ADVERTISEMENT

ಶಾಲೆಗಳಿಗೆ ಬೀಗ: ಪ್ರಸ್ತಾವಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:35 IST
Last Updated 6 ಜುಲೈ 2018, 19:35 IST

ಬೆಂಗಳೂರು: ರಾಜ್ಯದಲ್ಲಿರುವ 28,847 ಸರ್ಕಾರಿ ಶಾಲೆಗಳ ವಿಲೀನಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಶಾಲೆಗಳ ವಿಲೀನ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯುವ ಪ್ರಸ್ತಾಪವನ್ನು ಮರುಪರಿಶೀಲಿಸಬೇಕು’ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಹಾಜರಾತಿ ಕಡಿಮೆಯಿರುವ ಶಾಲೆಗಳು ಮತ್ತು ಸೊರಗುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಶಿಕ್ಷಣ ತಜ್ಞರು, ಚಿಂತಕರು ಮತ್ತು ಸರ್ಕಾರ ಒಟ್ಟಾಗಿ ಚರ್ಚಿಸಿ ಕ್ರಮಕೈಗೊಳ್ಳಬೇಕು. ಅಧಿಕಾರಿಗಳ ನಿರ್ಧಾರಗಳು ಶಿಕ್ಷಣಕ್ಕೆ ಯಾವತ್ತೂ ಪೂರಕವಾಗಿರುವುದಿಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ’ ಎಂದು ಹೇಳಿದ್ದಾರೆ.

ADVERTISEMENT

‘ಮಾತೃಭಾಷಾ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸುವ ಪ್ರಯೋಗವನ್ನು ಮಹಾರಾಷ್ಟ್ರ ಸರ್ಕಾರ ಎರಡು ದಶಕ ಹಿಂದೆ ಮಾಡಿತ್ತು. ಅದರ ಪರಿಣಾಮ ಮರಾಠಿ ಭಾಷಾ ಶಾಲೆಗಳು ಮುಚ್ಚಿದವು. ನಂತರ ಆ ಯೋಜನೆಯನ್ನು ಹಿಂಪಡೆಯಲಾಯಿತು. ಹೀಗಾಗಿ ಸರ್ಕಾರ ಏಕಪಕ್ಷಿಯವಾಗಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ’ ಎಂದಿದ್ದಾರೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಸಹ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ರಾಜ್ಯ ಬಜೆಟ್‌ ಶಿಕ್ಷಣ ಕ್ಷೇತ್ರಕ್ಕೆ ಮಾರಕವಾಗಿದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ದಾಖಲಾತಿ ಹೆಚ್ಚಿಸುವ ಬಗ್ಗೆ ಚಿಂತಿಸಬೇಕಾದ ಸರ್ಕಾರ ಶಾಲೆಗಳನ್ನು ಮುಚ್ಚವ ಬಗ್ಗೆ ಯೋಜನೆ ರೂಪಿಸಿದೆ’ ಎಂದು ಹೇಳಿದ್ದಾರೆ.

‘ಒಟ್ಟು ಬಜೆಟ್‌ನ ಶಿಕ್ಷಣ ಕ್ಷೇತ್ರಕ್ಕೆಶೇ 15ರಷ್ಟು ಮೀಸಲಿಡಬೇಕು. ಆದರೆ, ಈ ಬಜೆಟ್‌ನಲ್ಲಿ ಕಳೆದ ಬಜೆಟ್‌ಗಿಂತ ಕಡಿಮೆ ಶೇ 11ರಷ್ಟು ಮಾತ್ರ ನೀಡಲಾಗಿದೆ.ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಕುಮಾರಸ್ವಾಮಿ ಅವರು ಬಸ್‌ಪಾಸಿಗೆ ಹಣ ಮೀಸಲಿಡದೆ ವಿದ್ಯಾರ್ಥಿಗಳಿಗೆ ವಂಚಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕನ್ನಡ ಗೆಳೆಯ ಬಳಗ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದು, ‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ನಿರ್ಧಾರ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸವಾಗಿದೆ’ ಎಂದು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.