ADVERTISEMENT

76 ಕಿ.ಮೀ ಹೊಸ ಮಾರ್ಗ

ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಸಕ್ಸೇನಾ

​ಪ್ರಜಾವಾಣಿ ವಾರ್ತೆ
Published 26 ಮೇ 2015, 19:28 IST
Last Updated 26 ಮೇ 2015, 19:28 IST

ಬೆಂಗಳೂರು: ‘ಪ್ರಸಕ್ತ ಸಾಲಿನಲ್ಲಿ 76 ಕಿ.ಮೀ ಹೊಸ ರೈಲು ಮಾರ್ಗ ಮತ್ತು 76 ಕಿ.ಮೀ ಜೋಡಿಹಳಿ ಮಾರ್ಗ ನಿರ್ಮಿಸುವ ಗುರಿ ಹೊಂದಲಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಸಕ್ಸೇನಾ ಹೇಳಿದರು.

ನಗರ ರೈಲು ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರು ಮತ್ತು ಬಳಕೆದಾರರ ‘ಪಾಕ್ಷಿಕ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಯಲಹಂಕ – ಪೆನುಗೊಂಡ (120 ಕಿ.ಮೀ), ತುಮಕೂರು – ಅರಸೀಕೆರೆ (96 ಕಿ.ಮೀ), ಚಿಕ್ಕಜಾಜೂರು – ಹುಬ್ಬಳ್ಳಿ (190 ಕಿ.ಮೀ) ಮತ್ತು ಲೋಂಡಾ – ಮಿರಜ್‌ (186 ಕಿ.ಮೀ) ಜೋಡಿಹಳಿ ನಿರ್ಮಾಣ ಯೋಜನೆಗಳಿಗೆ ಈ ಸಾಲಿನಲ್ಲಿ ಅನುಮೋದನೆ ದೊರೆತಿದೆ. ಮುಂದಿನ ಐದು ವರ್ಷಗಳಲ್ಲಿ ಅವುಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಈ ಸಾಲಿನಲ್ಲಿ ನೈರುತ್ಯ ರೈಲ್ವೆಯ ಪ್ರಯಾಣಿಕರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₨80 ಕೋಟಿಗೂ ಅಧಿಕ ಅನುದಾನ ದೊರೆತಿದೆ.  ಅದರಿಂದ ಫ್ಲ್ಯಾಟ್‌ಫಾರಂ ವಿಸ್ತರಣೆ, ಮೇಲ್ಚಾವಣಿ, ಲಿಫ್ಟ್‌, ಎಸ್ಕಲೇಟರ್, ಕುಡಿಯುವ ನೀರು, ವಿಶ್ರಾಂತಿ ಗೃಹ.. ಇತ್ಯಾದಿ ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದರು.

‘2,200 ಬೋಗಿಗಳ ಪೈಕಿ ಈಗಾಗಲೇ 320 ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ. 2020ರ ವೇಳೆಗೆ ಎಲ್ಲ ಬೋಗಿಗಳಿಗೂ  ಜೈವಿಕ ಶೌಚಾಲಯ ಅಳವಡಿಸುವ ಗುರಿ ಹೊಂದಿದ್ದೇವೆ’ ಎಂದು ತಿಳಿಸಿದರು. ‘ನಗರ ರೈಲು ನಿಲ್ದಾಣದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೈಯಪ್ಪನಹಳ್ಳಿ ರೈಲು ನಿಲ್ದಾಣವನ್ನು ದೊಡ್ಡ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ. ಆ ಯೋಜನೆಯ ಕಾರ್ಯ ಸಾಧ್ಯತೆ ಪರಿಶೀಲಿಸಲು ಚೀನಾ ರೈಲ್ವೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದರು.

ಜೋಡಿಹಳಿ ಈ ವರ್ಷ ಪೂರ್ಣ
ನೈರುತ್ಯ ರೈಲ್ವೆ ಮುಖ್ಯ ಎಂಜಿನಿಯರ್‌ (ನಿರ್ಮಾಣ) ರವೀಂದ್ರನಾಥ್‌ ರೆಡ್ಡಿ ಮಾತನಾಡಿ, ‘ಬೆಂಗಳೂರು – ಮೈಸೂರು ಜೋಡಿಹಳಿ ಯೋಜನೆ ಪ್ರಗತಿಯಲ್ಲಿದೆ. 139 ಕಿ.ಮೀ ಉದ್ದದ ಮಾರ್ಗದ ಪೈಕಿ ಈಗಾಗಲೇ 110 ಕಿ.ಮೀ ನಿರ್ಮಾಣ ಕಾರ್ಯ ಮುಗಿದಿದೆ. ಬಾಕಿ ಇರುವ 29 ಕಿ.ಮೀ  ಮಾರ್ಗವನ್ನು ಈ ವರ್ಷದಲ್ಲಿ  ಪೂರ್ಣಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

