ADVERTISEMENT

ವಿಜ್ಞಾನ ರಸಪ್ರಶ್ನೆ: ರಾಜ್ಯಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:45 IST
Last Updated 20 ಫೆಬ್ರುವರಿ 2017, 5:45 IST

ಬೀದರ್: ಔರಾದ್‌ ತಾಲ್ಲೂಕಿನ ನವಚೇತನ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರಾದ ಭೂಮಿಕಾ ರಮೇಶರೆಡ್ಡಿ ಹಾಗೂ ಪೂಜಾ ಹಣಮರೆಡ್ಡಿ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ₹ 3 ಸಾವಿರ ಬಹುಮಾನ ಪಡೆದಿದ್ದಾರೆ.

ಕಮಲನಗರ ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಣೇಶ ವಿಜಯಕುಮಾರ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಂಕಾ ದ್ವಿತೀಯ ಸ್ಥಾನಗಳಿಸಿ ₹ 2 ಸಾವಿರ ಬಹುಮಾನ ಪಡೆದರು.

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಇಬ್ಬರು ವಿದ್ಯಾರ್ಥಿಗಳು ಒಳಗೊಂಡ ಒಟ್ಟು 25 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ಮೊದಲ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಿತು. ಅದರಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂರು ತಂಡಗಳಿಗೆ ಮೌಖಿಕ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ದಿನಪತ್ರಿಕೆಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಇಂಥ ಸ್ಪರ್ಧೆಗಳು ಎದುರಿಸಲು ಅನುಕೂಲವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ಬಾಬುರಾವ್‌ ದಾನಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ, ರವೀಂದ್ರನಾಥ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಂದ್ರನಾಥ ಹುಡಗಿಕರ, ಪ್ರಮುಖರಾದ ಡಿ. ಜಾಕೀರ್ ಹುಸೇನ್‌, ಮಹಮ್ಮದ್‌ ರಫಿ ತಾಳಿಕೋಟೆ, ಭಾರತಿ ಪಾಟೀಲ ಇದ್ದರು. ಸೂರ್ಯಕಾಂತ ಸಾಳೆ ಸ್ವಾಗತಿಸಿದರು. ದೇವಿಪ್ರಸಾದ ಕಲಾಲ ನಿರೂಪಿಸಿದರು. ಸಂಜೀವಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.