ADVERTISEMENT

ಶತ ಚಂಡಿಕಾ ಮಹಾಯಾಗ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 19:30 IST
Last Updated 5 ಸೆಪ್ಟೆಂಬರ್ 2018, 19:30 IST
ವಾಮನಾಶ್ರಮ ಸ್ವಾಮೀಜಿ
ವಾಮನಾಶ್ರಮ ಸ್ವಾಮೀಜಿ   

ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದೀಪುರದಲ್ಲಿರುವ ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮ ಮಠದ ಆಶ್ರಯದಲ್ಲಿ ಗುರುವಾರ ಮತ್ತು ಶುಕ್ರವಾರ ನಗರದ ಮಲ್ಲೇಶ್ವರಂನ ವಾಸವೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶತ ಚಂಡಿಕಾಯಾಗವನ್ನು ಆಯೋಜಿಸಿದೆ.

ಗುರುವಾರ ಬೆಳಿಗ್ಗೆ 8 ಕ್ಕೆ ಪ್ರಧಾನ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹವಚನ, ಸಪ್ತಶತೀ ಪಾರಾಯಣ ಇರುತ್ತದೆ. ಸಂಜೆ 4.30 ಕ್ಕೆ ಪಾರಾಯಣ,ಜಪ, ಅರುಣಿ ಮಥನ ಪೂರ್ವಕ, ಅಗ್ನಿ ಜನನ ಇರುತ್ತದೆ. ಸೆ.7 ರಂದು ಬೆಳಿಗ್ಗೆ 6.30 ರಿಂದ ಶತ ಚಂಡಿಕಾ ಹವನ ಪ್ರಾರಂಭವಾಗುತ್ತದೆ. ಬೆಳಿಗ್ಗೆ 11 ಕ್ಕೆ ವಸೋರ್ಧಾರಾ, ಪೂರ್ಣಾಹುತಿ, ಕುಮಾರಿಕಾ ಪೂಜನ ಸುಮಂಗಲಿ ಪೂಜೆ, ಫಲ ಮಂತ್ರಾಕ್ಷತೆ ಮತ್ತು ಅನ್ನ ಸಂತರ್ಪಣೆ ಇದೆ. ಈ ಮಹಾಯಾಗದಲ್ಲಿ ಭಾಗವಹಿಸಲು ಇಚ್ಛಿಸುವವರು ದೂರವಾಣಿ ಸಂಖ್ಯೆ 9663871717, 9920701145 ಸಂಪರ್ಕಿಸಬಹುದು.

ಹಳದೀಪುರ ಮಠ ಸಂಕ್ಷಿಪ್ತ ಇತಿಹಾಸ

ADVERTISEMENT

ಹಳದೀಪುರ ಮಠ ವೈಶ್ಯ ಕುಲ ಗುರು ಮಠವಾಗಿದೆ. ಸುಮಾರು 650 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದಕ್ಕೂ ಮೊದಲು ಈ ಮಠ ವಾರಾಣಸಿ (ಕಾಶಿ)ಯಲ್ಲಿತ್ತು. ಆದಿ ಶಂಕರಾಚಾರ್ಯರು ಈ ಮಠವನ್ನು ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಮೊಘಲರ ಕಾಲದಲ್ಲಿ ಆಕ್ರಮಣದಿಂದಾಗಿ ವೈಶ್ಯ ಕುಲಗುರು ಮಠದ ಸ್ವಾಮೀಜಿಯವರು ದಕ್ಷಿಣಕ್ಕೆ ವಲಸೆ ಬಂದರು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಗೋಕರ್ಣ ಕ್ಷೇತ್ರಕ್ಕೆ ಬಂದು ಸ್ವಾಮೀಜಿ ನೆಲೆಸಿದರು. ಬಳಿಕ ಕೆಳದಿಯ ರಾಣಿ ಚೆನ್ನಮ್ಮ ಅವರು ಹಳದೀಪುರದಲ್ಲಿ ಮಠಕ್ಕೆ ಸಾಕಷ್ಟು ಜಮೀನು ನೀಡಿ, ಮಠ ಸ್ಥಾಪನೆಗೆ ನೆರವು ನೀಡಿದರು.

