ADVERTISEMENT

‘ಸರಾಫ್ ಬಜಾರ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 9:58 IST
Last Updated 10 ಜನವರಿ 2017, 9:58 IST
ಭಾಲ್ಕಿ: ಪಟ್ಟಣದ ಸರಾಫ್ ಬಜಾರ್ ರಸ್ತೆ ಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ, ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಚಿನ್ನಾಭರಣ ಅಂಗಡಿ ಮತ್ತು ಮಾಲೀಕರ ಜೀವಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಚಿನ್ನಾಭರಣ ಅಂಗಡಿ ಮಾಲೀಕರು ತಹಶೀಲ್ದಾರ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೋಮವಾರ ಮನವಿ ಸಲ್ಲಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ವ್ಯಾಪಾರಿಗಳು, ಈ ಹಿಂದೆ ಉದಯಕುಮಾರ ವಟಂಬೆ ಅವರ ಅಂಗಡಿಯಲ್ಲಿ ಕಳುವಾದಾಗ, ರಸ್ತೆ ಬದಿಯಲ್ಲಿರುವ ಚಿಕ್ಕಪುಟ್ಟ ಅಂಗಡಿ ತೆರವುಗೊಳಿಸಿ, ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲ್ಲಿಯ ವರೆಗೆ ಅಧಿಕಾರಿಗಳ ಬೇಜವಬ್ದಾರಿತನದಿಂದ ಮನವಿ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಭಾನುವಾರ ಬೆಳಿಗ್ಗೆ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಪವಾರ್ ಜ್ಯುವೆಲ್ಲರ್ಸ್ ಮಾಲೀಕ ಹಣಮಂತರಾವ ಅವರ ಮನೆಗೆ ನುಗ್ಗಿ ಪಿಸ್ತೂಲ್‌ನಿಂದ ತಲೆಗೆ ಹೊಡೆದು ₹2.5 ಲಕ್ಷ ನಗದು, 35 ತೊಲೆ ಚಿನ್ನಾಭರಣ ದೋಚಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಸರಾಫ್‌ ಬಜಾರ್ ಪೋಲಿಸ್ ಠಾಣೆ ಸಮೀಪವೇ ಇದ್ದರೂ ಈ ಆತಂಕಕಾರಿ ಘಟನೆ ನಡೆದಿದೆ. ಈ ಘಟನೆ ಎಲ್ಲ ಅಂಗಡಿ ಮಾಲೀಕರ ಮನದಲ್ಲಿ ಅಸುರಕ್ಷಿತ ಭಾವ ಮನೆ ಮಾಡುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
 
ಕಳ್ಳತನ, ದರೋಡೆ ತಡೆಯಲು ಆದಷ್ಟು ಶೀಘ್ರದಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಿ, ಸಿಸಿ ಕ್ಯಾಮೆರಾ ಅಳವಡಿಸಿ ಅಂಗಡಿ ಮತ್ತು ಮಾಲೀಕರ ಜೀವಕ್ಕೆ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
 
ಸೋಮನಾಥಪ್ಪಾ ಅಷ್ಟೂರೆ, ಯೋಗೇಶ ಅಷ್ಟೂರೆ, ಸಿ.ವಿ.ಮುದಾಳೆ, ಧನರಾಜ ರಿಕ್ಕೆ, ಹಣಮಂತರಾವ ಪವಾರ್, ಮಹೇಶ ನಾಯಕ್, ಶಿವ ಶೀಲವಂತ, ಮಹಾದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.