ADVERTISEMENT

ವಿಭಾಗಮಟ್ಟದ ಕೋಲಿ ಸಮಾವೇಶಕ್ಕೆ ನಗರ ಅಣಿ

​ಪ್ರಜಾವಾಣಿ ವಾರ್ತೆ
Published 28 ಮೇ 2017, 9:18 IST
Last Updated 28 ಮೇ 2017, 9:18 IST

ಬೀದರ್: ವಿಭಾಗ ಮಟ್ಟದ ಟೋಕರೆ ಕೋಲಿ(ಕೋಲಿ, ಕಬ್ಬಲಿಗ, ಗಂಗಾಮತ) ಸಮುದಾಯಗಳ ಜನಜಾಗೃತಿ ಸಮಾವೇಶ, ಮಹರ್ಷಿ ವಾಲ್ಮೀಕಿ, ಅಂಬಿಗರ ಚೌಡಯ್ಯ ಹಾಗೂ ಮಾತೆ ಮಾಣಿಕೇಶ್ವರಿ ಜಯಂತ್ಯುತ್ಸವಕ್ಕೆ ನಗರ ಅಣಿಯಾಗಿದೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಬೃಹತ್ ಶಾಮಿಯಾನಾ  ಹಾಕಲಾಗಿದ್ದು, ಆಕರ್ಷಕ ವೇದಿಕೆ ಸಿದ್ಧಪಡಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ ಸುಮಾರು 20 ಸಾವಿರ ಆಸನಗಳನ್ನು ಹಾಕಲಾಗಿದೆ.  ನಗರದ ವಿವಿಧೆಡೆ ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮಾವೇಶದ  ಕರಪತ್ರಗಳನ್ನು ಹಂಚಲಾಗಿದೆ.

ಕಲಬುರ್ಗಿ ವಿಭಾಗದ ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳ ಸುಮಾರು ಒಂದು ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಊಟ ಹಾಗೂ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ  ಎಂದು ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ತಿಳಿಸುತ್ತಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶವನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಚಿತ್ತಾಪುರದ  ಅಲ್ಲಮಪ್ರಭು ಸಂಸ್ಥಾನ ಮಠದ ಮಲ್ಲಣಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಮಂಡ್ಯದ ಮಲವಳ್ಳಿ ಮಠದ ಬಸವಾನಂದ ಸ್ವಾಮೀಜಿ, ಬಾಗಲಕೋಟೆ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ  ದೇವರು, ಬೆಳಗಾವಿಯ ಬ್ರಹ್ಮಾನಂದ ಮಠದ ಬ್ರಹ್ಮಾನಂದ ಸ್ವಾಮೀಜಿ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಕೆ) ಮಹರ್ಷಿ  ವಾಲ್ಮೀಕಿ ಆಶ್ರಮದ ದತ್ತಾತ್ರೇಯ ಗುರೂಜಿ, ಸಿಂದಗಿ ಶಾಂತಗಂಗಾಧರ ಸ್ವಾಮೀಜಿ, ಬಾಗಲಕೋಟೆಯ ಪರಮಾನಂದ ಸ್ವಾಮೀಜಿ, ವಿಠಲಪುರ ಮಾತಾ ಮಾಣಿಕೇಶ್ವರಿ ಆಶ್ರಮದ ಶಾಂತಿಬಾಬಾ ಮಹಾರಾಜರು ನೇತೃತ್ವ ವಹಿಸುವರು.  ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳುತ್ತಾರೆ.

ಸಮಾವೇಶವು ಟೋಕರಿ ಕೋಲಿ ಸಮುದಾಯಗಳ ಸಮಾಗಮಕ್ಕೆ ವೇದಿಕೆಯಾಗಲಿದೆ. ಸಮಾಜದವರನ್ನು ಒಂದುಗೂಡಿಸಲಿದೆ ಹೇಳುತ್ತಾರೆ ಪ್ರಮುಖರಾದ ರಾಜಕುಮಾರ ಕರನೆ.ಕಲಬುರ್ಗಿ ವಿಭಾಗ ವಿವಿಧ ಜಿಲ್ಲೆಗಳು ಹಾಗೂ ಬೀದರ್ ಜಿಲ್ಲೆಯಲ್ಲಿ ಜ್ಯೋತಿಯಾತ್ರೆ ಮೂಲಕ ಸಮಾವೇಶದ ಪ್ರಚಾರ ಮಾಡಲಾಗಿದೆ. ರಾಜಕೀಯ ಹಾಗೂ ಸಾಮಾಜಿಕವಾಗಿ ಜಾಗೃತಿ ಮೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ಸಮಾವೇಶವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ  ಒಂದು ವಾರದಿಂದ ನಿರಂತರ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯುವಕರ ಪ್ರತ್ಯೇಕ ತಂಡಗಳು ವಿವಿಧ ವ್ಯವಸ್ಥೆಗಳ ಹೊಣೆಯನ್ನು ಹೊತ್ತುಕೊಂಡಿವೆ. ಜ್ಯೋತಿಯಾತ್ರೆ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದು ತಿಳಿಸುತ್ತಾರೆ ಟೋಕರೆ ಕೋಲಿ ಸಮಾಜ ಸಂಘದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಜಮಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.