ADVERTISEMENT

ಕೃಷಿ ಆದಾಯ ದುಪ್ಪಟ್ಟು ಕಷ್ಟವಲ್ಲ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 6:32 IST
Last Updated 29 ಆಗಸ್ಟ್ 2017, 6:32 IST

ಬೀದರ್: ‘ಪರಿಶ್ರಮ ವಹಿಸಿದರೆ ಕೃಷಿ ಆದಾಯ ದುಪ್ಪಟ್ಟುಗೊಳಿಸುವುದು ಕಷ್ಟವೇನಲ್ಲ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್.ಎ. ಪಾಟೀಲ ಹೇಳಿದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ‘ಸಂಕಲ್ಪದಿಂದ ಸಿದ್ಧಿ’ ಘೋಷವಾಕ್ಯದಡಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ನಡೆದ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ, ವೈವಿಧ್ಯಮಯ, ಯೋಜನಾ ಬದ್ಧ ಹಾಗೂ ವ್ಯವಹಾರಿಕ ಕೃಷಿ ಪದ್ಧತಿಯನ್ನು ಅನುಸರಿಸಿದರೆ ರೈತರು ಕೃಷಿಯಲ್ಲಿ ಖಂಡಿತ ಯಶಸ್ಸು ಗಳಿಸಬಹುದು’ ಎಂದು ತಿಳಿಸಿದರು. ‘ಎಲ್ಲ ರೈತರು ಉದ್ದು, ಹೆಸರು, ಸೋಯಾಬೀನ್‌ ಹೀಗೆ ಒಂದೇ ಬಗೆಯ ಬೆಳೆಗಳನ್ನು ಬೆಳೆಯಬಾರದು. ಪರ್ಯಾಯ ಬೆಳೆಗಳನ್ನು ಬೆಳೆದು ಲಾಭ ಪಡೆಯಬೇಕು’ ಎಂದು ಹೇಳಿದರು.

‘ಇಸ್ರೆಲ್‌ನಲ್ಲಿ ಭಾರತಕ್ಕಿಂತ 10 ಪಟ್ಟು ಕಡಿಮೆ ಮಳೆಯಾಗುತ್ತದೆ. ಆದರೂ, ಆ ದೇಶ ಕೃಷಿಯಲ್ಲಿ ಮುಂದಿದೆ. ಆಧುನಿಕ ತಂತ್ರಜ್ಞಾನ, ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಮೂಲಕ ಆ ದೇಶ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಅನೇಕ ತಂತ್ರಜ್ಞಾನ ಬಂದಿವೆ. ರೈತರು ಅವುಗಳನ್ನು ಅನುಕರಿಸಬೇಕು. ನೀರಿನ ಸದ್ಬಳಕೆ, ಮಣ್ಣಿನ ಆರೋಗ್ಯ ಸೇರಿದಂತೆ ಸಪ್ತ ಸೂತ್ರಗಳನ್ನು ಅರಿಯಬೇಕು. ಇ– ಮಾರುಕಟ್ಟೆಯ ಪ್ರಯೋಜನ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಮಾತನಾಡಿ, ‘ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಬೀದರ್ ದೇಶದಲ್ಲೇ ಅತಿಹೆಚ್ಚು ಪರಿಹಾರ ಪಡೆದ ಜಿಲ್ಲೆಯಾಗಿದೆ. ಈ ಬಾರಿ ಮುಂಗಾರಿನಲ್ಲಿಯೂ ಜಿಲ್ಲೆ ಅತ್ಯಧಿಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ’ ಎಂದು ಹೇಳಿದರು.

‘ಕೃಷಿಯಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು ತಮ್ಮ ಆರ್ಥಿಕ ಸ್ಥಿತಿ ಎತ್ತರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ರವಿ ದೇಶಮುಖ ಮಾತನಾಡಿ, ‘ರೈತರ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿಯೇ ಸರ್ಕಾರ ರೈತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸಪ್ತ ಸೂತ್ರಗಳನ್ನು ಪಾಲಿಸಿದರೆ 2022 ರ ವೇಳೆಗೆ ರೈತರ ಆದಾಯ ವೃದ್ಧಿಯಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸೋಯಾಬೀನ್, ತೊಗರಿ ಮತ್ತಿತರ ಬೆಳೆಗಳಲ್ಲಿ ಅಧಿಕ ಆದಾಯ ಪಡೆಯುತ್ತಿರುವ ಅನೇಕ ರೈತರಿದ್ದಾರೆ. ಇತರ ರೈತರು ಆವರ ತಂತ್ರಜ್ಞಾನಗಳನ್ನು ಅನುಕರಿಸಬೇಕು’ ಎಂದು ತಿಳಿಸಿದರು. ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಪಾಟೀಲ, ಕೃಷಿ ಉತ್ಪನ್ನಗಳ ಮಾರುಕಟ್ಟೆ, ಇ ಮಾರುಕಟ್ಟೆ ಬಗೆಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೈತರಿಂದ ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸುವ ಕುರಿತ ಸಪ್ತ ಸೂತ್ರಗಳ ಶಪಥ ಮಾಡಿಸಲಾಯಿತು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಜಿಯಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು.

ತೋಟಗಾರಿಕೆ ಕಾಲೇಜಿನ ಡೀನ್ ರವೀಂದ್ರ ಮೂಲಗೆ, ನಬಾರ್ಡ್ ಬ್ಯಾಂಕ್‌ನ ದೀಪಕ ಜೋಶಿ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಿ.ಆರ್. ಕೊಂಡ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ವಿಶ್ವನಾಥ ಜಿಳ್ಳೆ, ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೆಗಳ್ಳಿ, ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ, ಜಯಶ್ರೀ ಹಿರೇಮಠ, ಡಾ. ಮಲ್ಲಿಕಾರ್ಜುನ, ಸೋಮಶೇಖರ ಉಪಸ್ಥಿತರಿದ್ದರು.

ಡಾ. ಕೆ. ಭವಾನಿ ನಿರೂಪಿಸಿದರು. ಡಾ. ಸುನೀಲಕುಮಾರ ಎನ್.ಎಂ. ವಂದಿಸಿದರು. ಕಲಬುರ್ಗಿ ಹಾಗೂ ಬೀದರ್ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.