ADVERTISEMENT

ಬಸವಕಲ್ಯಾಣ: ಕೃಷಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:12 IST
Last Updated 23 ಮೇ 2017, 7:12 IST

ಬಸವಕಲ್ಯಾಣ: ಇಲ್ಲಿನ ಕೃಷಿ ಇಲಾಖೆಯಿಂದ ತಾಲ್ಲೂಕಿನಲ್ಲಿ ಕೈಗೊಂಡಿರುವ ಕೃಷಿ ಅಭಿಯಾನದ ಪ್ರಚಾರ ವಾಹನಗಳಿಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಳ್ಳೆ ವಾಹನಗಳಿಗೆ ಪೂಜೆ ನೆರವೆರಿಸಿ ಬೀಳ್ಕೊಟ್ಟರು. ತಾಂತ್ರಿಕ ಸಲಹೆಗಾರ ಶತ್ರುಘ್ನ ಸದುವಾಲೆ, ಕೃಷಿ ಅಧಿಕಾರಿಗಳಾದ ರತನಕುಮಾರ ಹಲಶೆಟ್ಟೆ, ವಿಕ್ರಮ ಮುಗಳೆ, ಶ್ರೀಕೃಷ್ಣ ಪಾಟೀಲ, ಶಣ್ಮುಖ, ಸತೀಶ, ಕವಿರಾಜ ಕಿಣಗಿ, ಧರ್ಮೇಂದ್ರ, ನಿತೀನ ಬಿರಾದಾರ ಪಾಲ್ಗೊಂಡಿದ್ದರು.

ಸಲಹೆ: ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಕೃಷಿ ಪ್ರಚಾರ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ತಾಂತ್ರಿಕ ಸಲಹೆಗಾರ ಶ್ರೀಕೃಷ್ಣ ಪಾಟೀಲ ಮಾತನಾಡಿ, ‘ಮಳೆ ನೀರು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಇದಕ್ಕಾಗಿ ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಿಸಬೇಕು. ಬಾವಿ, ಕೊಳವೆ ಬಾವಿಗಳಲ್ಲಿ ನೀರು ಭರ್ತಿ ಯೋಜನೆ ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡಬೇಕು. ಸಾವಯವ ಕೃಷಿ ಅನುಸರಿಸಬೇಕು’ ಎಂದು ಹೇಳಿದರು.

‘ಮಣ್ಣಿನ ಸಂರಕ್ಷಣೆ ಮತ್ತು ಅಧಿಕ ಇಳುವರಿಗಾಗಿ ದ್ರವರೂಪದ ಗೊಬ್ಬರದ ಬಳಕೆ ಮಾಡಬೇಕು. ಇದರಿಂದ ಬೆಳೆಗಳಿಗೆ ಪೋಷಕಾಂಶ ದೊರಕುತ್ತದೆ. ರೋಗ ನಿರೋಧಕ ಶಕ್ತಿಯೂ ಅಧಿಕಗೊಳ್ಳುತ್ತದೆ. ತೊಗರಿಯಲ್ಲಿನ ಗೊಡ್ಡು ರೋಗ ನಿವಾರಣೆಗೆ ರೋಗ ನಿರೋಧಕ ತಳಿ ಬೆಳೆಯಬೇಕು. ರೋಗ ಪೀಡಿತ ಸಸಿಗಳನ್ನು ತೆಗೆದು ಹಾಕಬೇಕು. ಬದು ಬೆಳೆಯಾಗಿ ಔಡಲ್ ಮತ್ತು ಮೆಕ್ಕೆಜೋಳ ಬೆಳೆಯಬೇಕು. ನುಶಿ ನಾಶಕಗಳ ಸಿಂಪಡಣೆ ಮಾಡಬೇಕು’ ಎಂದೂ ಸಲಹೆ ನೀಡಿದರು.

ADVERTISEMENT

‘ಕಬ್ಬಿನ ಅಧಿಕ ಇಳುವರಿಗಾಗಿ ಅದನ್ನು ಸಕಾಲಕ್ಕೆ ನಾಟಿ ಮಾಡಬೇಕು. ಪ್ರತಿ ಎಕರೆಗೆ 10 ಟನ್ ಗೊಬ್ಬರದ ಬಳಕೆ ಅಗತ್ಯವಾಗಿದೆ. ಜಿಪ್ಸಂ, ಜಿಂಕ್ ಮತ್ತು ಬೋರಾನ್ ಬಳಕೆ ಅವಶ್ಯಕ. ವೈಜ್ಞಾನಿಕವಾದ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಮಾಹಿತಿ ನೀಡಿದರು. ಮಂಠಾಳ, ತೊಗಲೂರ ಗ್ರಾಮಗಳಲ್ಲಿಯೂ ಕಾರ್ಯಕ್ರಮ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.