ADVERTISEMENT

ಸಮಸ್ಯೆಗಳ ಆಗರ ಧನ್ನೂರ(ಕೆ)

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:29 IST
Last Updated 14 ನವೆಂಬರ್ 2017, 5:29 IST

ಬಸವಕಲ್ಯಾಣ: ಚುಳಕಿನಾಲಾ ಜಲಾಶಯದ ಹಿನ್ನೀರಿನಲ್ಲಿ ಗ್ರಾಮ ಮುಳುಗಡೆ ಆಗಿದ್ದರಿಂದ ಸಮೀಪದಲ್ಲಿಯೇ ಪುನರ್ವಸತಿ ಕಲ್ಪಿಸಿರುವ ತಾಲ್ಲೂಕಿನ ಧನ್ನೂರ (ಕೆ)ವಿವಿಧ ಸೌಲಭ್ಯಗಳ ಕೊರತೆಯಿಂದ ಸಮಸ್ಯೆಗಳ ಆಗರವಾಗಿದೆ.

ಗ್ರಾಮದಲ್ಲಿ ಸಶ್ಮಾನವಿಲ್ಲ: ಪುನರ್ವಸತಿ ಕಲ್ಪಿಸಿರುವ ಗ್ರಾಮದಲ್ಲಿ ಸಶ್ಮಾನವಿಲ್ಲದೇ ಗ್ರಾಮಸ್ಥರು ಹಿನ್ನೀರು ನಿಂತಿರುವ ನಾಲೆಯನ್ನು ದಾಟಿ ಹಳೆಯ ಗ್ರಾಮದಲ್ಲಿರುವ ಸ್ಮಶಾನಕ್ಕೆ ಹೋಗಬೇಕಾಗುತ್ತದೆ.

`ಕೆಲವು ದಿನಗಳ ಹಿಂದೆ ಶವವನ್ನು ಮನೆ ಅಂಗಳದಲ್ಲಿಟ್ಟು ತಹಶೀಲ್ದಾರ್ ಅವರಿಗೆ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮದ ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಮಹ್ಮದ್ ಇಸ್ಮಾಯಿಲ್ ಹೇಳಿದ್ದಾರೆ.

ADVERTISEMENT

`ಪುನರ್ವಸತಿ ಕೇಂದ್ರದಲ್ಲಿ ಎರಡೂ ಕೋಮಿನವರಿಗೂ ಸ್ಮಶಾನ ಒದಗಿಸಬೇಕು ಎಂದು ನೀರಾವರಿ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ’ ಎನ್ನುತ್ತಾರೆ ಶರಣಪ್ಪ ಬಿರಾದಾರ.

ಶಿಥಿಲಗೊಂಡ ಸೇತುವೆ:`ಹಳೆಯ ಮತ್ತು ಹೊಸ ಗ್ರಾಮದ ಮಧ್ಯದಲ್ಲಿನ ಜಲಾಶಯದ ಹಿನ್ನೀರು ನಿಲ್ಲುವ ನಾಲೆಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿದೆ. ಭಾಲ್ಕಿ ಮತ್ತು ಬಸವಕಲ್ಯಾಣಕ್ಕೆ ಹೋಗುವ ರಸ್ತೆ ಇದಾಗಿದ್ದರಿಂದ ಹೆಚ್ಚಿನ ವಾಹನಗಳು ಸಂಚರಿಸುತ್ತವೆ.

ಸೇತುವೆ ಕಿರಿದಾಗಿದ್ದರಿಂದ ಮಳೆಗಾಲದಲ್ಲಿ ನಾಲೆ ನೀರು ಮೇಲಿನಿಂದ ಹೋಗುವುದರಿಂದ ಹಾಗೂ ಹಿನ್ನೀರು ನಿಂತು ಸೇತುವೆಗೆ ಹಾನಿಯಾಗಿದೆ. ಎತ್ತರದ ಸೇತುವೆ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥ ಮಹಾದೇವಪ್ಪ ತಿಳಿಸಿದರು.

ಬಿರುಕು ಬಿಟ್ಟಿರುವ ಶಾಲಾ ಕಟ್ಡಡ: `ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದಿದೆ. ಈಚೆಗೆ ಕೆಲ ಸ್ಥಳದಲ್ಲಿ ಆವರಣ ಗೋಡೆಯಲ್ಲಿ ಬಿರುಕು ಬಿಟ್ಟಿದೆ. `ಶಾಲೆಯ ಆವರಣಗೋಡೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಮುಖ್ಯಶಿಕ್ಷಕ ಚಂದ್ರಕಾಂತ ಕಿವಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.