ADVERTISEMENT

‘ಒಂದೇ ತೆರಿಗೆ ಜಿಎಸ್‌ಟಿ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:10 IST
Last Updated 15 ಜುಲೈ 2017, 7:10 IST

ಬೀದರ್‌: ‘ದೇಶದಾದ್ಯಂತ ಒಂದೇ ಬಗೆಯ ತೆರಿಗೆ ವಿಧಿಸುವುದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಮುಖ್ಯ ಉದ್ದೇಶವಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಕಲಬುರ್ಗಿ ವಿಭಾಗದ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ಬೇಳೆಕಾಳು ಮತ್ತು ಬೀಜ ವ್ಯಾಪಾರಿಗಳ ಸಂಘ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಆಶ್ರಯದಲ್ಲಿ ನಗರದ ವಿಶಾಲ್‌ ಫಂಕ್ಷನ್‌ ಹಾಲ್‌ನಲ್ಲಿ ಶುಕ್ರವಾರ ವ್ಯಾಪಾರಿಗಳಿಗಾಗಿ ಆಯೋಜಿಸಿದ್ದ ಜಿಎಸ್‌ಟಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಜಿಎಸ್‌ಟಿಯಿಂದ ವ್ಯಾಪಾರಿಗಳು ಆತಂಕ ಪಡುವ ಅಗತ್ಯವಿಲ್ಲ. ಹಲವು ಬಗೆಯ ತೆರಿಗೆಗಳನ್ನು ರದ್ದುಪಡಿಸಿ ಏಕರೂಪದ ತೆರಿಗೆ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು. ‘ದೇಶದ ಎಲ್ಲ ರಾಜ್ಯಗಳಲ್ಲೂ ಒಂದು ವಸ್ತುವಿನ ಬೆಲೆ ಒಂದೇ ತೆರನಾಗಿರುವುದು ಜಿಎಸ್‌ಟಿಯ ವಿಶೇಷವಾಗಿದೆ. ಆಹಾರ ಧಾನ್ಯಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಇದೆ. ಆಯ್ದ ಬೀಜಗಳಿಗೆ ಮಾತ್ರ ತೆರಿಗೆ ಅನ್ವಯಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಜಿಎಸ್‌ಟಿಯಿಂದ ತೆರಿಗೆ ಸೋರಿಕೆ ಕಡಿಮೆಯಾಗಲಿದೆ. ವ್ಯಾಪಾರಿಗಳು ಲೆಕ್ಕ ಪತ್ರ ಇಡುವುದು  ಸುಲಭವಾಗಿದೆ’ ಎಂದು ಹೇಳಿದರು. ಸಂಘದ ಅಧ್ಯಕ್ಷ ಬಸವರಾಜ ಭಂಡೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಜಿ.ಪಿ. ಶ್ರೀನಿವಾಸ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.