ADVERTISEMENT

ಕೆರೆ ನೀರಿಗೆ ಕೊಚ್ಚಿ ಹೋದ ಬದುಕು

ಗ್ರಾಮಾಯಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 6:14 IST
Last Updated 2 ಸೆಪ್ಟೆಂಬರ್ 2014, 6:14 IST

ಬಸವಕಲ್ಯಾಣ: ತಾಲ್ಲೂಕಿನ ಶಿರಗಾಪುರ ಗ್ರಾಮದ ಕೆರೆ ಮತ್ತು ಬ್ಯಾರೇಜ್ ಮಳೆಯ ಅಬ್ಬರಕ್ಕೆ ಒಡೆದು ಹೊಲದಲ್ಲಿನ ಬೆಳೆಗಳ ಜತೆಗೆ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

ತಾಲ್ಲೂಕು ಸ್ಥಳದಿಂದ 45 ಕಿ.ಮೀ. ದೂರದ ಈ ಕುಗ್ರಾಮ ಗುಲ್ಬರ್ಗ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಇಲ್ಲಿಗೆ ರಸ್ತೆ ಸಂಪರ್ಕ ಇಲ್ಲದ್ದ­ರಿಂದ ಮೊದಲು ಊರು ಅಜ್ಞಾತ­ವಾಗಿಯೇ ಉಳಿದಿತ್ತು. ಈಚೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅನೇಕ ವರ್ಷಗಳಿಂದ ಕುಂಟುತ್ತ ಸಾಗಿದ್ದ ಜಿನುಗು ಕೆರೆ ಕಾಮಗಾರಿ ಈಚೆಗೆ ಪೂರ್ಣಗೊಂಡಿತ್ತು. ನಾಲ್ಕು ವರ್ಷಗಳಿಂದ ನಡೆ­ದಿದ್ದ ಗಂಡೂರಿ ನಾಲೆಯ ಬ್ಯಾರೇಜ್ ನಿರ್ಮಾಣದ ಕೆಲಸ ಮುಗಿದಿತ್ತು.

ಈ ಜಲಮೂಲಗಳಿಂದ ಜಮೀನಿನಲ್ಲಿನ ನೀರಿನ ಮಟ್ಟ ಹೆಚ್ಚಾಗಿ ನೀರಾವರಿಗೆ ಅನುಕೂಲ ಆಗಬಹುದು. ಕುಡಿಯುವ ನೀರಿನ ಬವಣೆ ತಪ್ಪಬಹುದು ಎಂದು ಕೃಷಿಕರು ಕನಸು ಕಂಡಿದ್ದರು. ಆದರೆ, ಒಂದು ತಿಂಗಳು ಮಾಯವಾಗಿದ್ದ ವರುಣ ಐದಾರು ದಿನಗಳ ಹಿಂದೆ ಒಮ್ಮೇಲೆ ಪ್ರತ್ಯಕ್ಷನಾಗಿದ್ದ­ರಿಂದ ಜನರ ಬದುಕು ಜರ್ಜರಿತಗೊಂಡಿದೆ.

ಕೆರೆ ನೀರು ಹೊಲಗಳಿಗೆ ಸಾಗಿಸಲು ಕಾಲುವೆ ಇದೆ. ಕೆರೆಗೆ ಸಾಕಷ್ಟು ನೀರು ಬಾರದೆ ಇದುವರೆಗೆ ಒಮ್ಮೆಯೂ ಅದರ ಮೂಲಕ ನೀರು ಹರಿಸಲಾ­ಗಿಲ್ಲ. ಆದರೆ, ಇದೇ ಪ್ರಥಮ ಬಾರಿ ಸಂಪೂರ್ಣ ತುಂಬಿದ ಕೆರೆ ರಾತ್ರೋರಾತ್ರಿ ಒಡೆದಿದೆ. ದಿನಬೆಳ­ಗಾಗುವಷ್ಟರಲ್ಲಿ ಬೆಳೆ ಮತ್ತು ಮಣ್ಣು ಸಾಗಿಸಿ­ಕೊಂಡು ಹೋಗಿ ಯಾರ ಜಮೀನು ಎಲ್ಲಿತ್ತು ಎಂದು ಗುರುತು ಸಿಗದಂತೆ ಮಾಡಿದೆ.

