ADVERTISEMENT

ಪೊಲೀಸ್‌ ಠಾಣೆಗೆ ಸಂಗೀತದ ಮೆರಗು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 5:54 IST
Last Updated 25 ಏಪ್ರಿಲ್ 2014, 5:54 IST
ಭಾಲ್ಕಿಯಲ್ಲಿ ಈಚೆಗೆ ನಡೆದ ವಚನ ಜಾತ್ರೆಯ ಸಮಾರೋಪದಲ್ಲಿ ನಗರ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಜನಪದ ಗೀತೆ ಗಾಯನದಲ್ಲಿ ತಲ್ಲೀನರಾಗಿದ್ದು, ಎಎಸ್‌ಐ ಚಂದ್ರಕಾಂತ ಥಮಕೆ, ಕಾನ್‌ಸ್ಟೆಬಲ್‌ ಭಾಗವತ, ಸುಧಾಕರ ಸಾತ್ ನೀಡಿದರು
ಭಾಲ್ಕಿಯಲ್ಲಿ ಈಚೆಗೆ ನಡೆದ ವಚನ ಜಾತ್ರೆಯ ಸಮಾರೋಪದಲ್ಲಿ ನಗರ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಜನಪದ ಗೀತೆ ಗಾಯನದಲ್ಲಿ ತಲ್ಲೀನರಾಗಿದ್ದು, ಎಎಸ್‌ಐ ಚಂದ್ರಕಾಂತ ಥಮಕೆ, ಕಾನ್‌ಸ್ಟೆಬಲ್‌ ಭಾಗವತ, ಸುಧಾಕರ ಸಾತ್ ನೀಡಿದರು   

ಭಾಲ್ಕಿ: ಸಾಮಾನ್ಯವಾಗಿ ಪೊಲೀಸ್‌ ಠಾಣೆಯಲ್ಲಿ ಹೊದರೆ ಹೊಡಿ, ಬಡಿ ಆತಿಥ್ಯ, ಜೊತೆಗೆ ಬೈಯ್ಗುಳದ ಮಂಗ­ಳಾ­ರತಿ. ಪೊಲೀಸ್‌ ಸಿಬ್ಬಂದಿ ಬೀದಿ­ಯಲ್ಲಿ ಹೊರಟರೆ ಅವರ ದರ್ಪದ ನುಡಿಗಳಿಗೆ ಜನಸಾಮಾನ್ಯರು ಮಾರು ದೂರ ಸರಿಯುವದನ್ನು ಎಲ್ಲೆಡೆ ಕಾಣು­ತ್ತೇವೆ. ಆದರೆ, ಇದಕ್ಕೆಲ್ಲ ಅಪವಾದ ಭಾಲ್ಕಿಯ ನಗರ ಠಾಣೆ.

ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇರುವ ಡಿವೈಎಸ್‌ಪಿ ಬಿ.ಎಸ್ ಮಾಲ­ಗತ್ತಿ , ಜನಪದ, ತತ್ವಪದ, ದಾಸರ ಪದ, ವಚನ ಗಾಯನದಲ್ಲಿ ಆಸಕ್ತಿ ಹೊಂದಿ­ರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನಕಟ್ಟಿ ಅವರ ಇಂಪಾದ ಧ್ವನಿ, ಎಎಸ್‌ಐ ಹಣ­ಮಂತಪ್ಪ ಚಿದ್ರಿ ಕೊಳಲುವಾದಕ. ಇನ್ನೊಬ್ಬ ಎಎಸ್ಐ ಚಂದ್ರಕಾಂತ ಥಮಕೆ, ಕಾನ್‌ಸ್ಟೆಬಲ್‌ ಭಾಗವತ್, ಸುಧಾಕರ್, ಮಡೋಳಪ್ಪ, ಶಿವಾನಂದ ಮುಂತಾದವರು ತಬಲಾ, ತಂಬೂರಿ, ತಾಳ ಬಾರಿಸುವದರಲ್ಲಿ ಪಳಗಿದವರು.

ಶಾಲಾ ವಾರ್ಷಿಕೋತ್ಸವ, ಬೀಳ್ಕೊ­ಡುವ ಸಮಾರಂಭ, ದೇವಸ್ಥಾನಗಳಲ್ಲಿ ನಡೆಯುವ ಧರ್ಮ ಸಭೆಗಳಲ್ಲಿ ಈಗ ನಗರ ಠಾಣೆಯ ಸಿಬ್ಬಂದಿಯನ್ನು ಅತಿಥಿಗಳಾಗಿ ಕರೆಯುವುದೇ ಒಂದು ಹೆಮ್ಮೆ ಎಂಬಂತಾಗಿದೆ. ಪೊಲೀಸ್ ಸಿಬ್ಬಂದಿ ಈಚೆಗೆ ಭಾಲ್ಕಿಯಲ್ಲಿ ನಡೆದ ವಚನ ಜಾತ್ರೆ ಹಾಗೂ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸ­ವ­ದಲ್ಲಿ  ಕಾರ್ಯಕ್ರಮ ನೀಡಿ ಜನಮನ ಸೂರೆಗೊಂಡರು.

ಸಿಪಿಐ ಜ್ಯೋತಿರ್ಲಿಂಗ ಹೊನಕಟ್ಟಿ­ಯವರ ಗಾಯನ ಮಂತ್ರ ಮುಗ್ಧ­ರನ್ನಾ­ಗಿಸಿತ್ತು. ಬಾಗಲಕೋಟೆಯವರಾದ ಹೊನಕಟ್ಟಿ ಅವರು ಜನಪದದಲ್ಲಿ ಪದವಿಧರರು. ಜನಪದ ಗಾಯನ, ಗೀಗೀ ಪದ, ದಾಸರ ಪದ, ವಚನ ಗಾಯನ, ಹಂತಿ ಪದ, ಡಪ್ಪಿನ ಪದ ಮುಂತಾದ ಹಾಡುಗಳನ್ನು ಸುಶ್ರಾವ್ಯ­ವಾಗಿ ಹಾಡುತ್ತಾರೆ. ಅವರ ಹಾಡಿಗೆ ಪೊಲೀಸ್‌ ಸಿಬ್ಬಂದಿ ಸಾಥ್ ನೀಡುತ್ತಾರೆ.

ಹಾಗಂತ ಅಪರಾಧಿಗಳಿಗೆ ಬಿಡುಗಡೆ ಇದೆ ಅಂತ ಭಾವಿಸಬೇಕಿಲ್ಲ. ಇದೇ ಠಾಣೆಯ ಸಿಬ್ಬಂದಿ ಅಪರಾಧಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. ಸಜ್ಜನರ ರಕ್ಷಕರಾಗಿ, ಅಪರಾಧಿಗಳನ್ನು ದಂಡಿ­ಸುವ ಮಾಲಗತ್ತಿ ಮತ್ತು ಹೊನಕಟ್ಟಿ , ಸಿಬ್ಬಂದಿ ಬಗ್ಗೆ ಜನರಲ್ಲಿ ಅಭಿಮಾನ ಇದೆ ಎಂದುಭಾಲ್ಕಿಯ ಹಿರಿಯ ಮುಖಂಡ ರಾಚಪ್ಪ ಗೋರ್ಟೆ ಮತ್ತು ಅಪ್ಪಾ ಸಾಹೇಬ್‌ ದೇಶಮುಖ್‌ ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.