ADVERTISEMENT

ಸಮಸ್ಯೆಗಳ ಸುಳಿಗೆ ಸಿಲುಕಿದ ಕೆರೂರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 5:45 IST
Last Updated 19 ಸೆಪ್ಟೆಂಬರ್ 2017, 5:45 IST
ಭಾಲ್ಕಿ ತಾಲ್ಲೂಕಿನ ಕೆರೂರ ಗ್ರಾಮದ ಬಾವಿಯ ಸುತ್ತುಗೋಡೆ ಕುಸಿದಿದ್ದು, ಅಪಾಯ ಆಹ್ವಾನಿಸುತ್ತಿದೆ
ಭಾಲ್ಕಿ ತಾಲ್ಲೂಕಿನ ಕೆರೂರ ಗ್ರಾಮದ ಬಾವಿಯ ಸುತ್ತುಗೋಡೆ ಕುಸಿದಿದ್ದು, ಅಪಾಯ ಆಹ್ವಾನಿಸುತ್ತಿದೆ   

ಭಾಲ್ಕಿ: ಗ್ರಾಮಸ್ಥರಿಗೆ ದಿನನಿತ್ಯ ಓಡಾಡಲು ಉತ್ತಮ ರಸ್ತೆ ಇಲ್ಲ. ಚರಂಡಿಗಳಿಲ್ಲದೆ ರಸ್ತೆಯಲ್ಲಿ ಹರಿಯುವ ಮನೆಗಳ ಹೊಲಸು ನೀರು. ಮನೆಗೊಂದು ಶೌಚಾಲಯ ನಿರ್ಮಾಣಗೊಳ್ಳದೆ ಇರುವುದರಿಂದ ರಸ್ತೆ ಅಕ್ಕಪಕ್ಕದ ಸ್ಥಳಗಳೇ ಶೌಚಾಲಯವಾಗಿ ಪರಿವರ್ತನೆ.

ಇದು ತಾಲ್ಲೂಕಿನ ಬೀರಿ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೂರ ಗ್ರಾಮದ ವಾಸ್ತವ ಚಿತ್ರಣ. ಈ ಗ್ರಾಮವೂ ಸುಮಾರು 2,200 ಜನಸಂಖ್ಯೆ ಹೊಂದಿದೆ. ಒಂದು ಉತ್ತಮ ಗ್ರಾಮ ಎನಿಸಿಕೊಳ್ಳಲು ಬೇಕಾಗಿರುವ ಮೂಲ ಸೌಕರ್ಯಗಳು ಇಲ್ಲದೆ ಈ ಊರು ಸೊರಗಿದೆ.

ಗ್ರಾಮದ ಕೆಲವೆಡೆ ಮಾತ್ರ ಸಿ.ಸಿ ರಸ್ತೆ ನಿರ್ಮಾಣವಾಗಿದೆ. ಬಹುತೇಕ ಕಡೆ ರಸ್ತೆಗಳು ಹಾಳಾಗಿರುವ ಕಾರಣ ಗ್ರಾಮಸ್ಥರು ಕೆಸರಿನಲ್ಲಿಯೇ ಓಡಾಡುವ ಅನಿವಾರ್ಯತೆ ಇದೆ. ಚರಂಡಿ ಇಲ್ಲದಿರುವುದರಿಂದ ಎಲ್ಲ ಮನೆಗಳ ನೀರು ರಸ್ತೆಗಳಿಗೆ ನುಗ್ಗುತ್ತದೆ. ಇದರಿಂದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಅಡ್ಡಾಡಲು ತೀವ್ರ ಸಂಕಷ್ಟವಾಗುತ್ತಿದೆ. ಈಗ ಮಳೆಗಾಲ ಇರುವುದರ ಎಲ್ಲೆಂದರಲ್ಲಿ ನೀರು ಸಂಗ್ರಹವಾಗುತ್ತಿದೆ. ಹಾಗಾಗಿ, ಗಲೀಜು ನೀರಿನ ದುರ್ನಾತದ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಜನರನ್ನು ಕಾಡುತ್ತಿದೆ.

