ADVERTISEMENT

ಪರಿಸರ ಹಸಿರೀಕರಣದತ್ತ ಪೊಲೀಸರ ಹೆಜ್ಜೆ

₹40 ಲಕ್ಷ ವೆಚ್ಚದಲ್ಲಿ ಪ್ರೇಕ್ಷಕರ ಗ್ಯಾಲರಿ ಅಭಿವೃದ್ಧಿ: ಗಿಡ, ಮರಗಳನ್ನು ಬೆಳೆಸಲು ಪ್ರಾಮುಖ್ಯತೆ

ಚಂದ್ರಕಾಂತ ಮಸಾನಿ
Published 16 ಏಪ್ರಿಲ್ 2018, 6:29 IST
Last Updated 16 ಏಪ್ರಿಲ್ 2018, 6:29 IST
ಬೀದರ್‌ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದ ಉದ್ಯಾನ
ಬೀದರ್‌ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದ ಉದ್ಯಾನ   

ಬೀದರ್‌: ಇಲ್ಲಿಯ ಪೊಲೀಸ್ ಮುಖ್ಯಾಲಯದ ಪರಿಸರದಲ್ಲಿ ನಿಧಾನವಾಗಿ ಬದಲಾವಣೆ ಕಂಡು ಬರುತ್ತಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ಡಿ.ದೇವರಾಜ ಅವರು ಅಧಿಕಾರ ವಹಿಸಿಕೊಂಡ ನಂತರ ಗಿಡ, ಮರಗಳನ್ನು ಬೆಳೆಸಲು ಪ್ರಾಮುಖ್ಯ ನೀಡಿದ್ದು, ಹಸಿರೀಕರಣದ ಕಾರ್ಯ ಸದ್ದಿಲ್ಲದೆ ಸಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿ ಹಸಿರು ಹುಲ್ಲು ಬೆಳೆಸಲಾಗಿದೆ. ಮಧ್ಯದಲ್ಲಿ ನೀರಿನ ಮೂರು ಚಿಕ್ಕಕೊಳಗಳನ್ನೂ ನಿರ್ಮಿಸಿ ಗುಲಾಬಿ, ಬಿಳಿ ಹಾಗೂ ಹಳದಿ ಬಣ್ಣದ ಕಮಲದ ಬಳ್ಳಿಗಳನ್ನು ಬೆಳೆಸಲಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಈ ಕೊಳಗಳಲ್ಲಿ ಸೊಳ್ಳೆ ತಿನ್ನುವ ಲಾರ್ವಾ ಮೀನುಗಳನ್ನೂ ಬಿಡಲಾಗಿದೆ. ಉದ್ಯಾನದಲ್ಲಿ ಅಲ್ಲಲ್ಲಿ ಅಲಂಕಾರಿಕ ಸಸ್ಯ ಹಾಗೂ ಪುಷ್ಪಗಳ ಗಿಡಗಳನ್ನು ನೆಡಲಾಗಿದ್ದು, ಹಚ್ಚ ಹಸಿರಾಗಿ ಕಾಣುವಂತೆ ಸ್ಪ್ರಿಂಕ್ಲರ್‌ಗಳನ್ನು ಬಳಸಲಾಗಿದೆ.

ಕಟ್ಟಡದ ಎದುರು ಮಿಶ್ರಲೋಹದ ದೊಡ್ಡದಾದ ತೋಪು ಇದೆ. ಹಿರಿಯ ಅಧಿಕಾರಿಗಳು ಬಂದಾಗ ಗೌರವ ವಂದನೆ ಸಲ್ಲಿಸಲು ತೋಪಿನ ಸುತ್ತ ಕಾಲು
ದಾರಿ ನಿರ್ಮಿಸಲಾಗಿದೆ. ಉದ್ಯಾನದ ಒಂದು ಬದಿಯಲ್ಲಿ ಮರದ ಕೆಳಗೆ ಅಚ್ಚುಕಟ್ಟಾಗಿ ಕಟ್ಟೆ ನಿರ್ಮಿಸಿ ಅದರ ಮೇಲೆ ಪುರಾತನ ಅವಶೇಷಗಳನ್ನು ಸುರಕ್ಷಿತವಾಗಿ ಇಡಲಾಗಿದೆ. ನಂದಿಯ ಮೇಲೆ ಸಾಗುತ್ತಿರುವ ಶಿವ ಪಾರ್ವತಿ, ಧ್ಯಾನಸ್ಥ ಶಿವ, ನಂದಿ, ಮದನಿಕೆಯ ಶಿಲ್ಪಗಳು ಉದ್ಯಾನದಲ್ಲಿ ಗಮನ ಸೆಳೆಯುತ್ತಿವೆ.