ಬ್ರಿಟಿಷ್‌ ಮತ್ತು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಯಿಂದ ಮಠದಲ್ಲಿ 1882 ರಲ್ಲಿ ಗುರುಪರಂಪರೆ ಸ್ಥಗಿತಗೊಂಡಿತು. ಆಗ ಪೀಠಾಧಿಪತಿ ಆಗಿದ್ದವರು ಶ್ರೀಶಾಂತಾಶ್ರಮ ಮಹಾಸ್ವಾಮೀಜಿ(3). ಸಮಾಜದ ಬಾಂಧವರು ಗುರುಗಳ ನೆರವಿಗೆ ನಿಲ್ಲಲಿಲ್ಲ. ಆಗ ಬೇರೆ ದಾರಿ ಇಲ್ಲದೆ, ಸಾಲ ಪಡೆದು ಮಠವನ್ನು ನಡೆಸುವ ಸ್ಥಿತಿ ಬಂದಿತು. ಸಾಲ ನೀಡಿದ ವ್ಯಕ್ತಿ ಹಣ ವಾಪಸ್‌ ಕೊಡುವಂತೆ ಪೀಡಿಸಲಾರಂಭಿಸಿದ. ಹಣಕ್ಕೆ ಬದಲು ಮಠದ ಜಾಗವನ್ನು ಒತ್ತಾಯಪೂರ್ವಕವಾಗಿ ತನ್ನ ಹೆಸರಿಗೆ ಬರೆಸಿಕೊಂಡ. ಇದರಿಂದ ನೊಂದುಕೊಂಡ ಗುರುಗಳು 100 ವರ್ಷಗಳ ಕಾಲ ಈ ಸಮಾಜಕ್ಕೆ ಗುರುಗಳ ಅನುಗ್ರಹ ಸಿಗುವುದಿಲ್ಲ ಎಂದು ಹೇಳಿ 1882ರಲ್ಲಿ ಜಲ ಸಮಾಧಿ ಸ್ವೀಕರಿಸಿದರು. ಸಮಾಜದ ಪ್ರಮುಖರ ಹಲವು ದಶಕಗಳ ಪ್ರಯತ್ನ 1992 ರಲ್ಲಿ ಫಲ ನೀಡಿತು. ಗುರುಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಉತ್ತರಾಧಿಕಾರಿಯನ್ನಾಗಿ ಕೇರಳದ ಕೊಚ್ಚಿನ್‌ನ ಉಪೇಶ್‌ ಕುಮಾರ್ ಬಾಬು ಎಂಬ ಬಾಲಕನನ್ನು ಆಯ್ಕೆ ಮಾಡಲಾಯಿತು. ಈ ಬಾಲಕನಿಗೆ ಶೃಂಗೇರಿ ಜಗದ್ಗುರು ಶ್ರೀಭಾರತೀ ತೀರ್ಥರ ಮಾರ್ಗದರ್ಶನದಲ್ಲಿ ವೇದ, ವೇದಾಂತ, ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣ ದೊರೆಯಿತು. 2004 ರ ಮಾರ್ಚ್‌ 8 ರಂದು ಉಪೇಶ್‌ ಕುಮಾರ್‌ ಬಾಬು ಅವರಿಗೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಮಹಾಸ್ವಾಮಿಗಳು ಸನ್ಯಾಸ ದೀಕ್ಷೆ ನೀಡಿದರು. ಶ್ರೀ ವಾಮನಾಶ್ರಮ ಸ್ವಾಮೀಜಿ ಎಂಬ ಯೋಗ ಪಟ್ಟವನ್ನೂ ನೀಡಲಾಯಿತು. 2004 ರ ಮಾರ್ಚ್‌ 12 ರಂದುಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥರು ಶ್ರೀ ವಾಮನಾಶ್ರಮ ಸ್ವಾಮಿಗಳಿಗೆ ಗುರು ಪಟ್ಟಾಭಿಷೇಕ ನೆರವೇರಿಸಿದರು.

ಬೆಂಗಳೂರಿನಲ್ಲಿ ಮೊದಲ ಚಾತುರ್ಮಾಸ್ಯ: ಶ್ರೀವಾಮನಾಶ್ರಮ ಸ್ವಾಮೀಜಿಯವರು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುತ್ತಿದ್ದಾರೆ. ಸೆ.25 ರವರೆಗೆಚಾತುರ್ಮಾಸ್ಯ ನಡೆಯಲಿದ್ದು, ದೇಶದ 300 ಕ್ಕೂ ಹೆಚ್ಚು ಪಂಗಡಗಳ ವೈಶ್ಯರು ಸ್ವಾಮೀಜಿಯವರಿಂದ ಫಲ– ಮಂತ್ರಾಕ್ಷತೆ ಪಡೆಯಬೇಕು ಎಂದು ಶ್ರೀಸಂಸ್ಥಾನ ಹಳದೀಪುರಮಠದ ಅಧ್ಯಕ್ಷ ಡಾ.ಸೂರಜ್‌ ಕಾಣೇಕರ್‌ ಮನವಿ ಮಾಡಿದ್ದಾರೆ.

ಶತ ಚಂಡಿಕಾ ಮಹಾ ಯಾಗ ಮಹತ್ವ: ಮಂಗಳ ಸ್ವರೂಪಳಾದ ಚಂಡಿಕೆಯನ್ನು ಸ್ಮರಣೆ ಮಾಡಿ,ಶತ ಚಂಡಿಕಾ ಯಾಗ ನಡೆಸುವುದರಿಂದ ಶ್ರೀದೇವಿಯು ಸರ್ವ ಇಷ್ಟಾರ್ಥಗಳ ಈಡೇರುತ್ತವೆ. ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಯನ್ನು ದೇವಿಯು ಕರುಣಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.