ಗ್ರಾಮದ ಸುತ್ತಲಿನ ಸುಮಾರು 500 ಎಕರೆ ಜಮೀನು ನೀರಿನಿಂದ ಹಾಳಾಗಿದೆ. ಇದರಲ್ಲಿ ನೂರಾರು ಎಕರೆಯಲ್ಲಿ ಬರೀ ಕಲ್ಲು ಉಳಿದಿವೆ ಎಂದು ಗ್ರಾಮಸ್ಥರಾದ ರಾಜಕುಮಾರ ಪಾಟೀಲ, ಮಾರುತಿ ಸಜ್ಜನ್, ರಮೇಶ ಮುಡಬೆ ತಿಳಿಸಿದ್ದಾರೆ.

‘ಪರಿಹಾರ ನೀಡಿ’

ADVERTISEMENT

ಕೆರೆ ಒಡೆದು ಮಣ್ಣು ಕೊಚ್ಚಿ­ಕೊಂಡು ಹೋಗಿದ್ದ­ರಿಂದ ಹಾನಿಯ ಅಂದಾಜು ಸಹ ಮಾಡ­ಲಾಗುತಿಲ್ಲ. ಆದ್ದರಿಂದ ಸರ್ಕಾರ ಜಮೀನುಗಳ ಸಂಪೂರ್ಣ ಅಭಿ­ವೃದ್ಧಿಗೆ ಧನ ಸಹಾಯ ಒದಗಿಸಬೇಕು. ಬೆಳೆ ಹಾನಿಗೆ ಕೂಡಲೇ ಪರಿಹಾರ ಕೊಡ­ಬೇಕು. ಜನರಿಗೆ ಬದುಕು ಕಟ್ಟಿಕೊಳ್ಳಲು ಅಧಿ­ಕಾರಿ­ಗಳು ಸರ್ವ ರೀತಿಯಿಂದ ಸಹಕರಿಸಬೇಕು.
–ರಾಜಕುಮಾರ ಪಾಟೀಲ, ಗ್ರಾಮಸ್ಥ

‘ಸರ್ಕಾರಕ್ಕೆ ಮನವಿ’
ಗಂಡೂರಿ ನಾಲಾ ಬ್ಯಾರೇಜ್ ಮತ್ತು ಕೆರೆಯ ಏರಿಯ ದುರುಸ್ತಿ ಕಾರ್ಯ ತಕ್ಷಣ ಕೈಗೊಳ್ಳ­ಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ವಿನಂತಿಸ­ಲಾಗಿದೆ. ಕೋಟ್ಯಂತರ ರೂಪಾಯಿ ಹಾನಿ ಆಗಿದ್ದರಿಂದ ರೈತರಿಗೆ ಹೆಚ್ಚಿನ ಪರಿಹಾರ ಧನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
–ಚಂದ್ರಶೇಖರ ಬಿರಾದಾರ, ಜಿ.ಪಂ. ಸದಸ್ಯ

ನ್ನು ಮುಂದೆ ಬ್ಯಾರೇಜ್ ದುರುಸ್ತಿ ಕೈಗೊಳ್ಳು­ವಾಗ ನಾಲಾ ಅಭಿವೃದ್ಧಿ ನಡೆಸಬೇಕು. ಕೆರೆಯಲ್ಲಿನ ಹೂಳು ತೆಗೆದು ಹೆಚ್ಚಿನ ನೀರು ಸಂಗ್ರಹವಾಗಲು ಅನುಕೂಲ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊಹಿನೂರಗೆ ಹೋಗುವ ರಸ್ತೆ ಮತ್ತು ಮಹಾದೇವ ದೇವಸ್ಥಾನದ ಹತ್ತಿರದ ಸೇತುವೆ ಹಾಳಾಗಿ ವಾಹನ ಸಂಚಾರ ದುಸ್ತರವಾಗಿದೆ. ಆದ್ದರಿಂದ ಶೀಘ್ರ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಬಸವರಾಜ ಆಗ್ರಹಿಸಿದ್ದಾರೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಎಲ್ಲ ಸ್ಥಾನಗಳು ಖಾಲಿ ಇವೆ. ಅತಿಥಿ ಶಿಕ್ಷಕರಿಂದ ಪಾಠ ಬೋಧನೆ ನಡೆಯುತ್ತಿದೆ. ಆದ್ದರಿಂದ ಶಿಕ್ಷಕರನ್ನು ತಕ್ಷಣ ಒದಗಿಸಬೇಕು ಎಂದು ಮಹಾದೇವ ಪಾಟೀಲ ಆಗ್ರಹಿಸಿದ್ದಾರೆ. ಇದು ತಾಲ್ಲೂಕಿನ ಕೊನೆಯಂಚಿನ ಗ್ರಾಮವಾಗಿದ್ದರಿಂದ ದಿನದಲ್ಲಿ ಮೂರು ಸಲ ಬಸ್ ಸಂಚರಿಸು­ವಂತೆಯೂ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.