ADVERTISEMENT

ಅಪೂರ್ಣ ಕಾಮಗಾರಿ: ಜಿಪಂ ಅಧ್ಯಕ್ಷೆ ತರಾಟೆ

ಔರಾದ್ ತಾಲ್ಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆ; ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 6:26 IST
Last Updated 16 ಫೆಬ್ರುವರಿ 2017, 6:26 IST
ಔರಾದ್: ಲೋಕೋಪಯೋಗಿ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆ ಕಾಮಗಾರಿಗಳ ಪ್ರಗತಿ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
 
ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅಶೋಕ ಸಜ್ಜನಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.
 
‘ನೀವು ತೋರಿಸಿದ ಪ್ರಗತಿ ಕಾಗದದಲ್ಲಿ ಮಾತ್ರ ಇದೆ. ಕಾಮಗಾರಿ ಆರಂಭ ಆಗದೆ ಇರುವುದನ್ನು ಪ್ರಗತಿಯಲ್ಲಿದೆ ಎಂದು ನಮೂದಿಸಿ ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ’ ಎಂದು ಕಿಡಿ ಕಾರಿದರು.‘ನಿಗದಿತ ಅವಧಿಯೊಳಗೆ ಕಾಮಗಾರಿ ಆರಂಭಿಸದ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಿ’ ಎಂದು ಸೂಚಿಸಿದರು. 
 
‘ತಾಲ್ಲೂಕಿನಲ್ಲಿ ಅತಿವೃಷ್ಟಿ ಹಾನಿ ಅನುದಾನ ಇನ್ನು ಬಳಕೆಯಾಗಿಲ್ಲ. ಕುಡಿಯುವ ನೀರು ಸೇರಿದಂತೆ ಕ್ರಿಯಾಯೋಜನೆ ಸಲ್ಲಿಸುವಲ್ಲಿಯೂ ವಿಳಂಬ ಆಗುತ್ತಿದೆ. ತಾಲ್ಲೂಕಿನ ಅಭಿವೃದ್ಧಿ ಕುಂಠಿತ ಆದರೆ ಸಂಬಂಧಿತ ಇಲಾಖೆ ಅಧಿಕಾರಿಗಳೇ ಹೊಣೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಎಚ್ಚರಿಸಿದರು.
 
‘ಬೇಸಿಗೆ ಮುನ್ನವೇ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ನಂದ್ಯಾಳ ಗ್ರಾಮದಲ್ಲಿ ಈಗಲೇ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೆ ಅಧಿಕಾರಿಗಳು ಸಮಸ್ಯೆ ಹಗುರವಾಗಿ ಪರಿಗಣಿಸುತ್ತಿದ್ದಾರೆ’ ಎಂದು ಜಿ.ಪಂ. ಸದಸ್ಯೆ ಗೀತಾ ಚಿದ್ರಿ ಅಸಮಾಧಾನ ಹೊರ ಹಾಕಿದರು.
 
‘ಅಧಿಕಾರಿಗಳು ನಮ್ಮ ಮಾತಿಗೆ ಬೆಲೆ ಕೊಡದೆ ಶಾಸಕರ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಚಿಂತಾಕಿ ಕ್ಷೇತ್ರ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಶಾಸಕರೇ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು. 
 
‘ತಾಲ್ಲೂಕಿನ ಶಿಕ್ಷಣ ವ್ಯವಸ್ಥೆ ಹಳಿ ತಪ್ಪಿದೆ. ಶಿಕ್ಷಕರು ತಮ್ಮ ಕರ್ತವ್ಯ ಮರೆತು ಬೇರೆ ಬೇರೆ ಕೆಲಸದಲ್ಲಿ ತೊಡಗಿದ್ದಾರೆ. ಶಾಲೆಗೆ ಮದ್ಯ ಸೇವಿಸಿ ಬಂದರೂ ಯಾರು ಕೇಳುತ್ತಿಲ್ಲ. ಹೀಗಾದರೆ ಸರ್ಕಾರಿ ಶಾಲೆಗಳು ಹೇಗೆ ಸುಧಾರಿಸುತ್ತವೆ’ ಎಂದು ಜಿ.ಪಂ. ಸದಸ್ಯ ಬಾಬುಸಿಂಗ್ ಹಜಾರಿ ಆಕ್ರೋಶ ವ್ಯಕ್ತಪಡಿಸಿದರು.
 
‘ತಾಲ್ಲೂಕಿನಲ್ಲಿ 150 ಶಿಕ್ಷಕರ ಹುದ್ದೆ ಖಾಲಿ ಇವೆ. ತಾಂಡಾ ಮತ್ತು ದೂರದ ಗ್ರಾಮಗಳಿಗೆ ಅತಿಥಿ ಶಿಕ್ಷಕರು ಹೋಗಲು ತಯಾರಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇನಾಯತ್ಅಲಿ ಸಿಂಧೆ ಸ್ಪಷ್ಟನೆ ನೀಡಿದರು. ‘ಶಿಕ್ಷಕರ ಕಾರ್ಯ ವೈಖರಿ ಮೇಲೆ ನಿಗಾ ವಹಿಸಿ. ಸರ್ಕಾರಿ ಶಾಲೆ ಸುಧಾರಣೆಯತ್ತ ಗಮನ ಹರಿಸಬೇಕು’ ಎಂದು ಜಿ.ಪಂ. ಅಧ್ಯಕ್ಷರು ಶಿಕ್ಷಣಾಧಿಕಾರಿಗಳಿಗೆ ಸಲಹೆ ನೀಡಿದರು.
 
‘ನಾಗೂರ (ಎಂ) ಗ್ರಾಮದ ಅಂಗನವಾಡಿ ಕೇಂದ್ರದ ಎದುರಿನ ಟ್ಯಾಂಕ್ ಮಕ್ಕಳಿಗೆ ಮಾರಕವಾಗಿದೆ. ಅದನ್ನು ತೆರವುಗೊಳಿಸುವಂತೆ ಸಿಡಿಪಿಒ ಅವರಿಗೆ ಸಾಕಷ್ಟು ಸಲ ಸೂಚಿಸಿದರೂ ಪ್ರಯೋಜನವಾಗಿಲ್ಲ’ ಎಂದು ಸದಸ್ಯ ಅನೀಲ ಬಿರಾದಾರ ಸಭೆ ಗಮನ ಸೆಳೆದರು. ವಾರದೊಳಗೆ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ, ಉಪಾಧ್ಯಕ್ಷ ನೆಹರೂ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಸಂದ್ಯಾರಾಣಿ ನರೋಟೆ, ಮಾರುತಿ ಚವಾಣ್, ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.