ADVERTISEMENT

ನಗರದಲ್ಲಿ ರಾಜಾರೋಷ ಜಮೀನು ಕಬಳಿಕೆ

ದೇಗುಲ ಹೆಸರಲ್ಲೇ ಅತಿಹೆಚ್ಚು ಉದ್ಯಾನಗಳ ಅತಿಕ್ರಮಣ

ಚಂದ್ರಕಾಂತ ಮಸಾನಿ
Published 30 ಜನವರಿ 2017, 6:49 IST
Last Updated 30 ಜನವರಿ 2017, 6:49 IST
ಬೀದರ್‌ನ ಗಣೇಶ ಮೈದಾನದಲ್ಲಿ ನಿರ್ಮಿಸಲಾದ ಗಣೇಶ ಮಂದಿರ
ಬೀದರ್‌ನ ಗಣೇಶ ಮೈದಾನದಲ್ಲಿ ನಿರ್ಮಿಸಲಾದ ಗಣೇಶ ಮಂದಿರ   
ಬೀದರ್‌: ಹರ್ಷ ಗುಪ್ತ ಜಿಲ್ಲಾಧಿಕಾರಿಯಾಗಿದ್ದಾಗ ನಗರದಲ್ಲಿ ಅತಿಕ್ರಮಣ ತೆರವು ಕಾರ್ಯವು ಆಂದೋಲನ ಮಾದರಿಯಲ್ಲಿ ನಡೆದಿತ್ತು. ನಂತರ ಅಕ್ರಮಕ್ಕೆ ಕಡಿವಾಣವೂ ಬಿದ್ದಿತ್ತು. ಈಗ ಮತ್ತೆ ಭೂಗಳ್ಳರ ಹಾವಳಿ ಹೆಚ್ಚಾಗಿದೆ. ಗಣೇಶ, ಶಿವ, ಹನುಮ ಹಾಗೂ ಆಯಾ ಸಮುದಾಯದ ಕುಲದೇವರ ಹೆಸರಿನಲ್ಲಿ ನಗರಸಭೆ ಜಾಗ ಅತಿಕ್ರಮಣಗೊಂಡಿದೆ.
 
ನಗರಸಭೆ ಅಧಿಕಾರಿಗಳ ಮೌನ ಸಮ್ಮತಿ, ಚುನಾಯಿತ ಪ್ರತಿನಿಧಿಗಳ ಪರೋಕ್ಷ ಬೆಂಬಲದಿಂದಾಗಿ ದೇವಸ್ಥಾನ ಹಾಗೂ ಪ್ರಾರ್ಥನಾ ಸ್ಥಳದ ಹೆಸರಲ್ಲಿ ನಗರದ ಪ್ರಮುಖ 34 ಉದ್ಯಾನಗಳು ಅತಿಕ್ರಮಣಗೊಂಡಿವೆ. ಉದ್ಯಾನ ಹಾಗೂ ರಸ್ತೆ ಮಧ್ಯೆ ನಿರ್ಮಾಣಗೊಂಡಿರುವ ಧಾರ್ಮಿಕ ಕಟ್ಟಡಗಳ ವಿವರ ಕೇಳಿರುವ ಸುಪ್ರೀಂಕೋರ್ಟ್‌ಗೆ ಬೀದರ್‌ ನಗರಸಭೆಯು ಸಲ್ಲಿಸಿರುವ ದಾಖಲೆಯಲ್ಲಿ ಒಟ್ಟು 74 ಸ್ಥಳಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿರುವುದನ್ನು ಉಲ್ಲೇಖಿಸಿದೆ. 
 