‘ಈ ಮಾರ್ಗದಲ್ಲಿ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಶಸ್ತ್ರಾಗಾರವನ್ನು ಸ್ಥಳಾಂತರಿಸುವ ಯೋಜನೆಯ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ನವೆಂಬರ್‌ ನಂತರ ಶಸ್ತ್ರಾಗಾರ ಸ್ಥಳಾಂತರ ಕಾರ್ಯ ಆರಂಭವಾಗಲಿದೆ’ ಎಂದು ಹೇಳಿದರು. ‘ಶ್ರವಣಬೆಳಗೊಳ, ಕುಣಿಗಲ್‌ ಮಾರ್ಗವಾಗಿ ನಿರ್ಮಿಸುತ್ತಿರುವ ಹಾಸನ – ಬೆಂಗಳೂರು 167 ಕಿ.ಮೀ ಉದ್ದದ ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 139 ಕಿ.ಮೀ.ನಷ್ಟು ಕೆಲಸ ಮುಗಿದಿದೆ. ಇನ್ನುಳಿದ 28 ಕಿ.ಮೀ  ಕಾಮಗಾರಿ ಮುಂದಿನ ವರ್ಷದ ಮಾರ್ಚ್‌ ಒಳಗೆ ಪೂರ್ಣಗೊಳಿಸಲಾಗುತ್ತದೆ. ಈ ಮಾರ್ಗದ ಸಂಚಾರ ಆರಂಭವಾದರೆ ಹಾಸನಕ್ಕೆ ತೆರಳುವ ರೈಲು ಪ್ರಯಾಣಿಕರಿಗೆ 2 ಗಂಟೆ  ಸಮಯ ಉಳಿತಾಯವಾಗಲಿದೆ’ ಎಂದು ರವೀಂದ್ರನಾಥ್‌  ತಿಳಿಸಿದರು.

ಕಾರ್ಯಕ್ರಮದಲ್ಲಿ  ಕಳೆದ ವರ್ಷದಲ್ಲಿ  ನೈರುತ್ಯ ರೈಲ್ವೆ ನಡೆಸಿದ ಸ್ವಚ್ಛತಾ ಕಾರ್ಯಕ್ರಮಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಸಕ್ಸೇನಾ ಅವರು ಪ್ಯಾಸೆಂಜರ್‌ ರೈಲಿನಲ್ಲಿ ತುಮಕೂರು ವರೆಗೆ ಪ್ರಯಾಣಿಸಿ ಪ್ರಯಾಣಿಕರು ಕುಂದುಕೊರತೆಗಳನ್ನು ಆಲಿಸಿದರು.

ಮಹಿಳೆಯರಿಗಾಗಿ ಡಾರ್ಮಿಟ್ರಿ
ನಗರ ರೈಲು ನಿಲ್ದಾಣದ ಪ್ರವೇಶ ಸಂಕೀರ್ಣದಲ್ಲಿರುವ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಮಹಿಳೆಯರ ಡಾರ್ಮಿಟ್ರಿ ಯನ್ನು ಸಕ್ಸೇನಾ ಅವರು ಉದ್ಘಾಟಿಸಿದರು.

‘ಹೊರ ನಗರಗಳಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಈ ಡಾರ್ಮಿಟ್ರಿಯಲ್ಲಿ 16 ಹಾಸಿಗೆಗಳಿವೆ. ಶೌಚಾಲಯ ವ್ಯವಸ್ಥೆ ಇದೆ.  ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಹಿಳಾ ಮೇಲ್ವಿಚಾರಕರು ಮತ್ತು ರೈಲ್ವೆ ಪೊಲೀಸ್‌ ಭದ್ರತೆ ಇದೆ. ಪ್ರತಿದಿನಕ್ಕೆ  ₨ 200 ಬಾಡಿಗೆ ನಿಗದಿಪಡಿ ಸಲಾಗಿದೆ’ ಎಂದು  ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.