ರದಿಂದ ತರಿಸಲಾಗಿದ್ದ ಊಟ ಮಾಡಿದರು.

‘ತುರ್ತು ಕೆಲಸ ನಮ್ಮದು. ಬೆಂಕಿ ನಂದಿಸುವುದು ನಮ್ಮ ಕರ್ತವ್ಯ. ಕೆರೆಯು ಬಿಡಿಎ ಸುಪರ್ದಿಗೆ ಬರುತ್ತದೆ. ಅದರ ಅಧಿಕಾರಿಗಳು ಯಾರೂ ಊಟದ ಬಗ್ಗೆ ಕೇಳಲಿಲ್ಲ’ ಎಂದು ಸಿಬ್ಬಂದಿ ಹೇಳಿದರು.

ಮೇಯರ್ ಸಂಪತ್‌ ರಾಜ್‌, ‘ನೀರು, ಊಟ ಪೂರೈಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೆ’ ಎಂದರು. ‘ಏನೇನು ತಂದು ಕೊಟ್ಟಿದ್ದಿರಾ ಹೇಳಿ’ ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ಉತ್ತರಿಸಲು ತಡವರಿಸಿದರು.

**

ಸೇನೆ– ಬಿಡಿಎ ಜಟಾಪಟಿ

‌ಕೆರೆಯು ಬಿಡಿಎ ವ್ಯಾಪ್ತಿಗೆ ಬರುತ್ತದೆ. ಆದರೆ, ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸೇನೆಗೆ ಸೇರಿದ್ದು. ಹಲವು ವರ್ಷಗಳಿಂದ ಜಾಗಕ್ಕೆ ಸಂಬಂಧಿಸಿದಂತೆ ಸೇನೆ–ಬಿಡಿಎ ನಡುವೆ ಜಟಾಪಟಿ ಇದೆ. ಇದು ಹೂಳು ತೆಗೆಯಲು ಅಡ್ಡಿಯಾಗಿದೆ.

ದಿನದ 24 ಗಂಟೆಯೂ ಸೇನೆಯ ಸಿಬ್ಬಂದಿ, ಶಸ್ತ್ರಸಜ್ಜಿತವಾಗಿ ಗಸ್ತು ತಿರುಗುತ್ತಿದ್ದಾರೆ. ಹೀಗಾಗಿ ಯಾರೊಬ್ಬರೂ ಕೆರೆಯತ್ತ ಮುಖ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳು ಹೆದರುತ್ತಿದ್ದಾರೆ.

ಮೇಯರ್‌ ಸಂಪತ್‌ರಾಜ್‌, ‘ಕೆಲ ತಿಂಗಳ ಹಿಂದಷ್ಟೇ ಕೆರೆಯ ವೀಕ್ಷಣೆಗೆ ಬಂದಿದ್ದ ಇಬ್ಬರು ಅಧಿಕಾರಿಗಳನ್ನು ಸೇನೆಯನ್ನು ಬಂಧಿಸಿದ್ದರು. ಅಂದಿನಿಂದ ಅಧಿಕಾರಿಗಳು ಇಲ್ಲಿ ಬರಲು ಹೆದರುತ್ತಾರೆ. ಅಭಿವೃದ್ಧಿಗೆ ಸೇನೆ ಅಡ್ಡಿಯಾಗಿದೆ.  ಸೇನೆ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇನೆ’ ಎಂದರು.

