ADVERTISEMENT

33 ಖಾಸಗಿ ಎಂಜಿನಿಯರಿಂಗ್ ಕಾಲೇಜು: 10,175 ಸೀಟುಗಳು ಮಾತ್ರ ಭರ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 19:37 IST
Last Updated 22 ಆಗಸ್ಟ್ 2018, 19:37 IST

ಬೆಂಗಳೂರು: ರಾಜ್ಯದ 33 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಯಾವುದೇ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ.

ಈ ಶೈಕ್ಷಣಿಕ ವರ್ಷದಲ್ಲಿಕಾಮೆಡ್‌–ಕೆಗೆ 16,236 ಸೀಟುಗಳಿದ್ದವು. ಅದರಲ್ಲಿ 10,175 ಸೀಟುಗಳು ಮಾತ್ರ ಭರ್ತಿಯಾಗಿವೆ. ಶೇ 40ರಷ್ಟು ಸೀಟುಗಳು ಹಾಗೆಯೇ ಉಳಿದಿವೆ.

ಬೇಡಿಕೆಯಿರುವ ಪ್ರತಿಷ್ಠಿತ ಆರು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾಮೆಡ್‌-ಕೆ ಕೋಟಾದಡಿ ಸೀಟುಗಳು ಭರ್ತಿಯಾಗಿವೆ. 10 ಕಾಲೇಜುಗಳಲ್ಲಿ ಶೇ 80ರಿಂದ 99ರಷ್ಟು ಹಾಗೂ 16 ಕಾಲೇಜುಗಳಲ್ಲಿ ಶೇ 50ರಿಂದ 79, ಇನ್ನೂ 10 ಕಾಲೇಜುಗಳಲ್ಲಿ ಶೇ 25ರಿಂದ ಶೇ 49.99ರಷ್ಟು ಸೀಟುಗಳಷ್ಟೇ ಭರ್ತಿಯಾಗಿವೆ.

ADVERTISEMENT

ಸೀಟು ಕೇಳುವವರಿಲ್ಲ:ಈ ವರ್ಷ ಸರ್ಕಾರಿ ಕೋಟಾದ 21 ಸಾವಿರ ಸೀಟುಗಳು ಭರ್ತಿಯಾಗದೆ ಉಳಿದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಿರಂಗಗೊಳಿಸಿದೆ.

ಒಟ್ಟು 64 ಸಾವಿರ ಸೀಟುಗಳಿಗೆ ಕೌನ್ಸೆಲಿಂಗ್‌ ನಡೆದಿತ್ತು. ಉಳಿದ ಸೀಟುಗಳನ್ನು ಭರ್ತಿ ಮಾಡಲು ಮಾಪ್‌ ಅಪ್‌ (ಉಳಿದ ಸೀಟುಗಳ ಹಂಚಿಕೆ) ಪ್ರಕ್ರಿಯೆಯನ್ನೂ ಪ್ರಾಧಿಕಾರ ನಡೆಸಿತ್ತು.

‘ಕಳೆದ ವರ್ಷವೂ ಸುಮಾರು 18 ಸಾವಿರ ಸೀಟುಗಳು ಉಳಿದಿದ್ದವು. ಕಂಪ್ಯೂಟರ್‌ ಸೈನ್ಸ್‌,ಇನ್‌ಫರ್ಮೇಷನ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌,ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್ಸ್‌,ಮೆಕ್ಯಾನಿಕಲ್‌,ಸಿವಿಲ್‌, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ವಿಷಯಗಳನ್ನು ಬಿಟ್ಟು ಬೇರೆ ಕೋರ್ಸ್‌ಗಳಿಗೆ ಬೇಡಿಕೆಯೇ ಇಲ್ಲ’ ಎಂದುಕೆಇಎ ಆಡಳಿತಾಧಿಕಾರಿ ಎಸ್‌.ಎನ್‌.ಗಂಗಾಧರಯ್ಯ ತಿಳಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.