ADVERTISEMENT

ಕೋಟಿ ಖರ್ಚಾದರೂ ತಪ್ಪದ ಬವಣೆ

ಸಂತಪುರ: ಅತಿಕ್ರಮಣ ತೆರವಿನಿಂದ ಬೀದಿಗೆ ಬಂದ ಸಣ್ಣ ವ್ಯಾಪಾರಿಗಳು

ಮನ್ನಥಪ್ಪ ಸ್ವಾಮಿ
Published 7 ಮಾರ್ಚ್ 2017, 6:12 IST
Last Updated 7 ಮಾರ್ಚ್ 2017, 6:12 IST
ಕೋಟಿ ಖರ್ಚಾದರೂ ತಪ್ಪದ ಬವಣೆ
ಕೋಟಿ ಖರ್ಚಾದರೂ ತಪ್ಪದ ಬವಣೆ   
ಔರಾದ್: ತಾಲ್ಲೂಕಿನ ಸಂತಪುರ ಮತ್ತು ಸುತ್ತಲಿನ ಕೆಲವು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ಕೋಟ್ಯಂತರ ಹಣ ಖರ್ಚು ಮಾಡಿದರೂ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ. 
 
ಸಂತಪುರ, ಜೋಜನಾ, ಜೊನ್ನೆಕೇರಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಚಂದಾಪುರ ಬ್ಯಾರೇಜ್‌ನಿಂದ ಸುಮಾರು 12 ಕಿ.ಮೀ. ಪೈಪ್‌ಲೈನ್ ಮಾಡಲಾಗಿದೆ. ಈ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಜನರಿಗೆ ಹನಿ ನೀರು ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 
 
ಕಳೆದ ವರ್ಷ ಮಳೆ ಕೊರತೆಯಿಂದ ಬ್ಯಾರೇಜ್‌ನಲ್ಲಿ ನೀರು ಇಲ್ಲ ಎಂದು ನೆಪ ಹೇಳಿ ಕುಡಿಯುವ ನೀರು ಪೂರೈಸಿಲ್ಲ. ಈ ವರ್ಷ ಚೆನ್ನಾಗಿ ಮಳೆ ಆಗಿದ್ದು, ಬ್ಯಾರೇಜ್‌ ಬಳಿ ನೀರಿದ್ದರೂ ಪೂರೈಸಲು ಏನು ಸಮಸ್ಯೆ ಎಂದು ಜನ ಪ್ರಶ್ನೆ ಮಾಡಿದ್ದಾರೆ. 
 
ಕುಡಿಯುವ ನೀರು ಪೂರೈಸುವ ನೆಪದಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ. ಸರಿಯಾಗಿ ಕಾಮಗಾರಿ ನಡೆಯದ ಕಾರಣ ಜನರಿಗೆ ನೀರು ಪೂರೈಸಲು ಆಗುತ್ತಿಲ್ಲ ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ದೂರಿದ್ದಾರೆ.
 
ಸುಮಾರು 8 ಸಾವಿರ ಜನಸಂಖ್ಯೆಯ ಸಂತಪುರ ಹೋಬಳಿ ಕೇಂದ್ರವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ಮುನ್ನ ನೀರಿನ ಸಮಸ್ಯೆ ಎದುರಾಗಿದೆ. ಇರುವ ಎರಡು ಕೊಳವೆ ಬಾವಿಗಳಲ್ಲಿ ನೀರು ಕಮ್ಮಿಯಾಗಿದೆ. ತೆರೆದ ಬಾವಿಗಳಲ್ಲೂ ನೀರು ಆಳಕ್ಕೆ ಹೋಗಿ ಜನರು ತೀವ್ರ ತೊಂದರೆಯಲ್ಲಿದ್ದರೂ ಯಾರು ಕೇಳುವವರಿಲ್ಲ ಎಂದು ಜನ ಆಡಳಿತ ವ್ಯವಸ್ಥೆ ವಿರುದ್ಧ ಶಾಪ ಹಾಕುತ್ತಿದ್ದಾರೆ.
 
ಸಂತಪುರ ಗ್ರಾಮ ಪಂಚಾಯಿ ವ್ಯಾಪ್ತಿಯಲ್ಲಿ ಬರುವ ಮಸ್ಕಲ್ ತಾಂಡಾ ಜನ  ನೀರಿಗಾಗಿ ಪರದಾಡುತ್ತಿದ್ದಾರೆ. ನೀರು ಕುಡಿಸಿ ಇಲ್ಲವೇ ವಿಷ ಹಾಕಿ ಎಂದು ಅಲ್ಲಿಯ ಜನ ಈಚೆಗೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು.
 
'ನಮ್ಮ ತಾಂಡಾದಲ್ಲಿ ಎರಡು ತಿಂಗಳಿನಿಂದ ನೀರಿನ ಸಮಸ್ಯೆ ಇದೆ. ವಿದ್ಯುತ್ ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಸಂಬಂಧಿತರಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ತಾಂಡಾ ನಿವಾಸಿ ಗೋವಿಂದ ಚವಾಣ್ ದೂರಿದ್ದಾರೆ. 
 
ಈಚೆಗೆ ನಡೆದ ರಸ್ತೆ ಅತಿಕ್ರಮಣ ತೆರವಿನಿಂದ ಸಂತಪುರ ಸಣ್ಣ ವ್ಯಾಪಾರಿಗಳು ಬೀದಿಗೆ ಬಂದಿದ್ದಾರೆ. 100ಕ್ಕೂ ಹೆಚ್ಚು ಅಂಗಡಿಗಳು ಏಕಕಾಲಕ್ಕೆ ತೆರವು ಮಾಡಿರುವುದರಿಂದ ಸಂತಪುರದ ಬಹುತೇಕ ವ್ಯಾಪಾರ ವಹಿವಾಟು ನಿಂತು ಹೋಗಿದೆ. ಅಕ್ಕಪಕ್ಕದ ಊರಿನ ಸಣ್ಣ ವ್ಯಾಪಾರಿಗಳು ಮುಂಗಡ ಬಾಡಿಗೆ ಪಾವತಿಸಿ ವ್ಯಾಪಾರ ಮಾಡಿಕೊಂಡಿದ್ದರು.

ಆದರೆ ತಾಲ್ಲೂಕು ಆಡಳಿತ ದಿಢೀರ್ ತೆರವು ಕಾರ್ಯಾಚರಣೆ ಮಾಡಿರುವುದು ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅಂಗಡಿ ಮಾಲೀಕರು ಮುಂಗಡ ಹಣ ವಾಪಸ್ ಕೊಡಲು ತಯಾರಿಲ್ಲ. ಇತ್ತ  ವ್ಯಾಪಾರ  ಇಲ್ಲ. ಹೀಗಾಗಿ ನಾವು ಬದುಕುವುದಾದರೂ ಹೇಗೆ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡಿದ್ದಾರೆ. 
 
* ಜಲನಿರ್ಮಲ ಯೋಜನೆ ಕಾಮಗಾರಿ ಪೂರ್ಣ ಆಗದ ಕಾರಣ ಸಂತಪುರದ ಜನರಿಗೆ ನೀರು ಪೂರೈಸಲು ಆಗುತ್ತಿಲ್ಲ. ಪೈಪ್ ರಿಪೇರಿ ಕೆಲಸ ಆಗಬೇಕಿದೆ. 
ಜಗನ್ನಾಥ ಪೂಜಾರಿ, ಪಿಡಿಒ ಸಂತಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.