ADVERTISEMENT

ಅಂತರ್ಜಲಮಟ್ಟ ಹೆಚ್ಚಳ: ಝರಿಗಳಿಗೆ ಜೀವಕಳೆ

ಸಹಜ ಸ್ಥಿತಿಗೆ ಅಂತರ್ಜಲ ಮಟ್ಟ ಉಕ್ಕುತ್ತಿರುವ ನೀರಿನ ಸೆಲೆಗಳು

ಚಂದ್ರಕಾಂತ ಮಸಾನಿ
Published 19 ಜನವರಿ 2017, 5:40 IST
Last Updated 19 ಜನವರಿ 2017, 5:40 IST
ಅಂತರ್ಜಲಮಟ್ಟ ಹೆಚ್ಚಳ: ಝರಿಗಳಿಗೆ ಜೀವಕಳೆ
ಅಂತರ್ಜಲಮಟ್ಟ ಹೆಚ್ಚಳ: ಝರಿಗಳಿಗೆ ಜೀವಕಳೆ   

ಬೀದರ್: ಜಿಲ್ಲೆಯಲ್ಲಿ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲಮಟ್ಟ ಇದೀಗ ಸಹಜ ಸ್ಥಿತಿಗೆ ಬಂದಿದೆ. ನಗರದ ಧಾರ್ಮಿಕ ಕ್ಷೇತ್ರಗಳ ಪುರಾತನ ಝರಿಗಳು ನಿರಂತರವಾಗಿ ಹರಿಯುತ್ತಿವೆ. ಔರಾದ್ ತಾಲ್ಲೂಕಿನ ಜಮಾಲಪುರದಲ್ಲಂತೂ ಕೊಳವೆಬಾವಿಯಿಂದ ತಾನಾಗಿಯೇ ನೀರು ಉಕ್ಕುತ್ತಿದೆ.

ಗುರುನಾನಕ ಝೀರಾದಲ್ಲಿ ಬೆಟ್ಟದ ಅಡಿಯಿಂದ ಹರಿದು ಬರುತ್ತಿರುವ ನೀರು ಕಲ್ಯಾಣಿಗೆ ಸೇರುತ್ತಿದೆ. ಗುರುನಾನಕ ಪ್ರಬಂಧಕ ಕಮಿಟಿಯು ವಸತಿಗೃಹಗಳಿಗೆ ಹಾಗೂ ಉದ್ಯಾನಕ್ಕೆ ಇದೇ ನೀರನ್ನೇ ಬಳಸಿಕೊಳ್ಳುತ್ತಿದೆ.

1972ರ ಭೀಕರ ಬರದಲ್ಲೂ ಝೀರಾದ ನೀರು ಬತ್ತಿಲ್ಲ. ಕಳೆದ ಬೇಸಿಗೆಯಲ್ಲಿ ಮಾತ್ರ ನೀರು ಹನಿ ಹನಿಯಾಗಿ ಬರುತ್ತಿತ್ತು. ಈಗಂತೂ ನೀರು ನಿರಂತರವಾಗಿ ಹರಿದು ಬರುತ್ತಿದೆ. ಭಕ್ತರು ಶ್ರದ್ಧೆಯಿಂದ ಪುಣ್ಯಸ್ನಾನ ಮಾಡುತ್ತಿದ್ದಾರೆ ಎಂದು ಗುರುನಾನಕ ಪ್ರಬಂಧಕ ಕಮಿಟಿಯ ವ್ಯವಸ್ಥಾಪಕ ದರ್ಬಾರಾ ಸಿಂಗ್‌ ಹೇಳುತ್ತಾರೆ.

ನರಸಿಂಹ ಝರಣಾ ಗುಹೆಯಲ್ಲೂ ನಿರಂತರವಾಗಿ ನೀರು ಹರಿಯುತ್ತಿದೆ. ಈ ಗುಹಾಂತರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ನಿಧಾನವಾಗಿ ಏರುತ್ತಿದೆ. ತೆಲಂಗಾಣ ಹಾಗೂ ಮಹಾರಾಷ್ಟ್ರದ ಭಕ್ತರು ಕುಟುಂಬ ಸಮೇತ ತಂಡೋಪ ತಂಡವಾಗಿ ಭೇಟಿ ನೀಡ ತೊಡಗಿದ್ದಾರೆ.

ಉಕ್ಕಿ ಹರಿಯುತ್ತಿರುವ ನೀರು: ಔರಾದ್ ತಾಲ್ಲೂಕಿನ ಜಮಾಲಪುರದ ಹೊರವಲಯದಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯಿಂದ ಆಗಸ್ಟ್‌ನಿಂದ ನೀರು ಉಕ್ಕುತ್ತಿದೆ. ನವೆಂಬರ್‌ನಲ್ಲಿ ಐದು ಅಡಿಯಷ್ಟು ನೀರು ಮೇಲಕ್ಕೆ ಚಿಮ್ಮುತ್ತಿತ್ತು. ಆಗ ಗ್ರಾಮದ ಕೆಲ ಯುವಕರು ಕೊಳವೆ ಬಾವಿಯೊಳಗೆ ಕಲ್ಲು ಹಾಕಿದರು. ಆದರೆ ಈಗಲೂ ನೀರು ತಾನಾಗಿಯೇ ಉಕ್ಕಿ ಹರಿಯುತ್ತಿದೆ.

ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಗ್ರಾಮ ಇದೆ. ಜಮಾಲಪುರದಿಂದ ಒಂದೂವರೆ ಕಿ.ಮೀ ಅಂತರದಲ್ಲಿರುವ ಕೆರೆ ಅನೇಕ ವರ್ಷಗಳ ನಂತರ ತುಂಬಿದೆ. ಹೀಗಾಗಿ ಗ್ರಾಮದ ಪರಿಸರದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಗ್ರಾಮಕ್ಕೆ ಬರುವ ಅಧಿಕಾರಿಗಳು ಅಚ್ಚರಿಯಿಂದ ಕೊಳವೆಬಾವಿ ನೋಡಿ ಹೋಗುತ್ತಿದ್ದಾರೆ. ರೈತರು ಕೊಳವೆಬಾವಿ ನೀರನ್ನು ಹೊಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಜಿಲ್ಲೆಯಲ್ಲಿ 25 ವರ್ಷದ ಸರಾಸರಿಯನ್ನು ತೆಗೆದುಕೊಂಡರೆ ವಾರ್ಷಿಕ 685 ಮಿ.ಮೀ ಮಳೆಯಾಗಬೇಕು.  2016ರಲ್ಲಿ 1,065 ಮಿ.ಮೀ. ಮಳೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್.

ಗೋಡುಮಣ್ಣಿನ (ಲೆಟ್‌ರೈಟ್) ಗುಡ್ಡದ ಮೇಲೆ ಬೀದರ್‌ ನಗರ ಇದೆ. ಆಳದಲ್ಲಿ ಕಪ್ಪು ಶಿಲೆಯ ಪದರುಗಳು ಇರುವ ಕಾರಣ ನೀರು ಹೆಚ್ಚು ಬಸಿದು ಹೋಗುವುದಿಲ್ಲ. ಭೂಮಿ ಮೇಲ್ಮೈ ನೀರನ್ನು ಎಚ್ಚರಿಕೆಯಿಂದ ಬಳಸಬೇಕು. ಎಲ್ಲರೂ ಕೊಳವೆ ಬಾವಿಗಳನ್ನು ಕೊರೆದರೆ ಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಶಬ್ಬೀರ್‌ ಅಹಮ್ಮದ್.

ಅಂತರ್ಜಲಮಟ್ಟ ಏರಿಕೆಗೆ ಕಾರಣ ಏನು ?

ಬೀದರ್‌: ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗಿದೆ. ಕಾರಂಜಾ ಜಲಾಶಯ, ಬ್ಯಾರೇಜ್, ಕೆರೆ ಹಾಗೂ ತೆರೆದ ಬಾವಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. 2015ರಲ್ಲಿ ಭಾಲ್ಕಿ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಅತಿ ಹೆಚ್ಚು ಅಂದರೆ 23.97 ಮೀಟರ್‌ ಆಳಕ್ಕೆ ಕುಸಿದಿತ್ತು.

ಬೀದರ್‌ ತಾಲ್ಲೂಕಿನಲ್ಲಿ 16.4 ಮೀಟರ್ ಆಳಕ್ಕೆ ಇಳಿದಿತ್ತು. ಮಳೆಯ ಅಭಾವದಿಂದಾಗಿ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಲೇ ಇತ್ತು. 2016ರಲ್ಲಿ ಸುರಿದ ಅತ್ಯಧಿಕ ಮಳೆಯಿಂದಾಗಿ ಅಂತರ್ಜಲ ಆರು ಮೀಟರ್‌ ಮೇಲೆ ಬಂದಿದೆ ಎಂದು ಹೇಳುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂಶಾಸ್ತ್ರಜ್ಞ ಶಬ್ಬೀರ್‌ ಅಹಮ್ಮದ್ ಹೇಳುತ್ತಾರೆ.

ADVERTISEMENT

6.9 ಟಿಎಂಸಿ ಅಡಿ ಗರಿಷ್ಠ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಕಾರಂಜಾ ಜಲಾಶಯ ಮಳೆಯ ಕೊರತೆಯಿಂದಾಗಿ 2011 ರಿಂದ ತುಂಬಿರಲಿಲ್ಲ. 2016ರ ಅಕ್ಟೋಬರ್‌ ಎರಡನೇ ವಾರದಲ್ಲಿ ಭರ್ತಿಯಾಗಿದೆ. ಪ್ರಸ್ತುತ ಜಲಾಶಯದಲ್ಲಿ 6.5 ಟಿಎಂಸಿ ಅಡಿ ನೀರು ಇದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಜಿಲ್ಲೆಯ120 ಕೆರೆಗಳ ಪೈಕಿ 36 ಕೆರೆಗಳ ಹೂಳು ತೆಗೆದ ಕಾರಣ ಅವು ಸಹ ತುಂಬಿವೆ.

ಇದು ಪ್ರಕೃತಿ ವಿಸ್ಮಯ
ಭೀಕರ ಬರದಲ್ಲೂ ಗುರುನಾನಕ ಝೀರಾದ ಝರಿ ಸಂಪೂರ್ಣ ಬತ್ತಿಲ್ಲ. ಹನಿ ಹನಿಯಾದರೂ ನೀರು ಬರುತ್ತಿತ್ತು. ಇದು ಪ್ರಕೃತಿಯ ವಿಸ್ಮಯ. ಹಾಗಾಗಿ ತೆರೆದ ಬಾವಿಗಳ ನೀರು ಬಳಸುವುದು ಸೂಕ್ತ. ಇದರಿಂದ ಅಂತರ್ಜಲಮಟ್ಟ ಕಾಯ್ದುಕೊಳ್ಳಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂಶಾಸ್ತ್ರಜ್ಞ  ಶಬ್ಬೀರ್‌ ಅಹಮ್ಮದ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.