ADVERTISEMENT

ಬಿಸಿಯೂಟಕ್ಕೆ ಕಳಪೆ ಆಹಾರ ಧಾನ್ಯ: ಮುಖ್ಯಶಿಕ್ಷಕಿ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:52 IST
Last Updated 18 ಜನವರಿ 2017, 5:52 IST
ಬಿಸಿಯೂಟಕ್ಕೆ ಕಳಪೆ ಆಹಾರ ಧಾನ್ಯ: ಮುಖ್ಯಶಿಕ್ಷಕಿ ತರಾಟೆಗೆ
ಬಿಸಿಯೂಟಕ್ಕೆ ಕಳಪೆ ಆಹಾರ ಧಾನ್ಯ: ಮುಖ್ಯಶಿಕ್ಷಕಿ ತರಾಟೆಗೆ   

ಭಾಲ್ಕಿ: ತಾಲ್ಲೂಕಿನ ಖಾನಾಪುರ ಪ್ರಾಥಮಿಕ ಶಾಲೆಗೆ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ದಿಢೀರ್‌ ಭೇಟಿ ನೀಡಿ, ಬಿಸಿಯೂಟಕ್ಕೆ ಬಳಸುವ ಕಳಪೆ ಮಟ್ಟದ ಆಹಾರ ಧಾನ್ಯ ಕಂಡು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಬಿಸಿಯೂಟ ತಯಾರಿಕೆ ಕೋಣೆಯ ಅವ್ಯವಸ್ಥೆ, ಊಟ ತಯಾರಿಕೆಯಲ್ಲಿ ಬಳಸುವ ಅವಧಿ ಮುಗಿದ ಎಣ್ಣೆ ಪ್ಯಾಕೆಟ್, ಹುಳಗಳು ತಿಂದಿರುವ ತೊಗರಿ ಬೆಳೆ ನೋಡಿ ಅವರು ಆಕ್ರೋಶಗೊಂಡ ಅವರು ಸ್ಥಳದಲ್ಲಿದ್ದ ಶಾಲೆ ಮುಖ್ಯಶಿಕ್ಷಕಿ ಮಧುಮತಿಯನ್ನು ತರಾಟೆಗೆ ತೆಗೆದುಕೊಂಡರು. ಕಳಪೆ ಮಟ್ಟದ ಆಹಾರ ಧಾನ್ಯಗಳನ್ನು ಬಳಸಿ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುವುದು ಸೂಕ್ತವೇ? ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಒಂದರಿಂದ ಐದನೇ ತರಗತಿವರೆಗೆ ಶಾಲೆಯಲ್ಲಿ 53 ಮಕ್ಕಳ ಹಾಜರಾತಿ ಇದೆ. ಕೇವಲ 31ಮಕ್ಕಳು ಹಾಜರಿದ್ದಾರೆ. ಇದಕ್ಕೆ ಶಾಲೆಯಲ್ಲಿನ ಅವ್ಯವಸ್ಥೆ, ಶಿಕ್ಷಕರ ನಿಷ್ಕಾಳಜಿ, ಬೇಜವಾಬ್ದಾರಿತನ ಕಾರಣ ಇರಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಯಲ್ಲಿನ ಅವ್ಯವಸ್ಥೆ, ಬಿಸಿಯೂಟ ತಯಾರಿಕೆಯಲ್ಲಿನ ಅಸ್ವಚ್ಛತೆ, ಸುಧಾರಣೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಹಲಬರ್ಗಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಮಾಣಿಕರಾವ ಪಾಟೀಲ, ಶಿಕ್ಷಕಿ ಇಂದಿರಾ ಇದ್ದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ: ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಮೇಲ್ವಿಚಾರಕಿ ಮತ್ತು ಸಹಾಯಕಿ ಗೈರು ಹಾಜರಾಗಿದ್ದರು. ಕೇಂದ್ರದಲ್ಲಿ ಕೇವಲ 7 ಮಕ್ಕಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.