ADVERTISEMENT

ರೈಲ್ವೆ ಕಾಮಗಾರಿ ಚುರುಕಿಗೆ ಖರ್ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:31 IST
Last Updated 25 ಏಪ್ರಿಲ್ 2017, 5:31 IST

ಕಲಬುರ್ಗಿ: ‘ಕಲಬುರ್ಗಿಯಿಂದ ಬೀದರ್‌ವರೆಗೆ ಆಗಸ್ಟ್‌ ತಿಂಗಳಲ್ಲಿ ಪ್ರಾಯೋಗಿಕ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು. ಕಮಲಾಪುರದಿಂದ ಮರಗುತ್ತಿ ತನಕದ ರೈಲು ಮಾರ್ಗಕ್ಕೆ ಸುರಂಗ ನಿರ್ಮಾಣದ ಪ್ಲಾಸ್ಟರಿಂಗ್ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ಲಾಸ್ಟರಿಂಗ್‌ ಕಾರ್ಯಕ್ಕೆ ಮರಳಿನ ಕೊರತೆಯಾಗಿದ್ದು, ಈ ಸಮಸ್ಯೆ ನಿವಾರಣೆಗೆ ಪ್ರಾದೇಶಿಕ ಆಯುಕ್ತರು, ರಾಯಚೂರು ಜಿಲ್ಲಾಧಿಕಾರಿ ಮತ್ತು ಗಣಿಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಮಸ್ಯೆ ಪರಿಹಾರವಾಗುವ ಭರವಸೆ ಸಿಕ್ಕಿದೆ’ ಎಂದರು.

‘ವಾಡಿಯಿಂದ ಸೊಲ್ಲಾಪುರವರೆಗಿನ ಜೋಡಿ ರೈಲು ಮಾರ್ಗದ ನಿರ್ಮಾಣ ಆಮೆವೇಗದಲ್ಲಿ ಸಾಗಿದೆ. ಇದಕ್ಕೆ ಮುರುಮ್ ಕೊರತೆಯೇ ಕಾರಣ. ಈ ಕಾಮಗಾರಿ ಪೂರ್ಣಗೊಂಡಲ್ಲಿ ರೈಲು ಸಂಚಾರದಲ್ಲಿ ಸಾಕಷ್ಟು ಸಮಯ ಉಳಿತಾಯ ಆಗುತ್ತದೆ. ವಾಡಿಯಿಂದ ಗದಗ ವರೆಗಿನ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕಿದೆ’ ಎಂದು ವಿವರಿಸಿದರು.

ADVERTISEMENT

‘ಯಾದಗಿರಿಯಲ್ಲಿ ರೈಲ್ವೆ ಬೋಗಿ ಕಾರ್ಖಾನೆಯು ಉದ್ಘಾಟನೆಗೆ ಸಿದ್ಧವಾಗಿದ್ದು, ರೈಲ್ವೆ ಸಚಿವ ಸುರೇಶ್‌ ಪ್ರಭು ಚಾಲನೆ ನೀಡಬೇಕಿದೆ. ಕಾರ್ಖಾನೆ ಉದ್ಘಾಟನೆ ಜೊತೆಗೆ ರೈಲ್ವೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅವರಿಗೆ ಕೋರಿದ್ದೇನೆ’ ಎಂದರು.

‘ಕಲಬುರ್ಗಿ ಸುತ್ತಲಿನ ಲಿಂಕ್‌ ರಸ್ತೆ ನಿರ್ಮಾಣ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ವಿಸ್‌ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಾಣ ಆಗಬೇಕಿದೆ. ರಸ್ತೆಯ ಎರಡೂ ಬದಿಯಲ್ಲೂ ಸಣ್ಣಪುಟ್ಟ ಅಂಗಡಿಗಳು, ಕಟ್ಟಡಗಳಿದ್ದು, ಅವುಗಳನ್ನು ತೆರವುಗೊಳಿಸಬೇಕಿದೆ’ ಎಂದು ಮಾಹಿತಿ ನೀಡಿದರು.

‘ಸ್ಥಳಾವಕಾಶ ಇರುವ ಕಡೆಯಲೆಲ್ಲ ಕಾಮಗಾರಿ ಕೈಗೊಂಡು ತೆರವು ಕಾರ್ಯಾಚರಣೆ ಪ್ರಕ್ರಿಯೆಯನ್ನು ನಂತರದ ಅವಧಿಯಲ್ಲಿ ಮುಂದುವರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ವಾಡಿಯ ಬಲರಾಂ ಚೌಕ್‌ನಿಂದ ಫ್ಲೈಓವರ್‌ ನಿರ್ಮಿಸುವ ಉದ್ದೇಶವಿದೆ. ಚಿತ್ತಾಪುರ ಕ್ರಾಸ್‌ನಿಂದ ಯಾದಗಿರಿಯವರೆಗೆ ಮತ್ತು ಯಾದಗಿರಿಯಿಂದ ಆಂಧ್ರಪ್ರದೇಶ ಗಡಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದರು.

‘ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ ₹ 643 ಕೋಟಿ ಮತ್ತು ₹ 892.95 ಕೋಟಿ ವಿನಿಯೋಗಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ನಾನು ರೈಲ್ವೆ ಸಚಿವ ಆಗಿದ್ದ ಸಂದರ್ಭದಲ್ಲಿ ಬಹುತೇಕ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಿದ್ದೆ. ಅದೇ ರೀತಿ ಈಗಿನ ರೈಲ್ವೆ ಸಚಿವರು ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ಶಾಸಕ ಖಮರುಲ್ ಇಸ್ಲಾಂ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಅಧ್ಯಕ್ಷ ಮಹಮ್ಮದ್‌ ಅಸಗರ ಚುಲಬುಲ್‌ ಇದ್ದರು.

ಎಷ್ಟು ಕಪ್ಪು ಹಣ ಸಿಕ್ಕಿತು?

‘ಗುಜರಾತ್‌ನಲ್ಲಿ ಹದಿಮೂರುವರೆ ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏನನ್ನೂ ಮಾಡದ ಮೋದಿ ಈಗ ದಿಢೀರನೇ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಖರ್ಗೆ ವ್ಯಂಗ್ಯವಾಡಿದರು.

‘ಪ್ರಧಾನಿಯಾದ ಬಳಿಕ ಮೋದಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ತಾವು ಮಾಡಿದ್ದೆಲ್ಲವೂ ಸರಿ ಎಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘₹500, ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಕ್ರಮ ಯಾವ ರೀತಿ ಉಪಯುಕ್ತವಾಗಿದೆ ಎಂಬುದು ಇಂದಿಗೂ ಗೊತ್ತಾಗಿಲ್ಲ. ಕಪ್ಪು ಹಣ ಎಷ್ಟು ವಶಪಡಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಎಟಿಎಂ ಕೇಂದ್ರಗಳಲ್ಲಿ ಹಣ ಸಿಗದೇ ಗ್ರಾಮೀಣ ಪ್ರದೇಶದ ಜನರು ಕಂಗಾಲು ಆಗಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡೇ ಆದಾಯ ತೆರಿಗೆ ದಾಳಿ ನಡೆಯುತ್ತಿವೆ. ಭ್ರಷ್ಟಾಚಾರ ಸಂಪೂರ್ಣವಾಗಿ ನೀಗಿಸುವ ಉದ್ದೇಶವಿದ್ದರೆ, ಆದಾಯ ತೆರಿಗೆಯವರು ಬಿಜೆಪಿ ಮತ್ತು ಇತರ ರಾಜಕೀಯ  ಪಕ್ಷದ ಮುಖಂಡರ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.