ADVERTISEMENT

ಐದು ಹೊಸ ಶಾಖೆಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 6:47 IST
Last Updated 9 ಸೆಪ್ಟೆಂಬರ್ 2017, 6:47 IST

ಬೀದರ್: ‘ಪ್ರತಿ ತಾಲ್ಲೂಕಿಗೆ ಒಂದರಂತೆ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ ಐದು ಹೊಸ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ದೊರೆತ ಕೂಡಲೇ ಅಗತ್ಯ ಇರುವ ಕಡೆಗಳಲ್ಲಿ ಶಾಖೆ ಆರಂಭಿಸಲಾಗುವುದು’ ಎಂದು ತಿಳಿಸಿದರು. ‘ಪಿಕೆಪಿಎಸ್ ಅಧ್ಯಕ್ಷರ ಬೇಡಿಕೆಗೆ ಸ್ಪಂದಿಸಿ ಜಿಲ್ಲೆಯ 171 ಪಿಕೆಪಿಎಸ್‌ಗಳ ಪೈಕಿ ಪ್ರತಿ ತಾಲ್ಲೂಕಿನಲ್ಲಿ ತಲಾ 10 ರಂತೆ 50 ಪಿಕೆಪಿಎಸ್‌ಗಳನ್ನು ಕಂಪ್ಯೂಟರೀಕರಣ ಮಾಡಲಾಗುವುದು’ ಎಂದು ಹೇಳಿದರು.

‘ಪಿಕೆಪಿಎಸ್ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳ ಮೇಲ್ವಿಚಾರಕರಿಗೆ ಡಿಸಿಸಿ ಬ್ಯಾಂಕ್‌ನಿಂದ ಅರ್ಧ ವೇತನ ಕೊಡಲಾಗುವುದು. ಇದರಿಂದ ಬ್ಯಾಂಕ್‌ಗೆ ವಾರ್ಷಿಕ ₹ 94 ಲಕ್ಷ ಹೊರೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಸದ್ಯ ಎಕರೆಗೆ ₹ 10 ಸಾವಿರ ಕೃಷಿ ಸಾಲ ಒದಗಿಸಲಾಗುತ್ತಿದೆ. ಸಾಲದ ಪ್ರಮಾಣದಲ್ಲಿ ಶೇ 25 ರಷ್ಟು ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ. ನಬಾರ್ಡ್ ಜತೆ ಚರ್ಚಿಸಿ, ಬ್ಯಾಂಕ್‌ನ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ರಾಜ್ಯ ಸರ್ಕಾರ ತಲಾ ₹ 50 ಸಾವಿರ ವರೆಗಿನ ಕೃಷಿ ಸಾಲ ಮನ್ನಾ ಮಾಡಿರುವುದರಿಂದ ಜಿಲ್ಲೆಯ 1.58 ಲಕ್ಷ ರೈತರ ₹ 529 ಕೋಟಿ ಸಾಲ ಮನ್ನಾ ಆಗಿದೆ. ಇದರಲ್ಲಿ 1.09 ಲಕ್ಷ ರೈತರ ಸಂಪೂರ್ಣ ಸಾಲ ಮನ್ನಾ ಆಗಿದೆ’ ಎಂದು ತಿಳಿಸಿದರು. ‘ಜಿಲ್ಲೆಯ ಕೆಲ ರೈತರಿಗೆ ಈವರೆಗೂ ಬೆಳೆ ವಿಮೆ ಪರಿಹಾರ ದೊರೆತಿಲ್ಲ. ಈ ಬಗೆಗೆ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದರು.

₹ 6.47 ಕೋಟಿ ಲಾಭ: ‘2016–17ನೇ ಸಾಲಿನಲ್ಲಿ ಬ್ಯಾಂಕ್ ₹ 6.47 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ₹50 ಲಕ್ಷದಷ್ಟು ಹೆಚ್ಚಳ ಆಗಿದೆ’ ಎಂದು ತಿಳಿಸಿದರು. ‘ಅಲ್ಪಾವಧಿ, ಮಧ್ಯಮಾವಧಿ ಹಾಗೂ ಕೃಷಿಯೇತರ ಸೇರಿ ಒಟ್ಟು 1,451.59 ಕೋಟಿ ಸಾಲ ಕೊಡಲಾಗಿದೆ. ಇದರಲ್ಲಿ ₹ 740 ಕೋಟಿ ಅಲ್ಪಾವಧಿ ಕೃಷಿ ಸಾಲ, ₹ 36.53 ಕೋಟಿ ಮಧ್ಯಮಾವಧಿ ಸಾಲ ಮತ್ತು ₹ 674.99 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ’ ಎಂದು ವಿವರಿಸಿದರು.

‘ಬ್ಯಾಂಕ್ ₹ 2,634.33 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹ 1,316.56 ಕೋಟಿ ಠೇವಣಿ ಹೊಂದಿದ್ದರೆ, ₹505.92 ಕೋಟಿ ಹೂಡಿಕೆ ಮಾಡಿದೆ’ ಎಂದು ಹೇಳಿದರು. ಪಿಕೆಪಿಎಸ್‌ ಅಧ್ಯಕ್ಷರಾದ ಪೆಂಟಾರೆಡ್ಡಿ ಪಾಟೀಲ, ಬಂಡುರಾವ ಕುಲಕರ್ಣಿ, ಶಂಕರೆಪ್ಪ ಪಾಟೀಲ, ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.

ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ನಿರ್ದೇಶಕರಾದ ಅಮರಕುಮಾರ ಖಂಡ್ರೆ, ವಿಜಯಕುಮಾರ ಲಿಂಗೋಜಿ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಸಂಗಮೇಶ ಪಾಟೀಲ ಅಲಿಯಂಬರ್, ರಾಮರೆಡ್ಡಿ ಗಂಗವಾರ, ಅಬ್ದುಲ್ ಸಲೀಂ, ಬಸವರಾಜ ಹೆಬ್ಬಾಳೆ, ಕಾಶೀನಾಥ ಬೀರ್ಗಿ, ಪೆಂಟಾರೆಡ್ಡಿ ಎಸ್. ಚಂಡಕಾಪುರೆ, ಧೂಳಪ್ಪ ಬಿರಾದಾರ, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಶರಣಪ್ಪ ಶಿವಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ, ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.