ADVERTISEMENT

ಬಿಸಿಲಲ್ಲೇ ಬೇಯುವ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 5:57 IST
Last Updated 25 ಏಪ್ರಿಲ್ 2014, 5:57 IST
ಬಸ್್ ತಂಗುದಾಣ ಇಲ್ಲದ ಕಾರಣ ಬೀದರ್್ ನಗರದ ಅಂಬೇಡ್ಕರ್್ ವೃತ್ತದ ಬಳಿ ಪ್ರಯಾಣಿಕರು ಬಿಸಿಲಲ್ಲೇ ಬಸ್‌ಗಳಿಗೆ ಕಾಯುತ್ತಿರುವುದು
ಬಸ್್ ತಂಗುದಾಣ ಇಲ್ಲದ ಕಾರಣ ಬೀದರ್್ ನಗರದ ಅಂಬೇಡ್ಕರ್್ ವೃತ್ತದ ಬಳಿ ಪ್ರಯಾಣಿಕರು ಬಿಸಿಲಲ್ಲೇ ಬಸ್‌ಗಳಿಗೆ ಕಾಯುತ್ತಿರುವುದು   

ಬೀದರ್: ನಗರ ಬೆಳೆದಂತೆ ಸಾರಿಗೆ ಸೌಲಭ್ಯವೂ ವಿಸ್ತಾರಗೊಂಡಿದೆ. ನಗ­ರದ ಪ್ರಯಾಣಿಕರಿಗಾಗಿಯೇ ‘ನಗರ ಸಾರಿಗೆ’ ಬಸ್‌ಗಳನ್ನು ಓಡಿಸಲಾಗು­ತ್ತಿದೆ. ಆದರೆ, ನಗರದ ವಿವಿಧೆಡೆ ಬಸ್ ತಂಗುದಾಣಗಳು ಇಲ್ಲದ ಕಾರಣ ಪ್ರಯಾಣಿಕರು ಬಿಸಿಲಿನಲ್ಲಿ ನಿಂತು­ಕೊಂಡೇ ಬಸ್‌ಗಳಿಗಾಗಿ ಕಾಯ­ಬೇಕಾದ ಸ್ಥಿತಿ ಉಂಟಾಗಿದೆ.

ನಗರದಲ್ಲಿ ಈ ಹಿಂದೆ ಸಂಚರಿಸು­ತ್ತಿದ್ದ ನಗರ ಸಾರಿಗೆ ಬಸ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇತ್ತು. ಇದೀಗ ‘ಕಲ್ಯಾಣ ಕರ್ನಾಟಕ’ ಸೇರಿ­ದಂತೆ ಸುಮಾರು 20 ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ‘ಕಲ್ಯಾಣ ಕರ್ನಾಟಕ’ ಹೆಸರಿನ 16 ನಗರ ಸಾರಿಗೆ ಬಸ್‌ಗಳು ಮೈಲೂರು, ಚಿಟ್ಟಾ ಕ್ರಾಸ್ (ಗುಂಪಾ), ಮಂಗಲಪೇಟ್, ಚಿದ್ರಿ, ಶಹಾಪುರಗೇಟ್್ ಮತ್ತಿತರ ಕಡೆ ಹಾಗೂ ನಾಲ್ಕು ಮಿನಿ ಬಸ್‌ಗಳು ನಗರದ ಹಳೆಯ ಭಾಗದಲ್ಲಿ ಓಡಾಡುತ್ತಿವೆ.

ನಗರ ಸಾರಿಗೆ ಬಸ್‌ಗಳು ಉತ್ತಮ ಸೇವೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರ­ವಾಗಿದ್ದರೂ ತಂಗುದಾಣಗಳ ಕೊರತೆ ಮಾತ್ರ ಪ್ರಯಾಣಿಕರನ್ನು ಬಹುವಾಗಿ ಕಾಡುತ್ತಿದೆ. ಬಸ್‌ಗಳು ನಿಲ್ಲುವ ಸ್ಥಳಗಳಲ್ಲಿ ತಂಗುದಾಣಗಳು ಇಲ್ಲ. ಹೀಗಾಗಿ ಬಯಲಲ್ಲೇ ನಿಂತು ಬಸ್‌­ಗಳಿಗೆ ಕಾಯಬೇಕಾಗಿದೆ. ತಂಗುದಾಣ­ಗಳಿಲ್ಲದ ಕಾರಣ ಕೆಲವೊಮ್ಮೆ ಬಸ್‌­ಗಳು ಖಚಿತವಾಗಿ ಎಲ್ಲಿ ನಿಲ್ಲುತ್ತವೆ ಎನ್ನುವುದೂ ಗೊತ್ತಾಗುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಪ್ರಯಾಣಿಕರು.

