ADVERTISEMENT

ಬೀದರ್‌: ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಕಲಿಕಾ ಸಾಮರ್ಥ್ಯ ಅಳೆಯಲು ಅಂತಿಮ ವರ್ಷದಲ್ಲಿ ಎಕ್ಸಿಟ್‌ ಪರೀಕ್ಷೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 8:52 IST
Last Updated 2 ಫೆಬ್ರುವರಿ 2017, 8:52 IST
ಬೀದರ್‌: ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ
ಬೀದರ್‌: ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ   
ಬೀದರ್: ಕೇಂದ್ರ ಸರ್ಕಾರ ವೈದ್ಯಕೀಯ ಪದವಿ ಪೂರೈಸಿದವರಿಗೆ ‘ಎಕ್ಸಿಟ್‌ ಪರೀಕ್ಷೆ’ ಕಡ್ಡಾಯಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
 
ಬ್ರೀಮ್ಸ್‌ ಕಾಲೇಜಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ  ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಆನಂದರಾವ್ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ಬಶೆಟ್ಟಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತಪ್ರಕಾಶ ನಡ್ಡಾ ಅವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು.
 
ವೈದ್ಯಕೀಯ ವಿದ್ಯಾರ್ಥಿಗಳು ಆಂತರಿಕ, ಸಂದರ್ಶನ, ಪ್ರಾಯೋಗಿಕ ಹಾಗೂ ಥೀಯರಿ ಮೂಲಕ 100 ಪರೀಕ್ಷೆಗಳನ್ನು ಬರೆದು ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ಇದಕ್ಕೆ ಐದೂವರೆ ವರ್ಷ ಸಮಯ ತಗಲುತ್ತಿದೆ. ಈಗಿರುವ ಪಠ್ಯಕ್ರಮವೇ ವಿದ್ಯಾರ್ಥಿಗಳಿಗೆ ಭಾರವಾಗಿದೆ. ಸರ್ಕಾರ, ಹೆಚ್ಚುವರಿಯಾಗಿ ವಿದ್ಯಾರ್ಥಿಗಳ ಮೇಲೆ ‘ಎಕ್ಸಿಟ್‌ ಪರೀಕ್ಷೆಯ ಹೊರೆ ಹಾಕಲು ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಭಾರತೀಯ ವೈದ್ಯಕೀಯ ಪರಿಷತ್ತಿನ 2016 ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಸರಿಯಾದ ಕ್ರಮ ಅಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ದೂರಿದರು.
 
ವಿದ್ಯಾರ್ಥಿಗಳು ನಾಲ್ಕೂವರೆ ವರ್ಷಗಳ ಪದವಿ ಪೂರ್ಣಗೊಳಿಸಿದ ನಂತರ ಒಂದು ವರ್ಷ ತರಬೇತಿ ಪಡೆಯುತ್ತಾರೆ.  ವೈದ್ಯಕೀಯ ಪರಿಷತ್ತಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡ ನಂತರ ಅವರಿಗೆ ವೈದ್ಯ ವೃತ್ತಿ ಆರಂಭಿಸಲು ಅನುಮತಿ ನೀಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈಗ ವೈದ್ಯ ಪದವಿ ನೋಂದಣಿ ಪೂರ್ವದಲ್ಲಿ ಇನ್ನೊಂದು ಎಕ್ಸಿಟ್‌ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ವಿದೇಶದಲ್ಲಿ ಪದವಿ ಪಡೆದ ವೈದ್ಯರಿಗೆ ಭಾರತದಲ್ಲಿನ ರೋಗಿಗಳಿಗೆ ಚಿಕಿತ್ಸೆ ಕೊಡಿಸುವ ವಿಷಯದಲ್ಲಿ ನಿರ್ಬಂಧ ವಿಧಿಸಿಲ್ಲ. ಅವರಿಗೆ ಪರೀಕ್ಷೆ, ತರಬೇತಿ ಇಲ್ಲದೆ ವೈದ್ಯಕೀಯ ವೃತ್ತಿ ಆರಂಭಿಸಲು ಸರ್ಕಾರ ಪರವಾನಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
 
ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ವಿನೋದ ಸಾವಳಗಿ, ಉಪಾಧ್ಯಕ್ಷರಾದ  ಡಾ. ಎ.ಸಿ. ಲಲಿತಮ್ಮ, ಡಾ. ಎಸ್.ಆರ್. ಹಣಮಶೆಟ್ಟಿ, ಡಾ.ಎಂ.ಎ. ಶೇರಿಕಾರ, ಡಾ.ತುಗಾವೆ, ಡಾ. ಸುಭಾಷ ಬಶೆಟ್ಟಿ, ಡಾ. ಪ್ರೇಮಲತಾ ಪಾಟೀಲ, ಡಾ. ಅಶೋಕ ಹಾಗೂ  ವೈದ್ಯಕೀಯ ಕಾಲೇಜಿನ 300  ವಿದ್ಯಾರ್ಥಿಗಳು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
**
ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಪರೀಕ್ಷಾ ಹೊರೆ ಹಾಕುವುದು ಸರಿಯಲ್ಲ. ಈಗಿರುವ ಪದ್ಧತಿಯನ್ನೇ ಮುಂದುವರಿಸಬೇಕು.
-ಡಾ.ಸಿ.ಆನಂದರಾವ್
ಅಧ್ಯಕ್ಷ , ಐಎಂಎ ಜಿಲ್ಲಾ ಘಟಕ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.