**

ಸ್ಥಳಕ್ಕೆ ಬಂದ ಗಣ್ಯರು ಏನಂದರು:

ಮನುಷ್ಯ ನಿರ್ಮಿತ ವಿಪತ್ತು ಇದು. ಕೆರೆಯ ನೀರಿನಿಂದ ಬೆಂಕಿ ಆರಿಸಬೇಕು. ಇಲ್ಲಿ ಕೆರೆಯ ನೀರಿನಿಂದಲೇ ಕೆರೆಯ ಬೆಂಕಿಯನ್ನು ಆರಿಸುವ ಸ್ಥಿತಿ ಬಂದಿದೆ. ಪರಿಸರ ಸಚಿವನಾಗಿದ್ದಾಗ ಕೆರೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದೆ. ಕೆಲ ನಿರ್ದೇಶನ ನೀಡಿದ್ದೆ. ಅವುಗಳನ್ನು ಅಧಿಕಾರಿಗಳು ಯಾರೂ ಜಾರಿಗೆ ತಂದಿಲ್ಲ. ಈ ಬೆಂಕಿ ನೋಡಿ ಅವರಿಗೆಲ್ಲ ನಾಚಿಕೆ ಬರಬೇಕು. ಏನಾದರೂ ಕೆರೆ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳು ಗಮನಹರಿಸಬೇಕು.

– ಪ್ರಕಾಶ್‌ ಜಾವಡೇಕರ್, ಕೇಂದ್ರ ಮಾನವ ಸಂಪನ್ಮೂಲ ಸಚಿವ

*

ಕೈಗಾರಿಕೆಯ ತ್ಯಾಜ್ಯ ಕೆರೆ ಸೇರುತ್ತಿದ್ದು, ಅದನ್ನು ಸೇರದಂತೆ ತಡೆಯಬೇಕಿದೆ. ನಾವು ಸುಮ್ಮನೇ ಕುಳಿತಿಲ್ಲ, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಕಾಲಕಾಲಕ್ಕೆ ನಿರ್ದೇಶನ ನೀಡಿದ್ದೇವೆ. ಕೆರೆ ಸಂರಕ್ಷಣೆ ಕುರಿತು ಡಿ. 15ರಂದು ಸಭೆ ನಡೆಸಿದ್ದೆವು. ಈಗ ಈ ಘಟನೆ ಸಂಭವಿಸಿದೆ. ಮುಂಬರುವ ಬಜೆಟ್‌ನಲ್ಲಿ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸುವೆ

– ಸಂಪತ್‌ ರಾಜ್‌, ಮೇಯರ್ 

*

ಐಟಿ–ಬಿಟಿ ಕಂಪನಿಗಳ ಮಧ್ಯ ಈ ಕೆರೆ ಇದೆ. ಇದನ್ನೇ ಸಂರಕ್ಷಿಸಲು ಆಗುತ್ತಿಲ್ಲ. ಎನ್‌ಜಿಟಿಯು ಸಾಕಷ್ಟು ನಿರ್ದೇಶನಗಳನ್ನು ನೀಡಿದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಅಗತ್ಯಬಿದ್ದರೆ,  ಈ ಭಾಗದ ಶಾಸಕರನ್ನು ಹೊಣೆಯಾಗಿಸಿ ಕಾನೂನು ಹೋರಾಟ ನಡೆಸಲಿದ್ದೇವೆ

– ಜಗದೀಶ್ ರಡ್ಡಿ, ವರ್ತೂರು ಕೆರೆ ಸಂರಕ್ಷಣೆ ಬಗ್ಗೆ ಎನ್‌ಜಿಟಿಯಲ್ಲಿ ಅರ್ಜಿ ಹಾಕಿದವರು

*

ನಾನು ಜಗತ್ತಿನ ಎಂಟು ಅದ್ಭುತಗಳನ್ನು ನೋಡಿದ್ದೇನೆ. ಈಗ ಕೆರೆಗೆ ಬೆಂಕಿ ಹೊತ್ತಿಕೊಂಡಿರುವುದು 9ನೇ ಅದ್ಭುತ.

