ADVERTISEMENT

ಕರ್ತವ್ಯಲೋಪ ಸಿಬ್ಬಂದಿ ವಿರುದ್ಧ ಕ್ರಮ

ಹುಮನಾಬಾದ್‌: ಸಾಮಾನ್ಯ ಸಭೆಯಲ್ಲಿ ಸದಸ್ಯರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:10 IST
Last Updated 23 ಮಾರ್ಚ್ 2018, 9:10 IST

ಹುಮನಾಬಾದ್ : ‘ಸಾರ್ವಜನಿಕರ ಕೆಲಸಗಳ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪುರಸಭೆ ಸರ್ವ ಸದಸ್ಯರು ಎಚ್ಚರಿಕೆ ನೀಡಿದರು.

ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಕಡತಗಳನ್ನು ಸಭೆಗೆ ತರದೇ ಗಂಟೆಗಟ್ಟಲೇ ಸದಸ್ಯರನ್ನು ಕಾಯುತ್ತ ಕೂರಿಸಿದ್ದರಿಂದ ಕುಪಿತಗೊಂಡ ಸದಸ್ಯರು ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

‘ಪುರಸಭೆಯಲ್ಲಿ ಎಲ್ಲವೂ ಸರಿ ಇಲ್ಲ. ಸಂಬಂಧವಿಲ್ಲದವರ ಕಡತಗಳನ್ನು ಯಾರೋ ಮೊಬೈಲ್‌ ಫೋನ್‌ನಲ್ಲಿ ಚಿತ್ರಿಸಿಕೊಂಡು ಹೋಗುತ್ತಾರೆ. ದಾಖಲೆ ನಾಪತ್ತೆಯಾದರೇ ಯಾರು ಹೊಣೆ ? ಕಚೇರಿಯ ಆಡಳಿತ ಸಂಪೂರ್ಣ ಕುಸಿದಿದ್ದು, ಹೇಳುವವರು ಕೇಳುವವರಿಲ್ಲದೇ ಸಿಬ್ಬಂದಿ ಮಾಡಿದ್ದೇ ಅಂತಿಮಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮುಖ್ಯಾಧಿಕಾರಿ ಜಾಣಕುರುಡತನ ಪ್ರದರ್ಶಿಸುತ್ತಿರುವುದು ಸರಿಯಲ್ಲ’ ಎಂದು ಜೆಡಿಎಸ್‌ ಸದಸ್ಯ ಯಾಸೀನ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಚೇರಿ ಸಿಬ್ಬಂದಿ ಒಬ್ಬರೂ ಓಚರ್‌ ಇಲ್ಲದೇ 140 ಚೆಕ್‌ ನೀಡುತ್ತಾರೆ ಎಂದರೇ ಏನರ್ಥ? ಈ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯ ನೂರ್‌ ಕಲೀಂಸಾಬ್‌ ಆಗ್ರಹಿಸಿದರು.

‘ಸ್ವಚ್ಛ, ಸುಂದರ ನಗರವಾಗಿಸಲು ತ್ಯಾಜ್ಯ ತಕ್ಷಣ ವಿಲೇವಾರಿ ಅಂಶಗಳು ಇರಬೇಕೆಂಬ ಉದ್ದೇಶದಿಂದ 2011ರಲ್ಲಿ 5 ಆಟೊ ಟ್ರ್ಯಾಲಿ ಮತ್ತು ಟ್ರ್ಯಾಕ್ಟರ್‌ ಖರೀದಿಸಲಾಗಿದೆ. ಆದರೆ 7ವರ್ಷ ಗತಿಸಿದರೂ ಅವುಗಳ ನೋಂದಣಿ ಮಾಡಿಸದೇ ಇರುವುದು ನಿಜಕ್ಕೂ ನಾಚಿಕೆಗೇಡು ಸಂಗತಿ. ಸರ್ಕಾರ ಕೊಡುವ ಸಂಬಳಕ್ಕೆ ಬದ್ಧತೆ ಬೇಡವೇ ಎಂದು ಸದಸ್ಯ ವಿನಾಯಕ ಯಾದವ್ ಕಿಡಿ ಕಾರಿದರು.

‘ಒಳಚರಂಡಿ ಕಾಮಗಾರಿ ಮಾ. 15ಕ್ಕೆ ಪೂರ್ಣಗೊಳಿಸುವುದಾಗಿ ಶಾಸಕರ ಎದುರಿಗೆ ದೇವರ ಹೆಸರಲ್ಲಿ ಪ್ರಮಾಣ ಮಾಡಿದ ಸಂಬಂಧಪಟ್ಟ ವ್ಯಕ್ತಿಗಳು ಈಗ ಹೇಳ ಹೆಸರಿಲ್ಲದೇ ಮಾಯವಾಗಿದ್ದಾರೆ. ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ಅಭಿವೃದ್ದಿ ಕಾರ್ಯ ಗಳ ಗತಿ ಏನು’ ಎಂದು ಜೆಡಿಎಸ್‌ ಸದಸ್ಯ ಮಹೇಶ ಅಗಡಿ ಪ್ರಶ್ನಿಸಿದರು.

ಸ್ವಾಗತ ಕಮಾನುವೊಂದರ ಕಡತಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದಾಗ ಜೆಡಿಎಸ್‌ ಸದಸ್ಯ ನಾಸೀರ್‌ಖಾನ್‌ ಮತ್ತು ಪಕ್ಷೇತರ ಸದಸ್ಯ ಎಂ.ಡಿ.ಆಜಮ್‌ ಮಧ್ಯೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಹಿರಿಯ ಸದಸ್ಯರಾದ ಅಫ್ಸರ್ ಮಿಯಾ, ಮಹೇಶ ಅಗಡಿ, ವ್ಯವಸ್ತಾಪಕ ಯೂಸೂಫ್‌ಖಾನ್‌ ಮಧ್ಯ ಪ್ರವೇಶಿಸಿದರು. ಪರಿಸ್ಥಿತಿ ಶಾಂತಗೊಳಿಸಿದರು. ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಉಪಾಧ್ಯಕ್ಷೆ ಪಾವರ್ತಿ ಶೇರಿಕಾರ, ಮುಖ್ಯಾಧಿಕಾರಿ ಆನಂದ ಕೇಸರಗೊಪ್ಪ ಇದ್ದರು.
**
ಸಾಮಾನ್ಯ ಸಭೆಗೆ ಅಧಿಕಾರಿಗಳು ಅಗತ್ಯ ಕಡತ ತರಬೇಕು. ಸದಸ್ಯರು ಅದಕ್ಕಾಗಿ ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಲಾಗದು. ವಿಷಯ ಶಾಸಕರ ಗಮನಕ್ಕೆ ತರುತ್ತೇವೆ
ವಿನಾಯಕ ಯಾದವ್‌, ಹಿರಿಯ ಸದಸ್ಯ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.