ADVERTISEMENT

ಒತ್ತುವರಿ ತೆರವು ನಿಲ್ಲಿಸಿದರು –ಪ್ರಕರಣ ಕೈಬಿಟ್ಟರು!

ರಾಜಕಾಲುವೆ ಒತ್ತುವರಿ * ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ * ಬಿ–ವರದಿ ಸಲ್ಲಿಸಿದ ಬಿಎಂಟಿಎಫ್‌

ಪಿ.ವಿ.ಪ್ರವೀಣ್‌ ಕುಮಾರ್‌
Published 28 ಜುಲೈ 2018, 20:02 IST
Last Updated 28 ಜುಲೈ 2018, 20:02 IST
   

ಬೆಂಗಳೂರು: 2016ರಲ್ಲಿ ಉತ್ಸಾಹದಿಂದಲೇ ಆರಂಭಿಸಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಅರ್ಧದಲ್ಲೇ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಯೂ ಹಳ್ಳ ಹಿಡಿದಿದೆ.

ರಾಜಕಾಲುವೆ ಒತ್ತುವರಿಗೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಪಾಲಿಕೆ ಅಧಿಕಾರಿಗಳ ವಿರುದ್ಧ ಆಯುಕ್ತ ಮಂಜುನಾಥ ಪ್ರಸಾದ್‌ ಅವರು ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದ ತನಿಖೆ ನಡೆಸಿರುವ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಅಧಿಕಾರಿಗಳು ಬಿ–ವರದಿ ಸಲ್ಲಿಸಿದ್ದಾರೆ. ‘ತಪ್ಪು ತಿಳಿವಳಿಕೆಯಿಂದ ದೂರು ನೀಡಲಾಗಿದೆ’ ಎಂದು ಅವರು ಷರಾ ಬರೆದಿದ್ದಾರೆ.

2016ರಲ್ಲಿ ನಗರದಲ್ಲಿ ನೆರೆ ಹಾವಳಿ ಉಂಟಾದಾಗ ಮುಖ್ಯ ಕಾರ್ಯದರ್ಶಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿತ್ತು. ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದರಿಂದ ಹಾಗೂ ಕಾಲುವೆಗಳನ್ನು ಸ್ಥಳಾಂತರ ಮಾಡಿದ್ದರಿಂದ ನೀರಿನ ಸಹಜ ಹರಿವಿಗೆ ತಡೆ ಉಂಟಾಗಿರುವುದು ತಂಡದ ಗಮನಕ್ಕೆ ಬಂದಿತ್ತು. ಬಿಬಿಎಂಪಿ ಅಧಿಕಾರಿಗಳು ಕಾನೂನುಬಾಹಿರವಾಗಿ ನಕ್ಷೆ ಮಂಜೂರಾತಿ ಮಾಡಿ, ಸ್ವಾಧೀನ ಪ್ರಮಾಣ ನೀಡಿ ಮನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದು ಕಂಡುಬಂದಿತ್ತು.

ADVERTISEMENT

ನೆರೆ ಹಾವಳಿ ಕುರಿತು 2016ರ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅದರ ಪ್ರಕಾರ ಬಿಬಿಎಂಪಿ ಆಯುಕ್ತರು ಬಿಬಿಎಂಪಿ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಎಸ್‌.ಮೃತ್ಯುಂಜಯ, ನಗರ ಯೋಜನೆ ಜಂಟಿ ನಿರ್ದೇಶಕ ಟಿ.ನಟರಾಜು ಹಾಗೂ ಹೆಚ್ಚುವರಿ ನಿರ್ದೇಶಕ (ನಿವೃತ್ತ) ಚೌಡೇಗೌಡ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

‘ಮುಖ್ಯಮಂತ್ರಿ ಸೂಚನೆ ಮೇರೆಗೆ ಸ್ವತಃ ಬಿಬಿಎಂಪಿ ಆಯುಕ್ತರೇ ದೂರು ನೀಡಿದ್ದ ಪ್ರಕರಣದಲ್ಲೂ ಬಿಎಂಟಿಎಫ್‌ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸದೆಯೇ ಬಿ–ವರದಿ ಸಲ್ಲಿಸಿದ್ದಾರೆ. ಇಡೀ ಪ್ರಕರಣದ ಮರು ತನಿಖೆ ನಡೆಯಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಒತ್ತಾಯಿಸಿದ್ದಾರೆ.

‘ರಾಜಕಾಲುವೆ ಒತ್ತುವರಿ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳ ಬಂದ ಬಳಿಕ ಬಿಬಿಎಂಪಿಯ ಉನ್ನತ ಅಧಿಕಾರಿಗಳ ವಿರುದ್ಧ ಮೊದಲ ಬಾರಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿತ್ತು. ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದಕ್ಕೆ ಎಲ್ಲ ರೀತಿಯ ಅವಕಾಶವೂ ಇತ್ತು. ದುರದೃಷ್ಟವಶಾತ್‌ ಹಾಗೆ ಆಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಕ್ರಮ ಶಂಕೆ: ‘ತಪ್ಪೆಸಗಿದರೆ ಅಧಿಕಾರಿಗಳೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತೋರಿಸಲು ಅವಕಾಶವಿದ್ದ ಅಪರೂಪದ ಪ್ರಕರಣವಿದು. ಎಲ್ಲ ಸಾಕ್ಷ್ಯಗಳಿದ್ದರೂ ಬಿಎಂಟಿಎಫ್‌ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ತನಿಖೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ’ ಎಂದು ಅವರು ಆರೋಪಿಸಿದರು.

‘ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಲೇ ಬೇಕು. ಈ ಪ್ರಕರಣದ ಮರುತನಿಖೆ ನಡೆಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ದೂರು ನೀಡುತ್ತೇನೆ’ ಎಂದರು.

**

ಬಡವರನ್ನು ಮಾತ್ರ ಒಕ್ಕಲೆಬ್ಬಿಸಲಾಗಿದೆ. ಒತ್ತುವರಿ ಮಾಡಿದ ಬಿಲ್ಡರ್‌ಗಳು ಹಾಗೂ ತಪ್ಪೆಸಗಿದ ಅಧಿಕಾರಿಗಳನ್ನು ರಕ್ಷಿಸುವ ಷಡ್ಯಂತ್ರ ನಡೆದಿದೆ. ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಕೇವಲ ನಾಟಕ
–ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ

**

ಮೇಲ್ಮನವಿ ಸಲ್ಲಿಸುತ್ತೇನೆ: ಆಯುಕ್ತ

‘ಪಾಲಿಕೆ ಅಧಿಕಾರಿಗಳು ತಪ್ಪೆಸಗಿದ ಬಗ್ಗೆ ಸಾಕಷ್ಟು ಪುರಾವೆಗಳು ಇದ್ದುದರಿಂದಲೇ ನಾನು ಅವರ ವಿರುದ್ಧ ಬಿಎಂಟಿಎಫ್‌ನಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದೆ. ಈ ಪ್ರಕರಣ ಸಂಬಂಧ ಬಿಎಂಟಿಎಫ್‌ ಅಧಿಕಾರಿಗಳು ಅದು ಹೇಗೆ ಬಿ–ವರದಿ ಸಲ್ಲಸಿದರೋ ತಿಳಿಯುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ, ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.