– ಅರವಿಂದ ಲಿಂಬಾವಳಿ, ಶಾಸಕ

*

ಕೆರೆಗಳ ಸಂರಕ್ಷಣೆ ರಾಜ್ಯ ಸರ್ಕಾರದ ಕರ್ತವ್ಯ. ಆದರೆ, ಅದು ಕೆರೆಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ. ಕೆರೆಗೆ ₹ 30 ಕೋಟಿ ಖರ್ಚು ಮಾಡಿರುವುದಾಗಿ ಹೇಳುತ್ತಿದ್ದಾರೆ. ಅದರಿಂದ ಅಭಿವೃದ್ಧಿ ಎಲ್ಲಾಯಿತು? ಅಷ್ಟು ಹಣ ಎಲ್ಲಿ ಹೋಯಿತು ಎಂಬುದೇ ಗೊತ್ತಿಲ್ಲ.

– ಪಿ.ಸಿ.ಮೋಹನ್, ಸಂಸದ

**

ಮೂವರು ಶಾಸಕರಲ್ಲೂ ಗೊಂದಲ

ಕೆರೆ ಯಾರ ವ್ಯಾಪ್ತಿಗೆ ಸೇರಿದ್ದು ಎಂಬ ಬಗ್ಗೆ  ಶಾಸಕರಲ್ಲೇ ಗೊಂದಲ ಇದೆ.ಬೆಂಕಿ ಕಾಣಿಸಿಕೊಂಡಿದ್ದ ಕೆರೆಯ ಭಾಗವು ಕೋರಮಂಗಲ, ಮಹದೇವಪುರ, ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆದರೆ, ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಶಾಸಕರು, ಒಬ್ಬರನ್ನೊಬ್ಬರು ದೂರಿದರು.

‘ಆ ಕೆರೆ ನಮಗೆ ಬರುವುದಿಲ್ಲ. ಆ ಶಾಸಕರಿಗೆ ಬರುತ್ತದೆ. ಅವರನ್ನೇ ಕೇಳಿ’ ಎಂದೇ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಸ್ಥಳಕ್ಕೆ ಸಂಜೆ ಬಂದು ಹೋದರು.

ಕೆರೆ ಸಂರಕ್ಷಣೆ ಹೋರಾಟಗಾರ ಜಗದೀಶ್‌ ರೆಡ್ಡಿ, ‘ಶಾಸಕರೆಲ್ಲರೂ ನಮ್ಮ ರಾಜ್ಯದವರೇ ಎಂಬುದನ್ನು ಮರೆಯಬಾರದು. ಬೆಳ್ಳಂದೂರು ಕೆರೆ ರಾಜ್ಯದಲ್ಲೇ ಇದ್ದು, ಅದರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

**

ಸೇನೆಯ ಅಪ್ಪಣೆ ಇಲ್ಲದೇ ಜಾಗ ತಲುಪಲಾಗದು

ಅಗ್ನಿ ಅವಘಡ ಸಂಭವಿಸಿದ್ದು ಬೆಳ್ಳಂದೂರು ಕೆರೆಯಲ್ಲಾದರೂ ಘಟನಾ ಸ್ಥಳವು ಬೆಳ್ಳಂದೂರಿನಿಂದ 8 ಕಿ.ಮೀ(ರಸ್ತೆ ಮಾರ್ಗ) ದೂರವಿದೆ. ಕೋರಮಂಗಲ– ದೊಮ್ಮಲೂರು ರಸ್ತೆಯ ಮಧ್ಯದಲ್ಲಿರುವ ಶ್ರೀನಿವಾಗಿಲು (ಅಗರ ಹಿಂಭಾಗ) ಬಳಿಯ ಸೇನೆಯ ತರಬೇತಿ ಶಿಬಿರದ (ಎಎಸ್‌ಸಿ) ಜಾಗದ ಮೂಲಕ ಈ ಘಟನಾ ಸ್ಥಳಕ್ಕೆ ಹೋಗಲು ದಾರಿ ಇದೆ.

