ADVERTISEMENT

ಪೂರ್ಣ ಪ್ರಮಾಣ ಜಾರಿಯಾಗದ 371 (ಜೆ)

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 5:41 IST
Last Updated 19 ಸೆಪ್ಟೆಂಬರ್ 2017, 5:41 IST

ಬಸವಕಲ್ಯಾಣ: ‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ 371 (ಜೆ) ಅನ್ವಯ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ನೀಡಲಾಗಿಲ್ಲ. ಬರೀ ಸಿ.ಸಿ ರಸ್ತೆಗಳನ್ನು ನಿರ್ಮಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಮೂಲಸೌಲಭ್ಯಗಳ ವ್ಯವಸ್ಥೆ ಆಗಬೇಕು’ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ತಾಲ್ಲೂಕು ಆಡಳಿತದಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹೈದರಾಬಾದ್ ಕರ್ನಾಟ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡದೆ ಇಲಾಖೆವಾರು ಹಣ ಬಿಡುಗಡೆ ಮಾಡಬೇಕು. ಇಲ್ಲಿ ಉತ್ತಮ ಆಸ್ಪತ್ರೆಗಳು, ಶಾಲಾ–ಕಾಲೇಜುಗಳ ವ್ಯವಸ್ಥೆ ಆಗಬೇಕು. ಕೈಗಾರಿಕೆಗಳ ಸ್ಥಾಪನೆಯಾಗಬೇಕು. ರಾಜ್ಯದಾದ್ಯಂತ ಸರ್ಕಾರಿ ನೌಕರಿಗಳಲ್ಲಿ ಇಲ್ಲಿನವರಿಗೆ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟಪ್ಪಗೋಳ ಮಾತನಾಡಿ, ‘ದೇಶಕ್ಕೆ 1947ರಲ್ಲಿಯೇ ಸ್ವಾತಂತ್ರ್ಯ ದೊರೆತರೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ದೊರಕಿತು. ಆ ದಿನವೇ ಈ ವಿಮೋಚನಾ ದಿನಾಚರಣೆಯಾಗಿದೆ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಹಿರಿಯ ಮುಖಂಡ ಕೇಶಪ್ಪ ಬಿರಾದಾರ ಮಾತನಾಡಿ, `ಈ ಭಾಗದಲ್ಲಿ 300 ವರ್ಷಗಳ ಕಾಲ ನಿಜಾಮ್ ಆಡಳಿತವಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಭಾರತದಲ್ಲಿ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ ನಿಜಾಮನನ್ನು ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಸೈನ್ಯ ಕಾರ್ಯಾಚರಣೆ ನಡೆಸಿ ಒಪ್ಪಿಸಿದರು’ ಎಂದು ತಿಳಿಸಿದರು.

ತಹಶೀಲ್ದಾರ್ ಕೀರ್ತಿ ಚಾಲಾಕ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಚಮಾಬಾಯಿ ಮಾಲಗಾರ, ಪಟ್ಟಣ ಠಾಣೆ ಸಿಪಿಐ ಅಲಿಸಾಬ್ ಉಪಸ್ಥಿತರಿದ್ದರು. ರೇಷ್ಮೆ ಇಲಾಖೆಯಿಂದ ಮುಡಬಿಯ ಪುತಳಾಬಾಯಿ ವೀರಣ್ಣ, ಮೋರಖಂಡಿಯ ವಿದ್ಯಾಸಾಗರ, ಗೌರನ ಲೀಲಾವತಿ, ತ್ರಿಪುರಾಂತನ ಬಂಡೆಪ್ಪ ರಾಮಣ್ಣ ಅವರಿಗೆ ಸಹಾಯಧನ ವಿತರಿಸಲಾಯಿತು.

ವಿವೇಕಾನಂದ ಶಾಲೆ ಮಕ್ಕಳಿಂದ ಸಂಗೀತ ಪ್ರಸ್ತುತಪಡಿಸಲಾಯಿತು. ಶಾರದಾ ಪ್ರಾಥಮಿಕ ಶಾಲೆ ಬಸವಕಲ್ಯಾಣ, ಜೆಬಿಕೆ ಪ್ರೌಢಶಾಲೆ, ಶಿವಯೋಗಿ ಶಾಸ್ತ್ರೀ ಮೆಮೋರಿಯಲ್ ಪ್ರಾಥಮಿಕ ಶಾಲೆ, ವೆಂಕಟೇಶ್ವರ ಪ್ರಾಥಮಿಕ ಶಾಲೆ ಮುಡಬಿಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಡಾ.ರವೀಂದ್ರ ನಾರಾಯಣಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.