ADVERTISEMENT

800 ವರ್ಷಗಳ ನಂತರ ಇಂಗ್ಲಿಷ್‌ನಲ್ಲಿ ಹರಿಶ್ಚಂದ್ರ ಕಾವ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 19:42 IST
Last Updated 16 ಜನವರಿ 2017, 19:42 IST
ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅವರು ‘ದಿ ಲೈಫ್ ಆಫ್ ಹರಿಶ್ಚಂದ್ರ’ ಪುಸ್ತಕ ಬಿಡುಗಡೆ ಮಾಡಿದರು. ಅನುವಾದಕಿ ವನಮಾಲಾ ವಿಶ್ವನಾಥ್‌, ಎಂಸಿಎಲ್‌ಐ ಸಂಪಾದಕೀಯ ಮಂಡಳಿ ಸದಸ್ಯ ಸುನಿಲ್‌ ಶರ್ಮಾ ಮತ್ತು ಸುಧಾ ಮೂರ್ತಿ ಇದ್ದರು –ಪ್ರಜಾವಾಣಿ ಚಿತ್ರ
ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅವರು ‘ದಿ ಲೈಫ್ ಆಫ್ ಹರಿಶ್ಚಂದ್ರ’ ಪುಸ್ತಕ ಬಿಡುಗಡೆ ಮಾಡಿದರು. ಅನುವಾದಕಿ ವನಮಾಲಾ ವಿಶ್ವನಾಥ್‌, ಎಂಸಿಎಲ್‌ಐ ಸಂಪಾದಕೀಯ ಮಂಡಳಿ ಸದಸ್ಯ ಸುನಿಲ್‌ ಶರ್ಮಾ ಮತ್ತು ಸುಧಾ ಮೂರ್ತಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಘವಾಂಕ ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದ ಹರಿಶ್ಚಂದ್ರನ ಕಾವ್ಯ 800 ವರ್ಷಗಳ ನಂತರ ಇಂಗ್ಲಿಷ್‌ಗೆ  ಅನುವಾದಗೊಂಡಿದೆ. ನಗರದಲ್ಲಿ ಸೋಮವಾರ ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅವರು ದಿ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ (ಎಂಸಿಎಲ್ಐ) ಪ್ರಕಟಿಸಿದ ‘ದಿ ಲೈಫ್ ಆಫ್  ಹರಿಶ್ಚಂದ್ರ’ ಪುಸ್ತಕ ಬಿಡುಗಡೆ ಮಾಡಿದರು.

ಲೇಖಕಿ ವನಮಾಲಾ ವಿಶ್ವನಾಥ್‌ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಅಲ್ಲಲ್ಲಿ ಪದ್ಯದ ಸೊಗಡನ್ನು ಉಳಿಸಿಕೊಂಡು ಗದ್ಯ ಸ್ವರೂಪದಲ್ಲಿ ಹರಿಶ್ಚಂದ್ರ ಕಾವ್ಯ ರೂಪಗೊಂಡಿದೆ. ಒಟ್ಟು 640 ಪುಟಗಳ ಈ ಕೃತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ರಾಘವಾಂಕನ ಪದ್ಯಗಳಿವೆ. ಈ ಮೂಲಕ 13ನೇ ಶತಮಾನದ ನಡುಗನ್ನಡದ ಕನ್ನಡ ಸಾಹಿತ್ಯ ಇಂಗ್ಲಿಷ್‌ನಲ್ಲಿ ಘಮಿಸುತ್ತಿದೆ.

‘ಲಕ್ಷ್ಮಣನನ್ನು ಉಳಿಸಲು ಬೇಕಾಗುವ ಔಷಧೀಯ ಸಸ್ಯಕ್ಕಾಗಿ ಹನುಮಂತ ಹೇಗೆ ಸಂಜೀವಿನಿ ಪರ್ವತ ಹೊತ್ತು ತರುತ್ತಾನೆ ಅದೇ ಸ್ಥಿತಿ ಶಾಸ್ತ್ರೀಯ ಸಾಹಿತ್ಯವನ್ನು ಅನುವಾದಿಸುವವರದ್ದಾಗಿದೆ’ ಎಂದು ವನಮಾಲಾ ಅಭಿಪ್ರಾಯಪಟ್ಟರು.