ನಗರದ 10 ಉದ್ಯಾನಗಳಲ್ಲಿ ಗಣೇಶ ಮಂದಿರ, 7 ಉದ್ಯಾನಗಳಲ್ಲಿ ಹನುಮಾನ ಮಂದಿರ, 3 ಉದ್ಯಾನಗಳಲ್ಲಿ ಭವಾನಿ ಇಲ್ಲವೆ ದೇವಿಮಂದಿರ, 5 ಉದ್ಯಾನಗಳಲ್ಲಿ ಶಿವ ಮಂದಿರ, 3 ಉದ್ಯಾನಗಳಲ್ಲಿ ಬಸವೇಶ್ವರ ದೇವಸ್ಥಾನ, ಉಳಿದ ಆರು ಉದ್ಯಾನಗಳಲ್ಲಿ ರಾಘವೇಂದ್ರ, ಪಾಂಡುರಂಗ, ಸಾಯಿ, ಮೌನೇಶ್ವರ, ರೇವಪ್ಪಯ್ಯ ಮಂದಿರ, ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಒಂದು ಉದ್ಯಾನದಲ್ಲಿ ಅಕ್ರಮವಾಗಿ ಶಾಲಾ ಕಟ್ಟಡ ತಲೆ ಎತ್ತಿದೆ. ಧರ್ಮ ಬೋಧನೆ ಮಾಡುವ ನಗರದ ನಾಮಾಂಕಿತರು ಸರ್ಕಾರದ ಜಾಗವನ್ನು ಕಬಳಿಸುವಲ್ಲಿ ಮುಂಚೂಣಿಯಲ್ಲಿರುವುದು ವಿಶೇಷ. ಪ್ರಬಲ ಸಮುದಾಯದವರೇ ಇರುವ ನಗರಸಭೆಯ ವಾರ್ಡ್‌ ನಂ.19ರಲ್ಲಿಯೇ ಅತಿಹೆಚ್ಚು ಜಾಗ ಅತಿಕ್ರಮಣ ಮಾಡಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.  
 
ರಸ್ತೆ ಮೇಲಿನ ಪ್ರಾರ್‌ಥನಾಲಯಗಳ ಬಗ್ಗೆ ಆರಂಭದಲ್ಲಿ ಮೌನ ಸಮ್ಮತಿ ನೀಡಿರುವ ಅಧಿಕಾರಿಗಳು ಈಗ ಪ್ರಾರ್ಥನಾ ಸ್ಥಳಗಳನ್ನು ತೆರವುಗೊಳಿಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಹೇಳಿಕೆ ನೀಡ ತೊಡಗಿದ್ದಾರೆ.
 
**
ವರದಿ ರವಾನೆ 
ಸರ್ಕಾರಿ ಆಸ್ತಿಯಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿದ ಬಗೆಗೆ ಕಲಬುರ್ಗಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿ ಕಚೇರಿ ಮೂಲಕ ವಿವರಣೆ ಕೇಳಿದ್ದಾರೆ. ಈಗಾಗಲೇ ಮಾಹಿತಿ ಒದಗಿಸಲಾಗಿದೆ ಎಂದು ಎನ್ನುತ್ತಾರೆ ನಗರಸಭೆಯ ಆಯುಕ್ತ ನರಸಿಂಹಮೂರ್ತಿ.
 
**
ಮತಬ್ಯಾಂಕ್‌   ರಾಜಕೀಯ
ಪ್ರಾರ್ಥನಾ ಲಯತೆರವುಗೊಳಿಸಿದರೆ ಸಮುದಾಯಗಳ ಮತಗಳು ಕೈತಪ್ಪಲಿವೆ ಎಂದು  ಚುನಾಯಿತ ಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳಿಗೂ  ಬಿಡುತ್ತಿಲ್ಲ ಎನ್ನುತ್ತಾರೆ ಸರ್ವೋದಯ ಯುವಕ ಸಂಘದ ಅಧ್ಯಕ್ಷ  ಸ್ವಾಮಿದಾಸ ಕೆಂಪೆನೋರ್.
 
**
ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.  ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡುವಂತೆ ಆದೇಶ ನೀಡಲಾಗಿದೆ.
-ಈಶ್ವರ ಖಂಡ್ರೆ , ಜಿಲ್ಲಾ ಉಸ್ತುವಾರಿ ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.