ADVERTISEMENT

ಇಟ್ಟಿಗೆಗಳನ್ನು ಸಮನಾಂತರವಾಗಿ ಜೋಡಿಸಿ ಮಧ್ಯದಲ್ಲಿ ಕೆಂಪು ಮಣ್ಣು ಸುರಿದು ಅಚ್ಚುಕಟ್ಟಾದ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. ದಟ್ಟವಾಗಿ ಬೆಳೆಯುವ ಅಲಂಕಾರಿಕ ಸಸ್ಯವನ್ನೇ ಬೇಲಿ ರೂಪದಲ್ಲಿ ಬೆಳೆಸಲಾಗಿದೆ. ಹೆಚ್ಚು ಆಮ್ಲಜನಕ ಹಾಗೂ ನೆರಳು ಕೊಡುವ ಮರಗಳ ಸಸಿಗಳಿಗೆ ಪ್ರಾಮುಖ್ಯ ನೀಡಿ ಬೆಳೆಸಲಾಗಿದೆ. ‘ದುರಂತ್’ ಹೆಸರಿನ ವರ್ಣರಂಜಿತವಾಗಿ ಬೆಳೆಯುವ ಸಸಿಗಳನ್ನು ನೆಡಲಾಗಿದೆ. ಕಚೇರಿ ಸುತ್ತಲೂ ಹುಲ್ಲು ಹಾಸು ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ.

ಪೊಲೀಸ್‌ ಹುತಾತ್ಮ ಸ್ಮಾರಕದ ಬಳಿಯೂ ಇದೇ ಮಾದರಿಯಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೈದಾನ ಸುತ್ತಲೂ ಕಾಲುದಾರಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯ ರಸ್ತೆಯಿಂದ ಕಟ್ಟಡದ ವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ. 1907ರಲ್ಲಿ ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡ ಹಳೆಯ ಪೊಲೀಸ್‌ ಮುಖ್ಯಾಲಯಕ್ಕೆ ಶ್ವೇತ ಬಣ್ಣ ಬಳಿದು ಅದರ ಅಂದವನ್ನು ಹೆಚ್ಚಿಸಲಾಗಿದೆ.

ಹೊಸ ಪ್ರೇಕ್ಷಕರ ಗ್ಯಾಲರಿ: ಪೊಲೀಸ್‌ ಕವಾಯತು ಮೈದಾನದ ಒಂದು ಬದಿಯಲ್ಲಿ ಚಿಕ್ಕದಾದ ಎರಡು ಪ್ರೇಕ್ಷಕರ ಗ್ಯಾಲರಿಗಳು ಇವೆ. ಇನ್ನೆರಡು ಹೆಚ್ಚುವರಿ ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಗ್ಯಾಲರಿಯಲ್ಲಿ 500ರಂತೆ ನಾಲ್ಕು ಗ್ಯಾಲರಿಗಳಲ್ಲಿ ಎರಡು ಸಾವಿರ ಜನ ಕುಳಿತು ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ, ಪೊಲೀಸ್‌ ಕ್ರೀಡಾಕೂಟ ಮತ್ತಿತರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

‘ಇಲ್ಲಿ ಪ್ರೇಕ್ಷಕರ ಗ್ಯಾಲರಿ ಇದ್ದರೂ ಮೇಲ್ಛಾವಣಿ ಇರಲಿಲ್ಲ. 12 ವರ್ಷಗಳ ಹಿಂದೆಯೇ ಪೊಲೀಸ್‌ ಇಲಾಖೆಗೆ ಬಂದಿದ್ದ ಹಣ ಬಳಕೆಯಾಗಿರಲಿಲ್ಲ. ಹಳೆಯ ಯೋಜನೆಯಲ್ಲೇ ಕಾಮಗಾರಿ ನಡೆದಿದೆ. ₹40 ಲಕ್ಷ ವೆಚ್ಚದಲ್ಲಿ ಈಗಿರುವ ಎರಡು ಗ್ಯಾಲರಿಗಳನ್ನು ಹೊರತುಪಡಿಸಿ ಅವುಗಳ ಬದಿಯಲ್ಲಿ ತಲಾ 150 ಅಡಿಯ ಎರಡು ಹೊಸ ಪ್ರೇಕ್ಷಕರ ಗ್ಯಾಲರಿಗಳು ನಿರ್ಮಾಣವಾಗಲಿವೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌. ‘ನಿರ್ಮಿತಿ ಕೇಂದ್ರದವರು ಕಾಮಗಾರಿಯನ್ನು ಕೈಗೊಳ್ಳುತ್ತಿದ್ದಾರೆ. ಮೇ 31ಕ್ಕೆ ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿಲಿದ್ದು, ಉದ್ಘಾಟನೆಗೆ ಅಣಿಯಾಗಲಿದೆ’ ಎನ್ನುತ್ತಾರೆ.

‘ಜೂನ್‌ ವೇಳೆಗೆ ಉದ್ಯಾನ ಇನ್ನಷ್ಟು ಅರಳಿ ನಿಲ್ಲಲಿದೆ. ಪೊಲೀಸ್‌ ಸಿಬ್ಬಂದಿ ಹಾಗೂ ಇಲ್ಲಿಗೆ ಬರುವ ರಿಗೂ ಆಹ್ಲಾದಕರ ವಾತಾವರಣ
ವನ್ನು ಸವಿಯಲು ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ.

**

ಪೊಲೀಸ್‌ ಮುಖ್ಯಾಲಯದ ಆವರಣದಲ್ಲಿ ಈಗಾಗಲೇ ಅನೇಕ ಮರಗಳನ್ನು ಬೆಳೆಸಲಾಗಿದೆ. ಇನ್ನಷ್ಟು ಗಿಡ ಬೆಳೆಸಿ ಹಸಿರು ವಲಯ ಮಾಡುವ ಉದ್ದೇಶ ಇದೆ –  ಡಿ.ದೇವರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.