ADVERTISEMENT

ಜಿಲ್ಲೆಯಲ್ಲಿ 2056 ಕ್ಷಯ ರೋಗಿಗಳಿಗೆ ಚಿಕಿತ್ಸೆ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳ ಮಾಹಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:03 IST
Last Updated 24 ಮಾರ್ಚ್ 2017, 9:03 IST

ಬೀದರ್: ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದಲ್ಲಿ  ಪ್ರಸ್ತುತ  2,056 ಕ್ಷಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಾರ್ಥಂಡರಾವ್‌ ಕಾಶೆಂಪೂರಕರ್‌ ತಿಳಿಸಿದರು.

ಜಿಲ್ಲೆಯಲ್ಲಿ 2016ರಲ್ಲಿ ಒಟ್ಟು 13,283 ಶಂಕಿತ ಕ್ಷಯ ರೋಗಿಗಳ ಕಫ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 1073  ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 159  ಕ್ಷಯ ರೋಗಿಗಳು ಮರಣ ಹೊಂದಿದ್ದಾರೆ ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಂದು ಲಕ್ಷ ಜನರಲ್ಲಿ ಸುಮಾರು 217 ಮಂದಿಗೆ ಕ್ಷಯ ರೋಗ ಇದೆ. ಕ್ಷಯ ರೋಗಿ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಒಂದು ವರ್ಷದಲ್ಲಿ ಸುಮಾರು 15 ಜನರಿಗೆ ಈ ಸೋಂಕು ಹರಡುತ್ತದೆ. ಉಗುರು, ಕೂದಲು ಹೊರತುಪಡಿಸಿ ಬೇರೆಲ್ಲ ಅಂಗಗಳಿಗೆ  ಕ್ಷಯ ರೋಗ ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯ ರೋಗಿಗಳ ಬಗೆಗೆ  ಆಯಾ ಆಸ್ಪತ್ರೆಯ ವೈದ್ಯರು ಕಡ್ಡಾಯವಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರಕ್ಕೆ ನೀಡಬೇಕು. ಇದರಿಂದ ಜಿಲ್ಲೆಯಲ್ಲಿ ಕ್ಷಯ ರೋಗಿಗಳ ನಿಖರ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು.

ಬಹುತೇಕ ಕ್ಷಯ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಾರೆ.   ಕ್ಷಯ ರೋಗಿಗಳ  ಮಾಹಿತಿ ಒದಗಿಸುವಂತೆ ಖಾಸಗಿ ಆಸ್ಪತ್ರೆಯ ವೈದ್ಯರು  ಸೂಚನೆ ನೀಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.

ರೋಗದ ಲಕ್ಷಣಗಳು: ಸತತವಾಗಿ ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಫ ಭರಿತ ಕೆಮ್ಮು. ಸಂಜೆ ವೇಳೆಗೆ ಹೆಚ್ಚುವ ಜ್ವರ, ಕಫದಲ್ಲಿ ರಕ್ತ ಬೀಳುವುದು, ಎದೆಯಲ್ಲಿ ನೋವು, ಹಸಿವಾಗದಿರುವುದು  ಹಾಗೂ  ತೂಕದಲ್ಲಿ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳಾಗಿವೆ ಎಂದರು.

ರೋಗದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಮೀಪದ ಡಿಎಂಸಿ ಕೇಂದ್ರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಎರಡು ಬಾರಿ ಕಫ ಪರೀಕ್ಷೆ ಮಾಡಿಸಬೇಕು. ಜಿಲ್ಲೆಯ 16 ಡಿಎಂಸಿ ಕೇಂದ್ರಗಳಲ್ಲಿ ಕಫ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ಡಿಎಂಸಿ ಕೇಂದ್ರಗಳು: ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ವೈದ್ಯಕೀಯ ಮಹಾವಿದ್ಯಾಲಯ, ಬಗದಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಮನ್ನಾಎಖ್ಖೆಳ್ಳಿ ಸಮುದಾಯ ಆರೋಗ್ಯ ಕೇಂದ್ರ, ಚಿಟಗುಪ್ಪ ಸಮುದಾಯ ಆರೋಗ್ಯ ಕೇಂದ್ರ, ಹುಲಸೂರು ಸಮುದಾಯ ಆರೋಗ್ಯ ಕೇಂದ್ರ, ಭಾಲ್ಕಿ ಸಾರ್ವಜನಿಕ ಆಸ್ಪತ್ರೆ, ಕಮಲನಗರ ಸಮುದಾಯ ಆರೋಗ್ಯ ಕೇಂದ್ರ, ದುಬಲಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ,

ಚಿಲ್ಲರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಳ್ಳಿಖೇಡ(ಬಿ) ಸಮುದಾಯ ಆರೋಗ್ಯ ಕೇಂದ್ರ, ಬಸವಕಲ್ಯಾಣ, ಹುಮನಾಬಾದ್, ಔರಾದ್ ಸಾರ್ವಜನಿಕ ಆಸ್ಪತ್ರೆ, ಸಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಹಲಬರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಠಾಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಫ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.