ADVERTISEMENT

‘ಅಂತರ ಬೇಸಾಯದಿಂದ ಅತ್ಯಧಿಕ ಇಳುವರಿ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:45 IST
Last Updated 9 ಜನವರಿ 2017, 5:45 IST

ಹುಮನಾಬಾದ್: ಅಂತರ ಬೇಸಾ ಯದಿಂದ ಅತ್ಯಧಿಕ ಇಳುವರಿ ಬರುತ್ತದೆ ಎಂದು ಪ್ರಗತಿಪರ ರೈತ ಗುರುಲಿಂಗಪ್ಪ ಮೇಲ್ದೊಡ್ಡಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ದುಬಲಗುಂಡಿ ಗ್ರಾಮದ ಇರ್ಪಣ್ಣ ಹಳಿದೊಡ್ಡಿ ಅವರ ಹೊಲದಲ್ಲಿ ಭಾನುವಾರ ಏರ್ಪಡಿಸಿದ್ದ ತೊಗರಿ ಉತ್ದವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

6X3, 6X4, 4X4 ಸಾಲುಗಳ ಅಂತರದಲ್ಲಿ ತೊಗರಿ ಬಿತ್ತನೆ ಕೈಗೊಳ್ಳಬೇಕು ಮತ್ತು ಬಿತ್ತನೆ ನಂತರ 65ಮತ್ತು 85ದಿನಗಳ ಅಂತರ ಆಧರಿಸಿ, ಟೊಂಗೆಗಳ ಕೊನೆ ಕತ್ತಿರಿಸಿದಲ್ಲಿ ಗಿಡಗಳ ಕವಲೊಡೆದು ಅಧಿಕ ಟೊಂಗೆಗಳು ಮೂಡುತ್ತದೆ. ಟೊಂಗೆಗಳ ಸಂಖ್ಯೆ ಆಧರಿಸಿ, ಹೂವು ಹಾಗೂ ಕಾಯಿಗಳು ಬಿಡುತ್ತವೆ. ಕಳೆದ 2ದಶಕ ಹಿಂದೆ ಪ್ರತೀ ಎಕರೆಗೆ 4ರಿಂದ 5ಕ್ವಿಂಟಲ್‌ ಬೆಳೆದರೆ ಭಾರಿ ಖುಷಿ ಪಡುತ್ತಿದ್ದೆವು. ಈಗ ಅತ್ಯಾಧುನಿಕ ಬೇಸಾಯು ಪದ್ಧತಿ ಪರಿಣಾಮವಾಗಿ ಇಳುವರಿ ಗಣನೀಯ ಹೆಚ್ಚಿದೆ.

ಎಕರೆಗೆ 5ಕ್ವಿಂಟಲ್‌ ಬರುವುದೇ ದುರ್ಲಭವಾಗಿದ್ದ ಜಮೀನಿನಲ್ಲಿ ಇದೀಗ 10–15ಕ್ವಿಂಟಲ್‌ ತೊಗರಿ ಇಳುವರಿ ತೆಗೆಯುವ ಮೂಲಕ ಅಸಾಧ್ಯವಾದದ್ದನ್ನು ಸಾಧಿಸಿದಂತೆ ನಮ್ಮನ್ನು ನಾವು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದೇವೆ. ಅಚ್ಚರಿ ಸಂಗತಿ ಎಂದರೇ ಪಕ್ಕದ ಮಹಾರಾಷ್ಟ್ರದ ರೈತರು ಪ್ರತಿ ಎಕರೆಗೆ 20ರಿಂದ 22ಕ್ವಿಂಟಲ್‌ ಇಳುವರಿ ತೆಗೆಯುತ್ತಿದ್ದಾರೆ ಇದರರ್ಥ. ನಾವು ಪ್ರಯತ್ನಿಸಿದರೇ ಇನ್ನು ಅಧಿಕ ಇಳುವರಿ ಪಡೆಯಬಹುದು ಎಂದರು. ಈ ಎಲ್ಲದರ ಜೊತೆಗೆ ಭೂಮಿಯಲ್ಲಿ ಯಾವತ್ತೂ ತೇವಾಂಶ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಹೊಲದಲ್ಲಿ ಬೆಳೆದ ಉದ್ದು, ಹೆಸರು ಮೊದಲಾದ ಬೆಳೆ ರಾಶಿ ನಂತರ ಎಲೆ ಹಾಗೂ ಕಡ್ಡಿಗಳನ್ನು ಅಲ್ಲಿಯೇ ಹೂತಿಟ್ಟರೇ ಅದೇ ಕೊಳೆತು ಅತ್ತಮ ಗೊಬ್ಬವಾಗಿ ಭೂಮಿ ಫಲವತ್ತತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ರೈತರು  ರಾಸಾಯನಿಕ ಗೊಬ್ಬರ ಹಂತಹಂತ ಕಡಿಮೆ ಮಾಡಿ, ಸಾವಯವ ಕೃಷಿ ಕೈಗೊಳ್ಳಬೇಕು ಎಂದು ಮೇಲ್ದೊಡ್ಡಿ ಅವರು ಸಲಹೆ ನೀಡಿದರು.

