ADVERTISEMENT

ಭಾಲ್ಕಿ: 23 ಸಾವಿರ ಮನೆ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:06 IST
Last Updated 23 ಮೇ 2017, 7:06 IST

ಭಾಲ್ಕಿ: ‘ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಾಸ ಮಾಡಲು ಮನೆ ಇಲ್ಲ ಎಂದು ಯಾರೊಬ್ಬರೂ ಹೇಳಬಾರದು ಎನ್ನುವುದು ನನ್ನ ಧ್ಯೇಯ. ಹಾಗಾಗಿ, ತಾಲ್ಲೂಕಿನಲ್ಲಿ ನಾನಾ ವಸತಿ ಯೋಜನೆಗಳಡಿ ಸುಮಾರು 23 ಸಾವಿರ ಮನೆಗಳನ್ನು ನೀಡಲಾಗಿದೆ’  ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮನೆ ಹಂಚಿಕೆಯಲ್ಲಿ ಅವ್ಯವಹಾರ ನಡೆಯಬಾರದು ಎಂದು ನಾನೇ ಖುದ್ದು ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ನೀಡಿದ್ದೇನೆ.

ಇಷ್ಟಾಗಿಯೂ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಡವರ ಹತ್ತಿರ ಹಣ ಪಡೆಯಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಬಡವರ ಬಳಿ ಹಣ ಪಡೆದದ್ದು ಗಮನಕ್ಕೆ ಬಂದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಮುಂಬರುವ ದಿನಗಳಲ್ಲಿ ಇನ್ನು 5 ಸಾವಿರ ಮನೆ ಮಂಜೂರು ಮಾಡಿಸುತ್ತೇನೆ. 2 ತಿಂಗಳೊಳಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆ ನಡೆಸಿ ಮನೆ ಇರದ ಬಡವರ ಪಟ್ಟಿ ಸಿದ್ಧಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

‘ಸಮಾಜದ ಬಡ, ಮಧ್ಯಮ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಸಮರ್ಪಕ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.

ತಾಲ್ಲೂಕಿನ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಾರದು ಎಂದು ಮುನ್ನಚ್ಚರಿಕೆ ಕ್ರಮವಾಗಿ ₹ 70 ಲಕ್ಷ ಮೀಸಲಿಟ್ಟು, 8 ಟ್ಯಾಂಕರ್‌ಗಳನ್ನು ನೀಡಲಾಗಿದೆ. ಆದರೂ ತಾಲ್ಲೂಕಿನ ಅಳವಾಯಿ, ಹರಿವಾಡಿ, ಮೇಹಕರ, ಲಂಜವಾಡ ಸೇರಿದಂತೆ ಕೆಲವಡೆ ನೀರಿನ ಸಮಸ್ಯೆ ಇದೆ ಎಂದು ಸಾರ್ವಜನಿಕರು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ನೀವೇನು ಮಾಡುತ್ತಿದ್ದೀರಿ ಎಂದು ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ನಿರಾಶಾದಾಯಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಣತ ಶಿಕ್ಷಕರಿಂದ ತಕ್ಷಣವೇ ಪರಿಹಾರ ಬೋಧನೆ ಆರಂಭಿಸಿ, ಒಂದು ಅಥವಾ ಎರಡು ವಿಷಯಗಳಲ್ಲಿ ಫೇಲ್ ಆದ ವಿದ್ಯಾರ್ಥಿಗಳ ಕಡೆಗೆ ವಿಶೇಷ ಗಮನ ಹರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟಪಗೋಳ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ್, ಉಪಾಧ್ಯಕ್ಷ ಮಾರುತಿ ಮಗರ, ತಹಶೀಲ್ದಾರ್‌ ಮನೋಹರ ಸ್ವಾಮಿ, ಇಒ ಸೂರ್ಯಕಾಂತ ಬಿರಾದಾರ ಇದ್ದರು.

* * 

ತಾಲ್ಲೂಕಿನ ಎಲ್ಲೆಡೆ ನೀರಿನ ಸಮಸ್ಯೆ ಉಂಟಾಗಬಾರದೆಂದು ₹ 70 ಲಕ್ಷ ಮೀಸಲಿಡಲಾಗಿದೆ. ಅಧಿಕಾರಿಗಳು ಎಲ್ಲಿಯೂ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು.
ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.