ADVERTISEMENT

ವಿಧಾನಸೌಧ ನೋಡಿದ್ದೇ ಶಾಸಕನಾದ ಮೇಲೆ!

ಔರಾದ್ ಶಾಸಕ ಪ್ರಭು ಚವಾಣ್ ಮನದಾಳದ ಮಾತು

ಮನ್ನಥಪ್ಪ ಸ್ವಾಮಿ
Published 22 ಮಾರ್ಚ್ 2018, 8:27 IST
Last Updated 22 ಮಾರ್ಚ್ 2018, 8:27 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಔರಾದ್‌: ‘ಮುಂಚೆ ಒಂದೆರಡು ಸಲ ಬೆಂಗಳೂರಿಗೆ ಹೋಗಿದ್ದೆ. ಆದರೆ, ವಿಧಾನಸೌಧ ನೋಡಿದ್ದೇ ಮೊದಲ ಬಾರಿ ಶಾಸಕನಾದ ಮೇಲೆ’ ಎಂದು ಶಾಸಕ ಪ್ರಭು ಚವಾಣ್ ಮಾತು ಆರಂಭಿಸಿದರು.

‘ನನ್ನ ಮಾತೃ ಭಾಷೆ ಲಂಬಾಣಿ. ಮರಾಠಿಯಲ್ಲಿ ಶಿಕ್ಷಣ ಪಡೆದಿರುವೆ. ಮೊದಲ ಬಾರಿ ಶಾಸಕನಾಗಿ ಅಧಿವೇಶನಕ್ಕೆ ಹೋದಾಗ ಮೂರು ತಿಂಗಳು ಏನೂ ತಿಳಿಯಲಿಲ್ಲ. ಮುಂದೆ ಹೇಗೆ ಎನ್ನುವ ಆತಂಕ ಶುರುವಾಯಿತು. ಹಿಂದಿ ಭಾಷೆ ಬಲ್ಲ ಶಾಸಕರ ಬಳಿ ನನ್ನ ಸಮಸ್ಯೆ ಹೇಳಿಕೊಂಡೆ. ಅವರು ಧೈರ್ಯ ಹೇಳಿದರು. ಸ್ವಲ್ಪ ದಿನ ಹೋದರೆ ಎಲ್ಲ ಸರಿ ಹೋಗುತ್ತದೆ. ನಿಧಾನವಾಗಿ ಎಲ್ಲವೂ ತಿಳಿಯುತ್ತದೆ’ ಎಂದು ಸಮಾಧಾನ ಮಾಡಿದರು.

‘ಕ್ಷೇತ್ರದ ಸಮಸ್ಯೆ ಹೇಳಿಕೊಂಡು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಹೋಗುತ್ತಿದ್ದೆ. ಅವರಿಗೆ ಹಿಂದಿ ಬರುತ್ತಿರಲಿಲ್ಲ. ನನಗೆ ಕನ್ನಡ ತಿಳಿಯುತ್ತಿರಲಿಲ್ಲ. ಅವರು ನನ್ನ ಮುಖ ನೋಡಿ ನಾನು ಕೊಟ್ಟ ಪತ್ರಗಳಿಗೆಲ್ಲ ಸಹಿ ಹಾಕುತ್ತಿದ್ದರು. ಹಂತ-ಹಂತವಾಗಿ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡೆ. ಅವರ ಜತೆ ಉತ್ತಮ ಸಂಬಂಧ ಇಟ್ಟುಕೊಂಡೆ. ಹೀಗಾಗಿ ಯಾವ ಇಲಾಖೆಗೆ ಹೋದರೂ ನನ್ನ ಕಡತ ವಾಪಸ್ ಆಗುತ್ತಿರಲಿಲ್ಲ. ನನಗೆ ಕನ್ನಡ ಬಾರದೆ ಇದ್ದರೂ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಮನವೊಲಿಸಿ ಸುಮಾರು ಎರಡು ದಶಕದಿಂದ ನನೆಗುದಿಗೆ ಬಿದ್ದಿದ್ದ ಔರಾದ್ ಪಟ್ಟಣದ ಶಾಶ್ವತ ಕುಡಿಯುವ ನೀರಿನ ₹ 35 ಕೋಟಿ ಯೋಜನೆಗೆ ಕಲಬುರ್ಗಿಯಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದೆ’ ಎಂದರು.