ಎಕರೆಗೆ 18 ಕ್ವಿಂಟಲ್‌ ತೊಗರಿ ಉತ್ಪನ್ನ ಭರವಸೆ ಹೊತ್ತು ತೊಗರಿ ಉತ್ಸವ ಆಯೋಜಕ ರೈತ ಇರ್ಪಣ್ಣ ಹಳಿದೊಡ್ಡಿ ಬರಡು ನೆಲದಲ್ಲಿ ಉತ್ತಮ ಫಸಲಿಗಾಗಿ ಅನುಸರಿಸಿದ ಮಾರ್ಗದ ಕುರಿತು ವಿವರಿಸುವುದರ ಜೊತೆಗೆ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಬೀದರ್‌, ಔರಾದ್‌ ಮೊದಲಾದ ಕಡೆಯಿಂದ ಬಂಡ ರೈತರ ಪ್ರಶ್ನೆಗೆ ಸಮರ್ಪಕ ಉತ್ತರಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ. ಮಲ್ಲಿಕಾರ್ಜುನ ಇರ್ಪಣ್ಣ ಹಳಿದೊಡ್ಡಿ ತೊಗರಿ ಬೇಸಾಯ ಕ್ರಮ ಇತರೆ ರೈತರಿಗೆ ಮಾದರಿ ಎಂದು ಹೇಳಿದರು.

ರೈತ ಸಂಘ ರಾಜ್ಯ ಉಪಾಧ್ಯಕ್ಷ ಖಾಸೀಮ–ಅಲಿ, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಸತೀಶ ನನ್ನೂರೆ, ಚಂದ್ರಶೇಖರ ಜಮಖಂಡಿ, ಶ್ರೀಮಂತ ಬಿರಾದಾರ್, ವಿಠ್ಠಲರೆಡ್ಡಿ, ರೈತ ಸಂಘ ಮುಖಂಡರಾದ ಮೈನೋದ್ದೀನ್‌ ಲಾಡ್ಜಿ, ಸಿದ್ರಾಮಪ್ಪ ಆಣದೂರೆ, ಸಂದೀಪ್ ಎಸ್‌.ಭುಳಗುಂಡಿ, ಶಿವರಾಜ ಗಂಗಶೆಟ್ಟಿ, ರಾಮಣ್ಣ ಹೊಳಿದೊಡ್ಡಿ ಮಾತನಾಡಿದರು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಿಲ್ಲೆಯ ವಿವಿಧ ತಾಲ್ಲೂಕಿನ 300ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.  ಚಾಲುಕ್ಯ ಹಳಿದೊಡ್ಡಿ ಸ್ವಾಗತಿಸಿದರು. ವಿಠ್ಠಲ್‌ ಕಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.