ADVERTISEMENT

ನಗರದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ

ಶಂಕುಸ್ಥಾಪನೆ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:36 IST
Last Updated 10 ಜುಲೈ 2017, 9:36 IST

ಬೀದರ್: ‘ನಗರದ ಜಿಲ್ಲಾಧಿಕಾರಿ ಕಚೇರಿ ಇರುವ ಸ್ಥಳದಲ್ಲಿಯೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಿರುವ ಜಿಲ್ಲಾಧಿಕಾರಿ ಕಚೇರಿ, ತೋಟಗಾರಿಕೆ ಇಲಾಖೆಯ ಕಚೇರಿ, ಲೋಕೋಪಯೋಗಿ ಇಲಾಖೆಯ ವಸತಿ ಗೃಹ ಸೇರಿದಂತೆ ಸುತ್ತಮುತ್ತ ಇರುವ ಒಟ್ಟು 10 ಎಕರೆ ಜಾಗದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಹಾಗೂ ಮಿನಿ ವಿಧಾನಸೌಧ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘₹ 48.28 ಕೋಟಿ ವೆಚ್ಚದಲ್ಲಿ ಚಿಕ್ಕಪೇಟ್‌ ಸಮೀಪ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ 2014–15ನೇ ಸಾಲಿನಲ್ಲಿಯೇ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈಗ ಸ್ಥಳ ಬದಲಾವಣೆ ಮಾಡಲಾಗಿದೆ. ಹೀಗಾಗಿ ಮತ್ತೆ ಆಡಳಿತಾತ್ಮಕ ಅನುಮೋದನೆ ಪಡೆದು ಆಗಸ್ಟ್‌ ಮೊದಲನೆ ವಾರದಲ್ಲಿ 450 ಹಾಸಿಗೆಯ ನೂತನ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಲು ಜಿಲ್ಲೆಗೆ ಬರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ನೆರವೇರಿಸುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ADVERTISEMENT

‘ಸಂಕೀರ್ಣದ ನಿವೇಶನ ಅಂತಿಮಗೊಳಿಸುವ ಕೆಲಸ ಎರಡು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಈ ಕುರಿತು ಅನೇಕ ಬಾರಿ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ಜನಪ್ರನಿತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಬಳಿಕ ಸಂಕೀರ್ಣ ನಿರ್ಮಾಣ ಮಾಡುವ ಜಾಗ ಅಂತಿಮಗೊಳಿಸಲಾಗಿದೆ’ ಎಂದು ಹೇಳಿದರು.

‘ಎಂಜಿನಿಯರಿಂಗ್‌ ಕಾಲೇಜು, ಮಹಿಳಾ ಪದವಿ ಕಾಲೇಜು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ವರ್ತುಲ ರಸ್ತೆ, ಬೀದರ್–ಚಿಂಚೋಳಿ ರಸ್ತೆ ನಿರ್ಮಾಣ ಕಾಮಗಾರಿ, ನೆಹರೂ ಕ್ರೀಡಾಂಗಣ, ಅಮೃತ್‌ ಯೋಜನೆ ಕಾಮಗಾರಿ, ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಲಭ್ಯಗಳು ಒದಗಿಸುವ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನೆರವೇರಿಸಲಿದ್ದಾರೆ’ ಎಂದು ತಿಳಿಸಿದರು.

ಕಾಲುವೆ ಅಗಲಿಕರಣಕ್ಕೆ ಪ್ರಸ್ತಾವ: ‘ಕಾರಂಜಾ ಹಾಗೂ ಚುಳಕಿನಾಲಾ ಜಲಾಶಯ ಮೂಲಕ ರೈತರ ಹೊಲಗಳಿಗೆ ನೀರು ಬಿಡುವ ಕಾಲುವೆಗಳನ್ನು ಇನ್ನಷ್ಟು ಅಗಲೀಕರಣ ಮಾಡುವುದಕ್ಕಾಗಿ ಪ್ರಸ್ತಾವ ಸಿದ್ಧಪಡಿಸಲಾಗಿದೆ.

ಅಲ್ಲದೇ, ಬಚಾವತ್‌ ಆಯೋಗ ವರದಿ ಪ್ರಕಾರ ಗೋದಾವರಿ ನದಿಯಿಂದ ಜಿಲ್ಲೆಗೆ ಲಭ್ಯವಿರುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸಮಾರು ₹ 500 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಖ್ಯಮಂತ್ರಿಗಳು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ವಿಶ್ವಾಸವಿದೆ’ ಎಂದು ತಿಳಿಸಿದರು.

ನೂತನ ಅನುಭವ ಮಂಟಪ: ‘ ಜಿಲ್ಲೆಯ ಬಸವಕಲ್ಯಾಣವನ್ನು ಅಂತರರಾಷ್ಟ್ರೀಯ ಮಟ್ಟದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಟ್ಟಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಧುನಿಕ ಶೈಲಿಯ ನೂತನ ಅನುಭವ ಮಂಟಪ ನಿರ್ಮಾಣ ಮಾಡಲು ಗೊ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸಲ್ಲಿಸುವ ವರದಿಯನ್ನು ಇದೇ 25ರ ಒಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌, ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.