ADVERTISEMENT

‘ನಾನು ಶಾಸಕನಾಗುತ್ತೇನೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಪಿಯುಸಿ ವರೆಗೆ ಶಿಕ್ಷಣ ಆದ ನಂತರ ಕೆಲಸ ಅರಸಿ ಮುಂಬೈಗೆ ಹೋದೆ. ಅಲ್ಲಿ ಹತ್ತು ವರ್ಷ ಮೈಮುರಿದು ದುಡಿದೆ. ದುಡಿಮೆಗೆ ತಕ್ಕ ಫಲ ಸಿಕ್ಕಿತು. ಪ್ರಭು ಎಂಟರ್‌ಪ್ರೈಸೆಸ್‌   ಹೆಸರಿನ ಕಂಪನಿ ಹುಟ್ಟುಹಾಕಿದೆ. ಆಗಾಗ ತಂದೆ-ತಾಯಿ ನೋಡಲು ನನ್ನ ಊರು ಘಮಸುಬಾಯಿ ತಾಂಡಾಕ್ಕೆ ಬರುತ್ತಿದ್ದೆ. ಗಳಿಸಿದ ಹಣದಲ್ಲಿ ಶೇಕಡ 25ರಷ್ಟು ಹಣ ದೇವರು-ದಾನಕ್ಕಾಗಿ ಬಳಸುವ ರೂಢಿ ಹಾಕಿಕೊಂಡಿದ್ದೇನೆ. ಹೀಗಾಗಿ ನಾನು ನನ್ನ ಊರಿಗೆ ಬಂದ ಕೂಡಲೇ ಜನ ನನ್ನ ಕಡೆ ಬರುತ್ತಿದ್ದರು. ಬಂದವರಿಗೆ ಇದ್ದಷ್ಟು ದಾನ ಮಾಡುತ್ತಿದ್ದೆ. ಇಂತಹ ಒಬ್ಬ ವ್ಯಕ್ತಿ ತಾಲ್ಲೂಕಿನಲ್ಲಿ ಇದ್ದಾರೆ ಎಂದು ಪ್ರಚಾರವಾಯಿತು. ಇದರಿಂದ ಮುಂದೆ ನನಗೆ ಶಾಸಕನಾಗಲು ಅನುಕೂಲವಾಯಿತು’ ಎಂದರು.
**
ರಾಜಕೀಯ ಗುರು ‘ಮುಂಡೆ’
1990ರಿಂದ ಮಹಾರಾಷ್ಟ್ರ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ 1996ರಲ್ಲಿ ಠಾಣೆ ನಗರದ ವಾರ್ಡ್‌ ಅಧ್ಯಕ್ಷ, ಠಾಣೆ ನಗರ ಅಧ್ಯಕ್ಷ. ನಂತರ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಇವರ ಪಕ್ಷ ನಿಷ್ಠೆ ಮತ್ತು ಕ್ರಿಯಾಶೀಲತೆ ಪಕ್ಷದ ಮುಖಂಡರಿಗೆ ಹಿಡಿಸಿತು. ಇವರ ರಾಜಕೀಯ ಗುರು ದಿವಂಗತ ಗೋಪಿನಾಥ ಮುಂಡೆ ಅವರ ಆರ್ಶೀವಾದ ಇವರ ಬೆನ್ನಿಗೆ ಇತ್ತು. ಇದೇ ವೇಳೆ ನಡೆದ ಕ್ಷೇತ್ರ ಮರುವಿಂಗಡಣೆಯಲ್ಲಿ ಔರಾದ್ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದ್ದು ಪ್ರಭು ಚವಾಣ್ ಅವರಿಗೆ ವರವಾಗಿ ಪರಿಣಮಿಸಿತು.

ಕ್ಷೇತ್ರ ಮರುವಿಂಗಡಣೆ ನಂತರ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಭು ಚವಾಣ್ ಶಾಸಕರಾಗಿ ಆಯ್ಕೆಯಾದರು.
ನಂತರ 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪೈಪೋಟಿ ನಡುವೆಯೂ ಎರಡನೇ ಬಾರಿಗೂ ಗೆಲುವು ಸಾಧಿಸಿದರು. ಬರುವ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.
**
ಸ್ವತಂತ್ರ ಮತ್ತು ಸಾರ್ವಜನಿಕ ಜೀವನಕ್ಕೆ ವ್ಯತ್ಯಾಸ ಇದೆ. ಕೆಲ ವಿಷಯಗಳಲ್ಲಿ ವಾಸ್ತವಿಕ ಅಂಶ ಬದಿಗಿಟ್ಟು ರಾಜಕೀಯ ದೃಷ್ಟಿಯಿಂದ ನೋಡುವುದು ಅನಿವಾರ್ಯವಾಗುತ್ತದೆ.
–ಪ್ರಭು ಚವಾಣ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.