ADVERTISEMENT

‘ಸಾರ್ವಜನಿಕ ಬಾವಿಯ ಸುತ್ತುಗೋಡೆ ಕುಸಿದಿದ್ದು, ಅಪಾಯ ಆಹ್ವಾನಿಸುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮದ ದಾಮೋದರ್‌ ಬೇದ್ರೆ, ತಾನಾಜಿರಾವ ಮೋರೆ, ತುಳಸಿರಾಮ ಕುರಮನಳ್ಳೆ.

‘ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣ ಆಗಿಲ್ಲ. ಗ್ರಾಮದಲ್ಲಿಯೂ ಸಾರ್ವಜನಿಕ ಶೌಚಾಲಯ ಇಲ್ಲ. ಹಾಗಾಗಿ, ಗ್ರಾಮಸ್ಥರು ಊರು ಸಮೀಪದ ರಸ್ತೆಯ ಎರಡು ಬದಿಗಳಲ್ಲಿ ಶೌಚಕ್ಕೆ ಹೋಗುತ್ತಾರೆ. ಈ ರಸ್ತೆಯಲ್ಲಿ ಹೆಚ್ಚಿನ ಜನರು ಅಡ್ಡಾಡುವುದರಿಂದ ಮಹಿಳೆಯರು ನಸುಕಿನ ಜಾವ, ಇಲ್ಲವೇ ರಾತ್ರಿಯ ಕತ್ತಲೆಯಲ್ಲಿ ಶೌಚಕ್ಕೆ ತೆರಳಬೇಕಾಗುತ್ತದೆ. ಮಹಿಳೆಯರು ತಮ್ಮ ನೋವಿಗಾಗಿ ನಿತ್ಯ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನದಲ್ಲಿ ಹಿಡಿ ಶಾಪ ಹಾಕುತ್ತಾರೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಮೈದಾನದ ಕೊರತೆಯಿದ್ದು, ಮಕ್ಕಳ ದೈಹಿಕ ಚಟುವಟಿಕೆಗೆ ಪೆಟ್ಟು ಬೀಳುತ್ತಿದೆ. ಇನ್ನು ಅಂಗನವಾಡಿ ಕೇಂದ್ರದ ಪಕ್ಕ ತಿಪ್ಪೆ ಇದ್ದು, ಪಾಲಕರಿಗೆ ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತಿದೆ’ ಎಂದು ತಿಳಿಸುತ್ತಾರೆ ಗ್ರಾ.ಪಂ ಸದಸ್ಯ ಧನಾಜಿ ಗೌಂಡಿ, ಪ್ರಭು ವಾಡಿಕರ್‌.

‘ಗ್ರಾಮದಿಂದ ಬಾಳೂರು, ಮುರಾಳ, ಹಲಬರ್ಗಾ, ಖಾನಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ತುಂಬ ತಗ್ಗು, ಗುಂಡಿ ನಿರ್ಮಾಣಗೊಂಡು ಕೆಸರುಮಯವಾಗಿದೆ. ಈ ರಸ್ತೆಯಲ್ಲಿರುವ ರೈತರು ತಮ್ಮ ಹೊಲಗಳಿಗೆ ಹೋಗಲು ಹರಸಾಹಸ ಪಡುವಂತಾಗಿದೆ. ರೈತರ ಖಾತೆಗೆ ಬೆಳೆ ವಿಮೆಯೂ ಜಮೆ ಆಗಿಲ್ಲ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ತಮಗೆ ಏನೂ ಸಂಬಂಧವಿಲ್ಲ ಎಂಬಂತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘ಶೀಘ್ರದಲ್ಲಿ ಗ್ರಾಮಕ್ಕೆ ಅಗತ್ಯ ಮೂಲ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸುತ್ತಾರೆ ಗ್ರಾಮ ವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.