ನಗರದಲ್ಲಿ ಕೆಲಕಡೆ ಮಾತ್ರ ಬಸ್ ತಂಗುದಾಣಗಳು ಇವೆ. ಅವು ಕೂಡ ಸುಸ್ಥಿತಿಯಲ್ಲಿ ಇಲ್ಲ. ಹಾರೂಗೇರಿ ಕಮಾನ್್, ರಾಂಪುರೆ ಕಾಲೊನಿ ಮತ್ತಿ­ತರ ಕಡೆಗಳಲ್ಲಿ ಇರುವ ಬಸ್ ತಂಗು­ದಾಣಗಳು ಹಾಳಾಗಿವೆ. ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಹೀಗಾಗಿ ಈ ತಾಣಗಳಲ್ಲಿ ನಿಲ್ಲಲ್ಲು ಜನ ನಿರಾ­ಕರಿಸುತ್ತಿದ್ದಾರೆ. 

ಪ್ರಯಾಣಿಕರ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್‌ಗಳು ನಿಲ್ಲುವ ಕಡೆಗಳಲ್ಲಿ ತಂಗುದಾಣಗಳನ್ನು ನಿರ್ಮಿ­ಸಬೇಕು ಎಂದು ಆಗ್ರಹಿಸುತ್ತಾರೆ ಪ್ರಯಾ­ಣಿಕ ಆತ್ಮಾನಂದ.

ನಗರದ 25 ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕಾಗಿ ಸ್ಥಳಾ­ವಕಾಶ ಕೋರಿ ನಗರಸಭೆಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ತಿಳಿಸು­ತ್ತಾರೆ ಈಶಾನ್ಯ ಕರ್ನಾಟಕ ನಗರ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ.

ಚಿಟ್ಟಾ ಕ್ರಾಸ್, ಮೈಲೂರು, ಚಿದ್ರಿ, ಶಹಾಪುರಗೇಟ್್, ನೌಬಾದ್, ಪ್ರತಾಪ­ನಗರ, ಶಿವನಗರ ದಕ್ಷಿಣ, ಮಡಿವಾಳ ಮಾಚಿದೇವ ವೃತ್ತ, ಬೊಮ್ಮಗೊಂಡೇ­ಶ್ವರ ವೃತ್ತ, ಮಂಗಲಪೇಟ್‌, ಫತ್ತೇದ­ರ್ವಾಜಾ, ಗುಂಪಾ ವರ್ತುಲ ರಸ್ತೆ, ಮೈಲೂರು ಮರ್ತುಲ ರಸ್ತೆ ಮತ್ತಿತರ ಕಡೆಗಳಲ್ಲಿ ಬಸ್‌ ತಂಗುದಾಣ ನಿರ್ಮಿ­ಸುವ ಉದ್ದೇಶ ಇದೆ. ನಗರಸಭೆ ಸ್ಥಳ ಒದಗಿಸಿದರೆ ನಿರ್ಮಾಣಕ್ಕೆ ಕ್ರಮ ಕೈ­ಗೊ­ಳ್ಳ­ಲಾಗುವುದು ಎಂದು ಹೇಳುತ್ತಾರೆ.

ಬಸ್ ತಂಗುದಾಣಕ್ಕಾಗಿ ಸ್ಥಳ ಕೋರಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪತ್ರ ಬರೆದಿರುವುದು ನಿಜ. ನಗರಸಭೆ ಚುನಾವಣೆ ನಂತರ ಈವರೆಗೆ ಒಂದೇ ಒಂದು ಸಭೆ ನಡೆದಿಲ್ಲ. ಬರುವ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳ­ಲಾಗುವುದು ಎಂದು ಹೇಳುತ್ತಾರೆ ನಗರ­ಸಭೆ ಸಹಾಯಕ ಕಾರ್ಯ­ನಿರ್ವಾ­ಹಕ ಎಂಜಿನಿಯರ್ ಮೋಯಿಸ್ ಹುಸೇನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.