ADVERTISEMENT

ಅಡ್ಡಾದಿಡ್ಡಿ ಚಾಲನೆ: ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:58 IST
Last Updated 8 ನವೆಂಬರ್ 2017, 5:58 IST

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಮಂಗಳವಾರ ಮಹಾರಾಷ್ಟ್ರ ನೋಂದಣಿಯ ಟ್ಯಾಂಕರ್‌ವೊಂದರು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಐದು ವಾಹನಗಳು ಜಖಂಗೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಟ್ಯಾಂಕರ್‌ ಚಾಲಕ ಗ್ರಾಮ ಸಮೀಪದ ಬಸವೇಶ್ವರ ವೃತ್ತಕ್ಕೆ ಮೊದಲು ಡಿಕ್ಕಿ ಹೊಡೆದಿದ್ದಾನೆ, ನಂತರ ನಿಯಂತ್ರಣ ಕಳೆದುಕೊಂಡ ವಾಹನವು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಎರಡು ಬದಿಗಳಲ್ಲಿ ನಿಂತಿದ್ದ ಎರಡು ಆಟೊ, ಎರಡು ಬೈಕ್‌, ಒಂದು ಟಂಟಂ, ಟಾಟಾ ಮ್ಯಾಜಿಕ್, ಬೊಲೆರೊ, ಕ್ರೂಷರ್ ಜೀಪ್‌ಗೆ ಗುದ್ದಿದ್ದಾನೆ.

ವಾಹನ ರಸ್ತೆ ತುಂಬ ಓಡಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದರು. ಹಾಗಾಗಿ, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ವಾಹನ ಚಾಲಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕ್ಲೀನರ್‌ ಪರಾರಿಯಾಗಿದ್ದಾನೆ. 

ADVERTISEMENT

ಗಾಯಗೊಂಡವರ ವಿವರ: ಆತೀಕ್ ಅಲಿಮೋದ್ದಿನ್ ಧನ್ನೂರ್ (24), ಪ್ರಕಾಶ ಲಕ್ಷ್ಮಣ ನೇಳಗಿ (45), ಹಣಮಂತ ವಿದ್ಯಪ್ಪಾ ತರನಳ್ಳಿ (21), ಸುಮನ ಗಂಡ ಶಿವರಾಜ ಬೀದರ್ (30) ಗಾಯಗೊಂಡವರು.

ಸಂಚಾರ ದಟ್ಟಣೆ: ಉದಗೀರ್-ಬೀದರ್ ಮುಖ್ಯರಸ್ತೆಯಲ್ಲಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಜನರನ್ನು ಚದುರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕನಗೌಡ ಪಾಟೀಲ, ಗ್ರಾಮೀಣ ಠಾಣೆ ಸಿಪಿಐ ಲಖನ್‌, ಧನ್ನೂರಾ ಪಿಎಸ್‍ಐ ವಿಜಯಕುಮಾರ, ಭಾಲ್ಕಿ ಗ್ರಾಮೀಣ ಠಾಣೆ ಪಿಎಸ್‍ಐ ಸುನೀಲ್‌ಕುಮಾರ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಈ ಸಂಬಂಧ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.