ADVERTISEMENT

ಕೃತಿ ರೂಪದಲ್ಲಿ ಮದುವೆ ಆಹ್ವಾನ ಪತ್ರಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:35 IST
Last Updated 15 ಏಪ್ರಿಲ್ 2017, 9:35 IST
ಬೀದರ್ ತಾಲ್ಲೂಕಿನ ಜನವಾಡದ ಸಾಹಿತಿ ಬಸವರಾಜ ಹದನೂರೆ ಅವರು ತಮ್ಮ ಮಗನ ಮದುವೆಗೆ ಕೃತಿ ರೂಪದಲ್ಲಿ ಮುದ್ರಿಸಿರುವ ಆಹ್ವಾನ ಪತ್ರಿಕೆ
ಬೀದರ್ ತಾಲ್ಲೂಕಿನ ಜನವಾಡದ ಸಾಹಿತಿ ಬಸವರಾಜ ಹದನೂರೆ ಅವರು ತಮ್ಮ ಮಗನ ಮದುವೆಗೆ ಕೃತಿ ರೂಪದಲ್ಲಿ ಮುದ್ರಿಸಿರುವ ಆಹ್ವಾನ ಪತ್ರಿಕೆ   

ಜನವಾಡ: ಬೀದರ್ ತಾಲ್ಲೂಕಿನ ಜನವಾಡದ ಸಾಹಿತಿ ಬಸವರಾಜ ಹದನೂರೆ ಅವರು ತಮ್ಮ ಮಗನ ಮದುವೆ ಆಹ್ವಾನ ಪತ್ರಿಕೆಯನ್ನು ಕೃತಿಯ ರೂಪದಲ್ಲಿ ಮುದ್ರಿಸಿದ್ದಾರೆ.
‘ಗಿರಿಸಿದ್ಧಲಿಂಗ ಪಂಚಪದಿಗಳು’, ‘ಎದೆಯಾಳದಿಂದ’ ಕವನ ಸಂಕಲನ, ‘ಶ್ರೀ ರೇವಪಯ್ಯನವರ ಜೀವನ ಚರಿತ್ರೆ’ ಸೇರಿ ಮೂರು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಈಗ ತಮ್ಮ ಕಿರಿಯ ಪುತ್ರ ವಿಜಯಕುಮಾರ ಅವರ ವಿವಾಹದ ಪ್ರಯುಕ್ತ ಆಹ್ವಾನ ಪತ್ರಿಕೆ ಒಳಗೊಂಡ ‘ಶ್ರೀ ರೇವಪಯ್ಯನವರ ನಾಮಾವಳಿ ಹಾಗೂ ಭಜನಾ ಪದಗಳು’ ಹೆಸರಿನ ನಾಲ್ಕನೇ ಕೃತಿಯನ್ನು ಹೊರ ತಂದಿದ್ದಾರೆ.

ಕೃತಿಯಲ್ಲಿ ರೇವಪಯ್ಯನವರ 108 ನಾಮಾವಳಿ, ಭಜನೆ ಹಾಗೂ ಆರತಿ ಪದಗಳು ಇವೆ. ಮುಖಪುಟದ ಮೇಲೆ ಪುಸ್ತಕದ ಶೀರ್ಷಿಕೆ, ನಾವದಗಿ ರೇವಪಯ್ಯನವರ ಬೃಹತ್ ಚಿತ್ರ ಇದೆ. ಕೆಳಗಡೆ ‘ಹದನೂರೆ ಪರಿವಾರದಿಂದ ಕಲ್ಯಾಣ ಮಹೋತ್ಸವ ಸವಿ ನೆನಪಿಗಾಗಿ’ ಎಂದು ಬರೆಯಲಾಗಿದೆ.

ಕೃತಿಯನ್ನು ಹದನೂರೆ ಅವರ ತಾಯಿ ಲಿಂ. ಶಾಂತಮ್ಮ ಅಡವೆಪ್ಪ ಹದನೂರೆ ಅವರಿಗೆ ಅರ್ಪಿಸಲಾಗಿದೆ. ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಮುನ್ನುಡಿ ಬರೆದಿದ್ದಾರೆ. ಬೀದರ್‌ನ ಬಸವಜ್ಯೋತಿ ಬುಕ್ ಸೆಲ್ಲರ್ಸ್ ಮಾಲೀಕರೂ ಆದ ಹದನೂರೆ ಅವರ ಹಿರಿಯ ಪುತ್ರ ರಾಜೇಂದ್ರ ಪ್ರಕಾಶಕರಾಗಿದ್ದಾರೆ.

ADVERTISEMENT

ದಾಖಲೆಯಾಗಿ ಉಳಿಯಬೇಕು ಎನ್ನುವ ಉದ್ದೇಶದಿಂದ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೃತಿ ರೂಪದಲ್ಲಿ ಮುದ್ರಿಸಿದ್ದೇನೆ. ಒಟ್ಟು ಒಂದು ಸಾವಿರ ಕೃತಿಗಳನ್ನು ಮುದ್ರಿಸಿದ್ದು, ಒಂದು ಕೃತಿಗೆ ₹20 ವೆಚ್ಚವಾಗಿದೆ ಎಂದು ಹೇಳುತ್ತಾರೆ ಬಸವರಾಜ ಹದನೂರೆ.

ವಿಜಯಕುಮಾರ ಅವರೂ ತಮ್ಮ ತಂದೆ ಕೃತಿ ರೂಪದಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ವಿಜಯಕುಮಾರ ಅವರ ಮದುವೆಯು ಲಖನಗಾಂವ್‌ನ ಕುಶಾಲರಾವ್ ಖೆಳಗೆ ಅವರ ಪುತ್ರಿ ಸಂಗೀತಾ ಅವರೊಂದಿಗೆ ಬೀದರ್‌ನ ಪಾಪನಾಶ ದೇವಸ್ಥಾನ ಪರಿಸರದಲ್ಲಿರುವ ಪಾಪನಾಶ ಕಲ್ಯಾಣ ಮಂಟಪದಲ್ಲಿ ಏ. 17 ರಂದು ಬೆಳಿಗ್ಗೆ 11.45ಕ್ಕೆ ಬಸವ ತತ್ವದ ಪ್ರಕಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.