ADVERTISEMENT

ಮಗನ ಕಾಲೇಜು ಶುಲ್ಕವನ್ನು ಭರಿಸಲು ತಾಳಿ ಮಾರಿದ ತಾಯಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:17 IST
Last Updated 14 ಜುಲೈ 2017, 6:17 IST
ಔರಾದ್ ಪಟ್ಟಣ ಪಂಚಾಯಿತಿ ಎದುರು ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪೌರ ಕಾರ್ಮಿಕರ ಜತೆ ಗುರುವಾರ ಶಾಸಕ ಪ್ರಭು ಚವಾಣ್ ಚರ್ಚೆ ನಡೆಸಿದರು
ಔರಾದ್ ಪಟ್ಟಣ ಪಂಚಾಯಿತಿ ಎದುರು ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪೌರ ಕಾರ್ಮಿಕರ ಜತೆ ಗುರುವಾರ ಶಾಸಕ ಪ್ರಭು ಚವಾಣ್ ಚರ್ಚೆ ನಡೆಸಿದರು   

ಔರಾದ್: ಬಾಕಿ ವೇತನ ನೀಡುವಂತೆ ಆಗ್ರಹಿಸಿ ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಪೌರ ಕಾರ್ಮಿಕ ಮಹಿಳೆಯೊಬ್ಬರು ತಾಳಿ ಮಾರಿ ಮಗನ ಕಾಲೇಜು ಶುಲ್ಕ ಪಾವತಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಪೌರಕಾರ್ಮಿಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಸಂಜೆ ಭೇಟಿ ನೀಡಿದ್ದ ಶಾಸಕ ಪ್ರಭು ಚವಾಣ್ ಅವರ ಎದುರು ಪೌರ ಕಾರ್ಮಿಕ ಮಹಿಳೆ ಅಳಲು ತೋಡಿಕೊಂಡರು. ‘ಆರು ತಿಂಗಳಿನಿಂದ ವೇತನ ಇಲ್ಲ. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಇಂತಹ ಸಮಯದಲ್ಲಿ ಮಗನ ಕಾಲೇಜು ಶುಲ್ಕ ಭರಿಸುವ ಸಲುವಾಗಿ ತಾಳಿ ಮಾರಿ ಹಣ ನೀಡಿದ್ದೇನೆ’ ಎಂದು ಕಣ್ಣೀರಿಟ್ಟರು.

‘ಗಂಡನಿಗೆ ತಿಳಿಯದಂತೆ ಮಗನ ಕಾಲೇಜು ಶುಲ್ಕ ಪಾವತಿಸಿದ್ದೇನೆ. ಹಾಗಾಗಿ ನನ್ನ ಹೆಸರನ್ನು ಪ್ರಕಟಿಸಬೇಡಿ’ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿಕೊಂಡರು.
ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಣುಕಾ ಅವರಿಂದ ಮಾಹಿತಿ ಪಡೆದುಕೊಂಡ ಶಾಸಕ  ಪ್ರಭು ಚವಾಣ್, ‘ಪೌರ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ವೇತನ ಕೊಡದೆ ಇದ್ದರೆ ಹೇಗೆ? ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ಎರಡು ದಿನದಲ್ಲಿ ಅವರ ವೇತನ ಪಾವತಿಸಿ. ಇಲ್ಲದಿದ್ದರೆ ಪೌರಕಾರ್ಮಿಕರ ಜತೆ ನಾನು ಧರಣಿಗೆ ಕುಳಿತುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಪಟ್ಟಣದಲ್ಲಿ ಸರಿಯಾಗಿ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಈ ಕುರಿತು ನಿತ್ಯ ದೂರು ಬರುತ್ತಿದೆ. ಮಳೆಗಾಲ ಇದ್ದರೂ ಸ್ವಚ್ಛತೆ ಕಡೆ ಗಮನ ಹರಿಸುತ್ತಿಲ್ಲ. ಎಲ್ಲಡೆ ಗಬ್ಬು ವಾಸನೆ ಬರುತ್ತಿದೆ. ಸರಿಯಾಗಿ ಕೆಲಸ ಮಾಡಲು ಮನಸ್ಸು ಇಲ್ಲದೇ ಇದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿ ಎಂದು ಮುಖ್ಯಾಧಿಕಾರಿಯನ್ನು ಗದರಿದರು.

‘ದಿನಗೂಲಿ ಪೌರ ಕಾರ್ಮಿಕರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಆದರೆ ಅವರು ಅದಕ್ಕೆ ಒಪ್ಪುತ್ತಿಲ್ಲ’ ಎಂದು ಮುಖ್ಯಾಧಿಕಾರಿಗಳು ಸಮಜಾಯಿಸಿ ನೀಡಿದರು. ನಮಗೆ ನಿಮ್ಮ ಕೆಲಸ ಬೇಡ. ಮೊದಲು ನಾವು ದುಡಿದ ಆರು ತಿಂಗಳ ವೇತನ ಪಾವತಿಸಿ ಎಂದು ಧರಣಿ ನಿರತ ಪೌರ ಕಾರ್ಮಿಕರು ಹೇಳಿದರು.
ಪೌರ ಕಾರ್ಮಿಕರ ಸಮಸ್ಯೆ ಹೇಳಿಕೊಂಡು ಜಿಲ್ಲಾಧಿಕಾರಿಗಳ ಬಳಿ ಹೋದರೂ ಅವರಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಗೋಳು ತೋಡಿಕೊಂಡರು.

* * 

ನಾವು ಸರ್ಕಾರ ನಂಬಿಕೊಂಡು 15–20 ವರ್ಷಗಳಿಂದ ದುಡಿಯುತ್ತಿದ್ದೇವೆ. ಈಗ ನಮ್ಮನ್ನು ಏಕಾಏಕಿ ನೌಕರಿಯಿಂದ ತೆಗೆಯುವ ಮಾತು ಆಡುತ್ತಿದ್ದಾರೆ.
ಸರಸ್ವತಿ, ಪೌರ ಕಾರ್ಮಿಕ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.