ADVERTISEMENT

‘ಬಾರ್ಡರ್‌’ ತಾಂಡಾದಲ್ಲಿ ಬಹಳಷ್ಟು ಸಮಸ್ಯೆ

ಮನ್ನಥಪ್ಪ ಸ್ವಾಮಿ
Published 7 ನವೆಂಬರ್ 2017, 5:49 IST
Last Updated 7 ನವೆಂಬರ್ 2017, 5:49 IST
ಚರಂಡಿ, ರಸ್ತೆ ಸೌಲಭ್ಯವಿಲ್ಲದ ಔರಾದ್ ತಾಲ್ಲೂಕಿನ ಬಾರ್ಡರ್ ತಾಂಡಾ
ಚರಂಡಿ, ರಸ್ತೆ ಸೌಲಭ್ಯವಿಲ್ಲದ ಔರಾದ್ ತಾಲ್ಲೂಕಿನ ಬಾರ್ಡರ್ ತಾಂಡಾ   

ಔರಾದ್: ತೆಲಂಗಾಣ ರಾಜ್ಯಕ್ಕೆ ಹೊಂದಿ ಕೊಂಡಿರುವ ತಾಲ್ಲೂಕಿನ ಕೊನೆಯ ಗ್ರಾಮ ‘ಬಾರ್ಡರ್‌’ ತಾಂಡಾ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಜಮಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ತಾಂಡಾ ತಾಲ್ಲೂಕಿನ ಕೊನೆಯ ಊರು.

ಇಲ್ಲಿಂದ 2 ಕಿ.ಮೀ ಕ್ರಮಿಸಿದರೆ ತೆಲಂಗಾಣ ರಾಜ್ಯದ ಗಡಿ ಆರಂಭವಾಗುತ್ತದೆ. ವಿಶೇಷ ಎಂದರೆ ಈ ತಾಂಡಾದ ಸುತ್ತಲೂ ಇರುವ ತೆಲಂಗಾಣದ ಗ್ರಾಮಗಳಲ್ಲಿ ಕನ್ನಡ ಮಾತನಾಡುವವರೇ ಹೆಚ್ಚು ಇದ್ದಾರೆ. ತೆಲಂಗಾಣ ಸರ್ಕಾರ ಈ ಊರುಗಳಲ್ಲಿ ಈಗಲೂ ಕನ್ನಡ ಮಾಧ್ಯಮ ಶಾಲೆ ಆರಂಭಿಸಿ, ಮೂಲ ಸೌಲಭ್ಯ ಒದಗಿಸಿಕೊಟ್ಟಿದೆ.
ಆದರೆ ‘ಬಾರ್ಡರ್‌ ತಾಂಡಾದ ಜನರು ಮಾತ್ರ ಮೂಲ ಸೌಕರ್ಯಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

‘ತಾಲ್ಲೂಕಿನ ಸಂತಪುರದಿಂದ ಬಾರ್ಡರ್‌ ತಾಂಡಾ ಮೂಲಕ ತೆಲಂ ಗಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದೆ. ಆದರೆ ಮುಂದೆ ತೆಲಂಗಾಣ ವ್ಯಾಪ್ತಿಯ ಖರಸಗುತ್ತಿಯಿಂದ ನಾರಾಯಣಖೇಡವರೆಗೆ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ನಮ್ಮವರಿಗೆ ಇದು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಬಾರ್ಡರ್ ತಾಂಡಾ ನಿವಾಸಿ ಜ್ಞಾನೋಬಾ ಚವಾಣ್ ಪ್ರಶ್ನಿಸಿದ್ದಾರೆ.

ADVERTISEMENT

‘ನಮ್ಮ ತಾಂಡಾದಲ್ಲಿ 200 ಮನೆ ಇದ್ದು, 1,500 ಜನಸಂಖ್ಯೆ ಇದೆ. ಚುನಾವಣೆ ಬಂದಾಗೊಮ್ಮೆ ಜನಪ್ರತಿನಿಧಿಗಳು ನಮ್ಮ ಬಳಿ ಬರುತ್ತಾರೆ. ನಂತರ ನಮ್ಮ ಕಡೆ ತಲೆಹಾಕಿಯೂ ನೋಡುವುದಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅವರು.

‘ತಾಂಡಾದಲ್ಲಿ ಕುಡಿಯುವ ನೀರಿನ ಏಕೈಕ ಕೊಳವೆ ಬಾವಿ ಇದೆ. ಬೇಸಿಗೆ ವೇಳೆ ಆ ಕೊಳವೆ ಬಾವಿಯಲ್ಲಿ ನೀರು ಬರುವುದಿಲ್ಲ. ಹೀಗಾಗಿ ನಾವು ವರ್ಷದ 12 ತಿಂಗಳು ತೆಲಂಗಾಣದ ಖರಸಗುತ್ತಿ ಮತ್ತಿತರೆ ಗ್ರಾಮಗಳ ಮೇಲೆ ಅವಲಂಬಿತರಾಗಿದ್ದೇವೆ. ಕತ್ತೆ ಮತ್ತು ಸೈಕಲ್ ಮೇಲೆ ನೀರು ತರುವುದು ನಮಗೆ ರೂಢಿಯಾಗಿ ಬಿಟ್ಟಿದೆ’ ಎಂದು ಅವರು ತಾಂಡಾದ ಸಮಸ್ಯೆ ಕುರಿತು ಮಾಹಿತಿ ನೀಡಿದರು.

‘ಸಾಕಷ್ಟು ಕುಟುಂಬಗಳು ಈಗಲೂ ಗುಡಿಸಲಲ್ಲಿ ವಾಸವಾಗಿವೆ. ಎಲ್ಲೆಡೆ ಸಿ.ಸಿ ರಸ್ತೆಗಳಿಲ್ಲ. ಚರಂಡಿಯಂತೂ ಇಲ್ಲವೇ ಇಲ್ಲ. 5ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಪ್ರವೇಶ ಪಡೆಯಲು ಇಲ್ಲಿ ಪ್ರೌಢಶಾಲೆ ಇಲ್ಲ. ಪಡಿತರ ಧಾನ್ಯ ತರಲು 9 ಕಿ.ಮೀ ದೂರದ ಸೋರಳ್ಳಿಗೆ ಹೋಗಬೇಕು. ಹಾಗಾಗ್ಗೆ ವಿದ್ಯುತ್ ಸಂಪರ್ಕ ಕೈಕೊಡುತ್ತಿರುತ್ತದೆ. ತಂತಿಗಳು ಜೋತು ಬಿದ್ದಿವೆ’ ಎಂದು ತಾಂಡಾದ ಶಾಲಾ ಸಮಿತಿ ಅಧ್ಯಕ್ಷ ವಿಠಲ್ ಜಾಧವ್ ದೂರಿದರು.

ತಾಂಡಾದ ಸಮಸ್ಯೆ ಕುರಿತು ತಹಶೀಲ್ದಾರ್ ಸೇರಿದಂತೆ ಸಂಬಂಧಿ ತರಿಗೆ ಸಾಕಷ್ಟು ಸಲ ಮನವರಿಕೆ ಮಾಡಿಕೊಡಲಾಗಿದೆ. ಆದರೆ ನಮ್ಮ ಗೋಳು ಯಾರು ಕೇಳಲು ತಯಾರಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.