ADVERTISEMENT

ಎಐಎಂಐಎಂ ಕಾರ್ಯಕರ್ತರ ಧರಣಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:42 IST
Last Updated 20 ಡಿಸೆಂಬರ್ 2017, 6:42 IST

ಬೀದರ್: ನಗರಸಭೆ ವತಿಯಿಂದ ಓಲ್ಡ್‌ ಸಿಟಿಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣವಾಗಿವೆ. ಕಾಮಗಾರಿ ಪೂರ್ಣಗೊಳಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಮಜ್ಲಿಸ್ ಐತೆಹಾದುಲ್ ಮುಸ್ಲಿಮಿನ್ (ಎಐಎಂಐಎಂ) ಕಾರ್ಯಕರ್ತರು ಇಲ್ಲಿಯ ನಗರಸಭೆ ಆಯುಕ್ತರ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್‌, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಆಯುಕ್ತ ಮನೋಹರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಓಲ್ಡ್‌ ಸಿಟಿಯಲ್ಲಿ ಮೊದಲ ಹಂತದ ಒಳಚರಂಡಿ ನಿರ್ಮಾಣ, ನಿರಂತರ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳು ಇನ್ನೂ ಮುಗಿದಿಲ್ಲ ಎಂದು ದೂರಿದರು.

ಮೊದಲ ಹಂತದ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಎರಡನೇ ಹಂತದ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಮಧ್ಯೆ ಅಗೆದು ಬಿಟ್ಟಿರುವ ಕಾರಣ ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಗರದ ಮೈಲೂರು, ಹಳ್ಳದಕೇರಿ, ಕುಂಬಾರವಾಡ ಪ್ರದೇಶದಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಓಲ್ಡ್‌ ಸಿಟಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಲ್ಲ. ನಲ್ಲಿಗೆ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮೋಟಾರ್‌ ಕೆಟ್ಟು ಹೋದರೆ ಅಧಿಕಾರಿಗಳು ತ್ವರಿತ ದುರಸ್ತಿಗೆ ಮುಂದಾಗುತ್ತಿಲ್ಲ. ಹೀಗಾಗಿ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ಒಳ ಚರಂಡಿ ಕಾಮಗಾರಿ ಕಳಪೆಯಾಗಿದೆ. ಚರಂಡಿಯಲ್ಲಿನ ಹೂಳು ತೆಗೆಯುವ ಹೆಸರಲ್ಲಿ ₹ 36 ಲಕ್ಷ ಎತ್ತಿ ಹಾಕಲಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಹಣ ಪಡೆದಿರುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಎಐಎಂಐಎಂ ಪಕ್ಷದ ಬೀದರ್ ಘಟಕದ ಅಧ್ಯಕ್ಷ ಸೈಯದ್ ಮನ್ಸೂರ್ ಅಹಮ್ಮದ್ ಖಾದ್ರಿ ಒತ್ತಾಯಿಸಿದರು.

ನಗರಸಭೆ ಆಯುಕ್ತ ಮನೋಹರ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಸದಸ್ಯರಾದ ಅಬ್ದುಲ್‌ ಅಜೀಜ್‌ ಮುನ್ನಾ, ಸುನೀಲ ಶಿವಾನಂದ ಒಂಟೆ, ಪ್ರಮುಖರಾದ ಹಮೀದ್‌ ಸೌದಾಗರ್‌, ವಸೀಮ್‌ ಕಿರ್ಮಾನಿ, ಜಮಿಲ್‌ ಅಹಮ್ಮದ್‌, ಸೈಯದ್‌ ಇಸ್ಮಾಯಿಲ್‌ ಖಾದ್ರಿ, ಮೊಹಮ್ಮದ್‌ ಸಮೀರ್‌, ಶಫಿವುಲ್ಲಾ ಬೇಗ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.