ADVERTISEMENT

ಧರ್ಮ, ಸಂಸ್ಕೃತಿಯ ಸಂಘರ್ಷದಿಂದ ಅಪಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 7:05 IST
Last Updated 1 ಡಿಸೆಂಬರ್ 2017, 7:05 IST
ಬೀದರ್‌ನಲ್ಲಿ ಜಿಲ್ಲಾ ಜಾನಪದ ಸಂಭ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಪಾರ್ವತಿ ಸೋನಾರೆ, ಜಯದೇವಿ ಗಾಯಕವಾಡ, ಲಕ್ಷ್ಮೀಪತಿ ಕೋಲಾರ, ಬಿ.ಟಾಕಪ್ಪ, ಚಂದ್ರಪ್ಪ ಹೆಬ್ಬಾಳಕರ್, ರಾಜಶೇಖರ ವಟಗೆ, ಎಸ್‌.ವಿ.ಕಲ್ಮಠ ಇದ್ದಾರೆ
ಬೀದರ್‌ನಲ್ಲಿ ಜಿಲ್ಲಾ ಜಾನಪದ ಸಂಭ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿದರು. ಪಾರ್ವತಿ ಸೋನಾರೆ, ಜಯದೇವಿ ಗಾಯಕವಾಡ, ಲಕ್ಷ್ಮೀಪತಿ ಕೋಲಾರ, ಬಿ.ಟಾಕಪ್ಪ, ಚಂದ್ರಪ್ಪ ಹೆಬ್ಬಾಳಕರ್, ರಾಜಶೇಖರ ವಟಗೆ, ಎಸ್‌.ವಿ.ಕಲ್ಮಠ ಇದ್ದಾರೆ   

ಬೀದರ್‌: ‘ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಯ ನಡುವೆ ಸಂಘರ್ಷ ಆರಂಭವಾಗಿದೆ. ಅವುಗಳ ನಡುವಿನ ವ್ಯತ್ಯಾಸ ಅರಿತುಕೊಳ್ಳದೇ ಹೋದರೆ ಬಹುದೊಡ್ಡ ಅಪಾಯ ಎದುರಾಗಲಿದೆ’ ಎಂದು ಜಾನಪದ ವಿದ್ವಾಂಸ ಲಕ್ಷ್ಮೀಪತಿ ಕೋಲಾರ ಹೇಳಿದರು.

ನಗರದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ಜಿಲ್ಲಾ ಜಾನಪದ ಸಂಭ್ರಮ ಅಂಗವಾಗಿ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕದ ಜಾನಪದ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಜಾನಪದ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಇವೆ. ಇವುಗಳನ್ನು ಉಳಿಸಿಕೊಂಡರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಜಾನಪದ ಹಾಗೂ ಸಂಗೀತವು ಮನಸ್ಸಿನಲ್ಲಿರುವ ಕಲ್ಮಶವನ್ನು ಹೊರಗೆ ಹಾಕಿ ನಿರಾಳ ಆಗುವಂತೆ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

‘ಹಿಂದೆ ಧರ್ಮ, ಸಂಸ್ಕೃತಿ ಹಾಗೂ ಆಚರಣೆಗಳು ಹೇಗಿದ್ದವು ಎನ್ನುವುದನ್ನು ಜಾನಪದದ ಮೂಲಕ ಅರಿತುಕೊಳ್ಳಬಹುದಾಗಿದೆ. ಕಳೆದು ಹೋಗಿರುವ ಸಂಸ್ಕೃತಿಯನ್ನು ಹೆಚ್ಚಿನ ಸಂಶೋಧನೆ ಮಾಡಿ ಅರಿತುಕೊಳ್ಳಬೇಕಿದೆ’ ಎಂದು ಹೇಳಿದರು.

‘ಜಾನಪದವು ಜೀವ ಸಂಕುಲದ ಒಳಿತನ್ನು ಬಯಸುವ ಸಾಹಿತ್ಯವಾಗಿದೆ. ಯಾರಿಗೂ ಕೆಡಕನ್ನು ಬಯಸುವುದಿಲ್ಲ. ವೈವಿಧ್ಯಮಯವಾದ ಜೀವನ ಶೈಲಿಯನ್ನು ಅರ್ಥ ಮಾಡಿಕೊಂಡು ಘನತೆಯನ್ನು ಕಾಯ್ದುಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಉಳಿದ ಕ್ಷೇತ್ರಗಳಲ್ಲಿ ಆಗಿರುವಷ್ಟು ಸಂಶೋಧನೆಗಳು ಜಾನಪದದಲ್ಲಿ ಆಗಿಲ್ಲ. ದಕ್ಷಿಣ ಭಾರತ ಜಾನಪದ ಸಂಸ್ಕೃತಿಯ ಬೇರು ಮುರುಘ. ಈತ ದೇವರಲ್ಲ. ಮುರುಘನನ್ನು ಕುಮಾರ, ಷಣ್ಮಖ ಹೀಗೆ ಅನೇಕ ಹೆಸರುಗಳಲ್ಲಿ ಕರೆಯಲಾಗಿದೆ. ಪಿತೃಗಳಲ್ಲಿ ಪ್ರಾಚೀನವಾದವರು ಮುರುಘ. ದಕ್ಷಿಣ ಭಾರತೀಯರ ಪಿತೃ. ಇವನನ್ನು ತಮಿಳುನಾಡಿಗೆ ಸೀಮಿತಗೊಳಿಸಲಾಗಿದೆ. ದಕ್ಷಿಣ ಭಾರತದಲ್ಲಿ ದೇವರ ಪರಿಕಲ್ಪನೆಯೇ ಇಲ್ಲ. ದೇವ ಪದವೇ ನಮ್ಮದಲ್ಲ. ಸಂಸ್ಕೃತಕ್ಕೆ ಪರ್ಷಿಯಾ ಭಾಷೆಯಿಂದ ದೇವ ಪದ ಬಂದಿದೆ’ ಎಂದು ತಿಳಿಸಿದರು.