ಶುಕ್ರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಬಿಟ್ಟರೆ, ಬೇರೆ ಯಾರನ್ನೂ ಒಳಗೆ ಬಿಟ್ಟಿರಲಿಲ್ಲ. ಕಚ್ಛಾ ರಸ್ತೆಯಲ್ಲಿ ಸಾಗಿ ಘಟನಾ ಸ್ಥಳ ಸೇರಬೇಕು. ಈ ಜಾಗದಲ್ಲಿ ಪೊದೆ, ಹುಲ್ಲೇ ಜಾಸ್ತಿ ಇದೆ. ಅದರಿಂದಾಗಿ ಕಾರ್ಯಾಚರಣೆಯು ಸವಾಲಿನ ಕೆಲಸವಾಗಿತ್ತು. ಬೆಂಕಿ ಕಾಣಿಸಿಕೊಂಡಿದ್ದ ಜಾಗದಿಂದ 3 ಕಿ.ಮೀ ದೂರದಲ್ಲಿ ಜನ ವಸತಿ ಇದೆ.

‘ಆರಂಭದಲ್ಲಿ ಹೊರಗಡೆಯಿಂದ ನೀರು ತಂದೆವು. ಪದೇ ಪದೇ ದೂರ ಹೋಗಿ ನೀರು ತರಲು ಆಗಲಿಲ್ಲ. ಗಬ್ಬು ನಾರುತ್ತಿದ್ದರೂ ಕೆರೆಯ ನೀರನ್ನೇ ಅನಿವಾರ್ಯವಾಗಿ ಕಾರ್ಯಾಚರಣೆಗೆ ಬಳಸಿಕೊಂಡೆವು. ಆ ನೀರಿನಿಂದ ಮೈ ಕೆರೆತ ಶುರುವಾಗಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

50 ಎಕರೆ ಪ್ರದೇಶ ಕರಕಲು: ‘ಕೆರೆಯ ತಳಭಾಗದಲ್ಲಿ ಕೊಳೆತ ವಸ್ತುಗಳು ಹೆಚ್ಚಿರುವುದರಿಂದ ರಸಾಯನಿಕಗಳು ಬಿಡುಗಡೆಯಾಗುತ್ತಿವೆ. ಅವು ರಂಧ್ರಗಳ ಮೂಲಕ ಹೊರಗೆ ಬರುತ್ತಿತ್ತು. ಕಂಡ ಕಂಡಲ್ಲೇ ಹೊಗೆ ಹಾಗೂ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಕೆರೆಯ 50 ಎಕರೆಯಷ್ಟು ಜಾಗದಲ್ಲಿದ್ದ ಹುಲ್ಲು ಹಾಗೂ ಹೂಳು ಸುಟ್ಟು ಕರಕಲಾಗಿದೆ’ ಎಂದು ಸಿಬ್ಬಂದಿ ಹೇಳಿದರು.‌

ಹಾವು ಕಡಿತ: ಕೆರೆಯ ಸುತ್ತಲೂ ಶಸ್ತ್ರಸಜ್ಜಿತವಾಗಿ ಗಸ್ತು ತಿರುಗುತ್ತಿದ್ದ ಸಿಫಾಯಿ ಮನೋರಂಜನ್‌ ರಾಯ್‌ ಅವರಿಗೆ ಹಾವು ಕಡಿದಿದೆ. ಉರಿ ಉರಿ ಎನ್ನುತ್ತಿದ್ದ ಅವರನ್ನು ಸೇನೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸೇನೆ ಸಿಬ್ಬಂದಿ ಕಾಣಲಿಲ್ಲ: ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸೇನೆಯ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಸೇನೆಯ ಮುಖ್ಯಸ್ಥರು ಹೇಳಿದ್ದರು. ಆದರೆ, ಸ್ಥಳದಲ್ಲಿ ಒಬ್ಬ ಸಿಬ್ಬಂದಿಯೂ ಬೆಂಕಿ ನಂದಿಸುತ್ತಿರುವುದು ಕಾಣಲಿಲ್ಲ.  ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದಿದ್ದ ಅವರು ಇಲ್ಲಿಗೆ ಬಂದು ಹೋಗುವವರ ಮೇಲಷ್ಟೇ ಕಣ್ಣಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.