‘ಸಮಕಾಲೀನ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷಾಂತರಿಸುವುದು ಕಷ್ಟ ವಾಗಿರುವಾಗ, ನಡುಗನ್ನಡದ ಹರಿ ಶ್ಚಂದ್ರ ಕಾವ್ಯವನ್ನು ಇಂಗ್ಲಿಷ್‌ಗೆ ಅನುವಾ ದಿಸಿದ್ದು ನಿಜಕ್ಕೂ ಸವಾಲು’ ಎಂದರು.

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ‘ನಾನು ಹತ್ತು ವರ್ಷದವಳಿದ್ದಾಗ ನನ್ನ ತಾಯಿ ರಾಘವಾಂಕನ ಷಟ್ಪದಿಗಳನ್ನು ಕಲಿಸಿದರು. ಆಗ ಅವರು ಕಲಿಸಲಿಲ್ಲ ಎಂದಾಗಿದ್ದರೆ, ದೊಡ್ಡವಳಾದ ನಂತರ ಅದನ್ನು ಇಷ್ಟಪಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

ಎ.ಆರ್.ಕೃಷ್ಣಶಾಸ್ತ್ರಿ, ಟಿ.ಎಸ್.ವೆಂಕಣ್ಣಯ್ಯ ಅವರು ಸಂಪಾದಿಸಿದ್ದರು. ಪಂಡಿತ್ ಬಸಪ್ಪ ಮತ್ತು ಬಸವಾರಾಧ್ಯ ಅವರು ಹರಿಶ್ಚಂದ್ರ ಕಾವ್ಯದ 728 ಪದ್ಯಗಳನ್ನು ಸಂಗ್ರಹ ರೂಪದಲ್ಲಿ ಮುದ್ರಿಸಿದ್ದರು.  ಈ ಕಾವ್ಯ ಬಹಳಷ್ಟು ಬಾರಿ ಹಳೆಗನ್ನಡದಿಂದ ಕನ್ನಡಕ್ಕೆ ಅನುವಾದವಾಗಿದೆ.

ಎರಡು ಸಾವಿರ ವರ್ಷಗಳಷ್ಟು ಹಿಂದಿನ ಭಾರತೀಯ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಉದ್ದೇಶದಿಂದ ಇನ್ಫೊಸಿಸ್‌ನ ಸಹ ಸ್ಥಾಪಕ ಎನ್. ಆರ್.ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಎಂಸಿಎಲ್ಐ ಹುಟ್ಟು ಹಾಕಿದ್ದಾರೆ.

ಹೊಸ ತಲೆಮಾರಿನ ಓದುಗರಿಗೆ ಶಾಸ್ತ್ರೀಯ ಸಾಹಿತ್ಯ ಸುಲಭವಾಗಿ ತಲುಪಬೇಕೆಂದರೆ ಅನುವಾದ ಅಗತ್ಯ. ಅದಕ್ಕಾಗಿಯೇ ಪ್ರಾದೇಶಿಕ ಭಾಷೆಗಳಲ್ಲಿರುವ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಯೋಜನೆ ಪ್ರಾರಂಭವಾಗಿದೆ.

ಈಗಾಗಲೇ ಎರಡು ಸರಣಿಗಳಲ್ಲಿ ಪಾಳಿ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಬಂಗಾಳಿ, ಮರಾಠಿ, ಸಿಂಧಿ ಮತ್ತು ಉರ್ದು ಭಾಷೆಗಳ ಕೃತಿಗಳು ಇಂಗ್ಲಿಷ್‌ಗೆ ಅನುವಾದ ಗೊಂಡಿವೆ.ಈ ಯೋಜನೆಗೆ ಎಂಸಿಎಲ್‌ಐ ಜತೆಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸಹ ಯೋಗವಿದೆ. 2015ರಲ್ಲಿ ಮೊದಲ ಸರಣಿಯಲ್ಲಿ ಐದು  ಕೃತಿಗಳು, 2016ರಲ್ಲಿ ಎರಡನೇ ಸರಣಿಯಲ್ಲಿ ನಾಲ್ಕು ಕೃತಿಗಳು ಮುದ್ರಣಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.