ADVERTISEMENT

‘ಸಾಮಾಜಿಕ ಸೌಹಾರ್ದತೆ ಎಲ್ಲರ ಹೊಣೆ’

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:05 IST
Last Updated 21 ಮೇ 2017, 6:05 IST

ಚಿಟಗುಪ್ಪ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಎಲ್ಲರ ಜವಾಬ್ದಾರಿ ಆಗಿದೆ ಎಂದು ಪುರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಅಶೋಕ ಚನ್ನಕೋಟೆ ಹೇಳಿದರು.ಶನಿವಾರ ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ ಭಯೋತ್ಪಾದನಾ ವಿರೋಧಿ ದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಭಾವೈಕ್ಯತೆ ಹಾಗೂ ದೇಶದ ಅಖಂಡತೆಗೆ ಧಕ್ಕೆ ಬಾರದಂತೆ ಭಯೋತ್ಪಾದನೆ ಹಾಗೂ ಹಿಂಸೆ ತಡೆಯುವುದು ಪ್ರತಿ ಪ್ರಜೆಯ ಮೂಲ ಕರ್ತವ್ಯವಾಗಿದೆ. ಎಲ್ಲರೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ, ಮಾನವ ಶಕ್ತಿಯ ದುರುಪಯೋಗ ಪಡಿಸಿಕೊಳ್ಳುವವರ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಮರ್ಥ್ಯ ಹೊಂದಬೇಕು. ಅಂದಾಗಲೇ ಸಧೃಡ ದೇಶ ಕಟ್ಟಲು ಸಾಧ್ಯ’ ಎಂದು ನುಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಅನು ಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಶಾಂತಿ ಉಂಟು ಮಾಡಲು ಪ್ರಯತ್ನಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.  ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಭಯೋತ್ಪಾದನೆ ತಡೆಯುವ ಬಗ್ಗೆ ಸೂಕ್ತ ತರಬೇತಿ, ಶಿಬಿರಗಳ ಮೂಲಕ ಅರಿವು ಮೂಡಿಸಬೇಕು. ಸ್ವಯಂ ಜಾಗೃತಿಯ ಬಗ್ಗೆ ಮಾಹಿತಿ ನೀಡಬೇಕು.

ADVERTISEMENT

ಸಮಾಜದ ಆಸ್ತಿ ಎಲ್ಲರ ಆಸ್ತಿ ಎಂಬ ಅರಿವು ಎಲ್ಲರಲ್ಲಿ ಮೂಡಿಸುವ ಜನ ಜಾಗೃತಿ ಅಭಿಯಾನ ಗ್ರಾಮ ಪಂಚಾಯಿತಿ, ಪುರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮೂಲಕ ನಡೆಸಬೇಕು’ ಎಂದು ಹೇಳಿದರು.

ಪುರಸಭೆ ಲೆಕ್ಕಿಗ ನರೇಶ್ ಘನಾತೆ ಮಾತನಾಡಿ, ‘ಸರ್ಕಾರಿ ನೌಕರರು  ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಯಾವುದೆ ಆಮಿಷಗಳಿಗೆ ಒಳಗಾಗಬಾರದು. ಎಲ್ಲರನ್ನು ಗೌರವದಿಂದ ಕಾಣುವ  ಗುಣ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ನಂತರ ಎಲ್ಲ ಸಿಬ್ಬಂದಿ ಸಾಮೂಹಿಕವಾಗಿ ಭಯೋತ್ಪಾದನೆ ತಡೆಗಟ್ಟುವ ಬಗ್ಗೆ ಪ್ರತಿಜ್ಞೆ ಸ್ವಿಕರಿಸಿದರು. ಸಿಬ್ಬಂದಿ ಸಂತೋಷ ಬಿರಾದಾರ್, ರಾಘವೇಂದ್ರ,  ಅಬ್ದುಲ್ ಖದೀರ್, ಉಮೇಶ್, ಸಂತೋಷ ಕುಮಾರ್, ಜಾಫರ್, ದಿಲೀಪ್, ರಾಜಕುಮಾರ್, ಬಬೀತಾ, ಮಲ್ಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.