‘ಆಸ್ಟ್ರೇಲಿಯಾದ ಆದಿವಾಸಿಗಳು ಮೊಟ್ಟ ಮೊದಲು ಜಾನಪದ ಹಾಡು ಹಾಡಿದ್ದಾರೆ. ಆದಿ ಜಾಂಬವ ಪುರಾಣ ಮಹಾಕಾವ್ಯ ಇದು ಜಾನಪದದ ಒಂದು ಭಾಗವಾಗಿದೆ. ಸಂಶೋಧನೆ ಮಾಡುವವರಿಗೆ ಜಾನಪದ ಕಲೆಯಲ್ಲಿ ತಿಳಿವಳಿಕೆ ಇರುತ್ತದೆ. ಆದರೆ ಸಂಸ್ಕೃತಿಯ ನೆಲೆಯಲ್ಲಿ ತಿಳಿವಳಿಕೆ ಇರುವುದಿಲ್ಲ. ಪುರಾತತ್ವ ಶಾಸ್ತ್ರದ ಅರಿವೂ ಇರುವುದಿಲ್ಲ. ಎಲ್ಲ ಮಗ್ಗಲುಗಳಿಂದ ಸಂಶೋಧನೆ ನಡೆದರೆ ಹೆಚ್ಚಿನ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಪರಂಪರೆಯ ವಾಹಕ ಜನಪದ:
ವಿಚಾರ ಸಂಕಿರಣ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ, ‘ಪರಂಪರೆಯ ವಾಹಕ ಜನಪದ. ಜಾನಪದ ಸಾಹಿತ್ಯವು ಮೌಖಿಕವಾಗಿ ಹರಡಿದರೆ, ಕಲೆಯು ಕಲಾವಿದರ ಆಸಕ್ತಿಯ ಫಲವಾಗಿ ಬೆಳೆದು ಬಂದಿದೆ. ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

‘ತತ್ವಪದ ಸಾಹಿತ್ಯಕ್ಕೆ ಬಹುದೊಡ್ಡ ಪರಂಪರೆ ಇದೆ. ಜಿಲ್ಲೆಯಲ್ಲಿ 75 ತತ್ವಪದರು ಆಗಿ ಹೋಗಿದ್ದಾರೆ. ಹೈದರಾಬಾದ್‌ ಕರ್ನಾಟಕದಲ್ಲಿ ಸುಮಾರು 300 ತತ್ವಪದರನ್ನು ಕಾಣಬಹುದಾಗಿದೆ. ಗಾದೆ ಮಾತೆ ಇಲ್ಲದ ಭಾಷೆ ಇಲ್ಲ. ಇದನ್ನು ಭಾಷಾ ತಜ್ಞರೂ ದೃಢಪಡಿಸಿದ್ದಾರೆ’ ಎಂದು ತಿಳಿಸಿದರು.

‘ಜಾನಪದದಲ್ಲಿ ಬುದ್ಧಿ ಕಸರತ್ತಿನ ಒಗಟುಗಗಳು ಇವೆ. ಗಂಡ ಹೆಂಡಿರ ಮಧ್ಯೆ ಪ್ರೀತಿ ವಾತ್ಸಲ್ಯ ಬೆಳೆಸುವ ಒಡಪುಗಳೂ ಇವೆ’ ಎಂದು ಹೇಳಿದರು. ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಹಾಗೂ ಕತೆಗಾರ್ತಿ ಪಾರ್ವತಿ ಸೋನಾರೆ ತಮ್ಮ ವಿಚಾರ ಮಂಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯೆ ಜಯದೇವಿ ಗಾಯಕವಾಡ, ಕರ್ನಾಟಕ ಸಂಗೀತ ಅಕಾಡೆಮಿ ಸದಸ್ಯ ಎಸ್‌.ವಿ.ಕಲ್ಮಠ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ, ಸದಸ್ಯ ವಿಜಯಕುಮಾರ ಸೋನಾರೆ, ರಿಜಿಸ್ಟ್ರಾರ್‌ ಸಿದ್ರಾಮ ಸಿಂಧೆ ಇದ್ದರು.

ಬೆಂಗಳೂರಿನ ಜೋಗಿಲ್‌ ಸಿದ್ಧರಾಜ, ಬೀದರ್‌ನ ಕವಿತಾ ಮಠಪತಿ ಹಾಗೂ ಶಿವಕುಮಾರ ಪಾಂಚಾಳ ಜಾನಪದ ಗೀತೆಗಳನ್ನು ಹಾಡಿದರು. ನಾಟ್ಯಶ್ರೀ ನೃತ್ಯಾಲಯದ ಅಕಾಡೆಮಿ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸಿದರು. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಶ್ರೀದೇವಿ ಹೂಗಾರ ನಿರೂಪಿಸಿದರು.

* * 

ಹೊಸದಾಗಿ ಮದುವೆ ಆದವರಿಗೆ ಹೆಂಡತಿ ಅಥವಾ ಗಂಡನ ಹೆಸರು ಹೇಳುವುದು ಈಗಲೂ ರೂಢಿಯಲ್ಲಿದೆ. ಪ್ರೀತಿ ಉಕ್ಕಿ ಹರಿಯಬೇಕು ಎನ್ನುವುದು ಹಿರಿಯರ ಉದ್ದೇಶವಾಗಿತ್ತು.
ಲಕ್ಷ್ಮೀಪತಿ ಕೋಲಾರ
ಜಾನಪದ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.