ADVERTISEMENT

ಕೈಕೊಟ್ಟ ಮಳೆ: ಬೆಳೆಗಳಿಗೆ ಬಾವಿ ನೀರು

ಬಿತ್ತನೆ ಪೂರ್ಣವಾದರೂ ರೈತರಿಗೆ ತಪ್ಪದ ಸಂಕಟ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:40 IST
Last Updated 10 ಜುಲೈ 2017, 9:40 IST

ಬಸವಕಲ್ಯಾಣ: ಕಳೆದ ಇಪ್ಪತ್ತು ದಿನಗಳಿಂದ ಮಳೆ ಬೀಳದೆ ಇರುವುದರಿಂದ ಕೆಂಪು ಮಣ್ಣು ಮಿಶ್ರಿತ ಜಮೀನುಗಳಲ್ಲಿ ಬಿತ್ತಿರುವ ಬೆಳೆಗಳು ಹಾನಿಗೊಳಗಾಗುವ ಸಾಧ್ಯತೆ ಇದ್ದು, ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ಈ ಬಾರಿ ಮುಂಗಾರು ಸರಿಯಾದ ಸಮಯಕ್ಕೆ ಬಂದಿದ್ದರಿಂದ ತಾಲ್ಲೂಕಿನ ಎಲ್ಲೆಡೆ ಉತ್ತಮ ಮಳೆಯಾಗಿ ಸಕಾಲಕ್ಕೆ ಬಿತ್ತನೆ ಕಾರ್ಯವೂ ನಡೆದಿದೆ. ಸೂಕ್ತ ಸಮಯದಲ್ಲಿ ಮಳೆ ಬಂದಿದ್ದರಿಂದ ಸೋಯಾಬಿನ್ ಜತೆಯಲ್ಲಿ ಹೆಸರು ಮತ್ತು ಉದ್ದಿನ ಬಿತ್ತನೆಯೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಿತು. ತೊಗರಿ, ಸಜ್ಜೆ, ಎಳ್ಳು ಕೂಡ ಬಿತ್ತಲಾಗಿದ್ದು, ಶೇ 100 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಬೆಳೆಗಳು ಮೊಳಕೆ ಕೂಡ ಎದ್ದಿದ್ದು ಹೊಲಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ಆದರೆ, ಕಳೆದ ಎರಡು ವಾರಗಳಿಂದ ಮಳೆ ಬಾರದೆ ಬಿಸಿಲು ಬಿದ್ದಿದೆ. ಆದ್ದರಿಂದ ಕೆಂಪು ಮಣ್ಣಿನಲ್ಲಿನ ಬೆಳೆಗಳು ಹಸಿಯ ಕೊರತೆಯಾಗಿ ಹಳದಿ ಬಣ್ಣಕ್ಕೆ ತಿರುಗಿವೆ. ಎಲ್ಲ ಹೋಬಳಿಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದರೆ, ಹುಲಸೂರ ಹೋಬಳಿ ವ್ಯಾಪ್ತಿಯಲ್ಲಿ ಎಲ್ಲೆಡೆಗಿಂತ ಕಡಿಮೆ ಮಳೆ ಸುರಿದಿದೆ. ಈ ಕಾರಣ ಈ ಭಾಗದಲ್ಲಿನ ಬೆಳೆಗಳು ಬಾಡುತ್ತಿವೆ.

ADVERTISEMENT

ಮಳೆಗಾಗಿ ಪ್ರಾರ್ಥಿಸಿ ಹುಲಸೂರಿನಲ್ಲಿ ಹಾಗೂ ಯರಬಾಗದಲ್ಲಿನ ಲಕ್ಷ್ಮಿ ದೇವಸ್ಥಾನದಲ್ಲಿ  ವಿಶೇಷ ಪೂಜೆ ಮತ್ತು ಭಜನೆ ನಡೆಸಲಾಗಿದೆ. ಕೆಲವರು ಬಾವಿಯ ನೀರನ್ನು ಬೆಳೆಗಳಿಗೆ ಹರಿಸುತ್ತಿದ್ದಾರೆ. ಬೇಲೂರ ಗ್ರಾಮದ ವ್ಯಾಪ್ತಿಯಲ್ಲಿನ ರಾಜಕುಮಾರ ಪಾಟೀಲ ಅವರು ತಮ್ಮ ಮೂರು ಎಕರೆ ಹೊಲದಲ್ಲಿನ ಉದ್ದಿನ ಬೆಳೆಗೆ ಎರಡು ದಿನಗಳಿಂದ ಬಾವಿಯ ನೀರನ್ನು ಹರಿಸಿದ್ದಾರೆ.

‘ಅರಿದ್ರಾ ಮತ್ತು ಪುಷ್ಯ ಮಳೆ ಬಂದಿಲ್ಲ. ಹೀಗಾಗಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಈ ಕಾರಣ ಎರಡು ದಿನಗಳಿಂದ ಬಾವಿಯ ನೀರನ್ನು ಹೊಲಕ್ಕೆ ಹರಿಸಲಾಗುತ್ತಿದೆ’ ಎಂದು ರಾಜಕುಮಾರ ಪಾಟೀಲ ಹೇಳಿದ್ದಾರೆ.

‘ಬಸವಕಲ್ಯಾಣ ಪಟ್ಟಣದ ಸುತ್ತಲಿನಲ್ಲಿ ಕೆಂಪು ಮಣ್ಣಿನ ಜಮೀನಿದೆ. ಎರಡು ದಿನಗಳಲ್ಲಿ ಮಳೆ ಸುರಿಯದಿದ್ದರೆ ಮಂಠಾಳ, ರಾಜೇಶ್ವರ, ನಾರಾಯಣಪುರ ವ್ಯಾಪ್ತಿಯಲ್ಲಿ ಇಂಥ ಜಮೀನು ಇರುವಲ್ಲಿ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ’ ಎಂದು ರೈತರಾದ ಚಿದಂಬರ ಪಾಟೀಲ, ಮಾಣಿಕಪ್ಪ ಮೇಟಿಕಾರ ಹೇಳಿದ್ದಾರೆ.

‘ಬಿತ್ತನೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ. ಆದರೆ, ಕೆಲ ದಿನಗಳಲ್ಲಿ ಮಳೆ ಸುರಿಯುವುದು ಅತ್ಯಗತ್ಯವಾಗಿದೆ. ಸಕಾಲಕ್ಕೆ ಮಳೆ ಬಾರದಿದ್ದರೆ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಧೂಳಪ್ಪ ಹೊಸಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.