ADVERTISEMENT

ಸಿ.ಸಿ ರಸ್ತೆ ಮೇಲೆ ಅಕ್ರಮ ಮನೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:44 IST
Last Updated 16 ಮೇ 2017, 8:44 IST

ಚಿಟಗುಪ್ಪ: ಸಮೀಪದ ಇಟಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಳಖಿಂಡಿ ಗ್ರಾಮದ ಸಿ.ಸಿ ರಸ್ತೆ ಮೇಲೆ ಅಕ್ರಮವಾಗಿ ಮನೆ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು.

‘ಗ್ರಾಮದ ಚಂದ್ರಕಾಂತ ಮಲ್ಲಿಕಾರ್ಜುನ ಎಂಬುವವರು ಸಿ.ಸಿ ರಸ್ತೆ ಮೇಲೆ ಅನಧಿಕೃತವಾಗಿ ಮನೆ ನಿರ್ಮಿಸಿದ್ದಾರೆ. ಇದರಿಂದ ಗ್ರಾಮದ ಬಹುತೇಕ ಹೊಲಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ. ರೈತರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಗ್ಗೆ 2012ರಿಂದ ನಿರಂತರವಾಗಿ ಗ್ರಾಮ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್‌ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಗಿದೆ. ಆದರೆ, ಇದುವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಯುವಶಕ್ತಿ ಕೇಂದ್ರ ಅಧ್ಯಕ್ಷ ಎಂ.ಜಿ.ಪ್ರಶಾಂತ್ ವಳಖಿಂಡಿ ತಿಳಿಸಿದ್ದಾರೆ.

ADVERTISEMENT

‘ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಶಾಸಕರು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಭರವಸೆ ನೀಡಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಾನುವಾರು, ವಾಹನ ಸಂಚಾರ, ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗಲೂ ಗ್ರಾಮದಲ್ಲಿ ಇದೊಂದೇ ಮುಖ್ಯ ರಸ್ತೆ.

ಈಗ ರಸ್ತೆ ಮೇಲೆ ಮನೆ ಕಟ್ಟಿದ್ದರಿಂದ ತೊಂದರೆ ಆಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಕಟ್ಟಡ ತೆರವುಗೊಳಿಸುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಕುಮಾರ್ ಆರ್.ನಡುವಿನ ದೊಡ್ಡಿ ತಿಳಿಸಿದರು.

ಬಾಬುರಾವ್ ಆರ್.ರಾಸೂರ್, ಅನಿಲಕುಮಾರ್ ಪಾಟೀಲ, ಉಮಾಕಾಂತ ಪಾಟೀಲ, ನರೇಂದ್ರ ಪಾಟೀಲ, ಮಹಾದೇವ್ ಪಾಟೀಲ, ವಿಜಯಕುಮಾರ ಕೃಷ್ಣಪ್ಪ, ಅಂಬಣ್ಣ ಶೇಶಪ್ಪ, ಮಚೇಂದ್ರ ಶೇರಿಕಾರ, ಬಂಡೆಪ್ಪ ಬಿರಾದಾರ, ಅಂಬಣ್ಣ ಬಿರಾದಾರ, ಸಂಜುಕುಮಾರ ವಳಖಿಂಡಿ, ಮೌಲಣ್ಣ ಶೇರಿಕಾರ, ರೇವಣಸಿದ್ದಪ್ಪ ಶೇರಿಕಾರ, ಶಿವಕುಮಾರ ಶೇರಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.