ADVERTISEMENT

ಅನುದಾನ ಬಳಕೆ ಆಗದಿದ್ದರೆ ಅಧಿಕಾರಿಗಳೇ ಹೊಣೆ

ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 9:48 IST
Last Updated 4 ಮಾರ್ಚ್ 2017, 9:48 IST

ಬೀದರ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿ ವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟ ಅನುದಾನವನ್ನು ನಿಗದಿ ಪಡಿಸಿದ ಅವಧಿಯಲ್ಲಿ ಬಳಸದ ಅಧಿಕಾರಿಗಳ ವಿರುದ್ಧ  ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಡಾ. ಎಚ್‌. ಆರ್. ಮಹಾದೇವ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2016-17ನೇ ಸಾಲಿನ ಫೆಬ್ರುವರಿ ಅಂತ್ಯಕ್ಕೆ ಸಾಧಿಸಿದ ಪರಿಶಿಷ್ಟ ಜಾತಿ ಉಪಯೋಜನೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳ ಏಳ್ಗೆಗಾಗಿ ಸರ್ಕಾರ ಪ್ರತಿ ವರ್ಷ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ  (ಎಸ್‌ಸಿಪಿ, ಟಿಎಸ್‌ಪಿ) ಅಡಿ ವಿಶೇಷ ಅನುದಾನ ಮೀಸಲಿಡುತ್ತದೆ. ಈ ಅನುದಾನ ನಿಗದಿಪಡಿಸಿದ ಅವಧಿ ಯೊಳಗೆ ಬಳಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.

ಈ ಅನುದಾನ ನ್ಯಾಯಯುತವಾಗಿ ಆಯಾ ಸಮುದಾಯದ ಫಲಾ ನುಭವಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಆಯಾ ಇಲಾಖೆಯ ಅನುಷ್ಠಾ ನಾಧಿಕಾರಿಗಳು ವಹಿಸಿಕೊಳ್ಳಬೇಕು ಎಂದರು. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನಕ್ಕೆ ಸಂಬಂಧಿಸಿದಂತೆ  ಸರಿಯಾಗಿ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ನಿಗದಿಪಡಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಬೇರೆ ಯೋಜನೆಗಳಿಗೆ ಬಳಸುವಂತಿದ್ದರೆ ಸರ್ಕಾರದ ಆದೇಶದ ಪಾಲಿಸಬೇಕು.  ಆಯಾ ಯೋಜನೆಗಳ ಭೌತಿಕ ಸಾಧನೆ ಹಾಗೂ ಆರ್ಥಿಕ ಸಾಧನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಾಗ ಅಂಕಿ ಸಂಖ್ಯೆಗಳನ್ನು ಸರಿಯಾಗಿ ನೀಡಬೇಕು ಎಂದು ತಿಳಿಸಿದರು.

ಕೃಷಿ, ತೋಟಗಾರಿಕೆ, ಆರೋಗ್ಯ, ಪಶುಪಾಲನೆ, ಪ್ರವಾಸೋದ್ಯಮ, ನೀರಾ ವರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಡಾ. ಆರ್. ಸೆಲ್ವಮಣಿ, ಸಮಾಜ ಕಲ್ಯಾಣ ಇಲಾ ಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.