ADVERTISEMENT

ಹಳಕಟ್ಟಿ ವಚನೋತ್ಸವ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2013, 9:03 IST
Last Updated 30 ಡಿಸೆಂಬರ್ 2013, 9:03 IST

ಬೀದರ್: ಎರಡು ದಿನಗಳ ಹಳಕಟ್ಟಿ ವಚನೋತ್ಸವ ರಾಷ್ಟ್ರಮಟ್ಟದ ಏಳನೇ ಸಮ್ಮೇಳನ ನಗರದ ಜಿಲ್ಲಾ ರಂಗಮಂದಿ­ರದಲ್ಲಿ ಭಾನುವಾರ ತೆರೆ ಕಂಡಿತು.
ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷೆ ಅಕ್ಕ ಅನ್ನ­ಪೂರ್ಣ ಮಾತನಾಡಿದರು. ಶಿವಯೋ­ಗೀಶ್ವರ ರಾಜಯೋಗೇಂದ್ರ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು. ಬೀದರ್ ವಾಣಿಜ್ಯ ಮತ್ತು ಕೈಗಾ­ರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ­ಕುಮಾರ್ ಗಂದಗೆ, ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಅಶೋಕ­ಕುಮಾರ್ ನಾಗೂರೆ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ್ ಚನಶೆಟ್ಟಿ, ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಪ್ರಮುಖರಾದ ವಿಶ್ವನಾಥ ಕಾಜಿ, ನಾಗಶೆಟ್ಟಿ ಧರಂಪುರ ಉಪಸ್ಥಿತರಿದ್ದರು.

ಏಳು ನಿರ್ಣಯ ಅಂಗೀಕಾರ: ಇದಕ್ಕೂ ಮುನ್ನ ನಡೆದ ಶರಣ ಅಧಿ­ವೇಶ­ನದಲ್ಲಿ ಏಳು ಪ್ರಮುಖ ನಿರ್ಣ­ಯಗಳನ್ನು ಅಂಗೀಕರಿಸಲಾಯಿತು. ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಡಾ. ಫ.ಗು. ಹಳಕಟ್ಟಿ ಅವರ ಹೆಸರಿಡಬೇಕು. ಹಳಕಟ್ಟಿ ಅವರ ಜನ್ಮಸ್ಥಳ ಧಾರವಾಡದ ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು.

ಹಳಕಟ್ಟಿ ಅವರ ಜನ್ಮದಿನವಾದ ಜುಲೈ 2 ರಂದು ಸರ್ಕಾರ ವತಿಯಿಂದಲೇ ಹಳಕಟ್ಟಿ ಸ್ಮರಣೊತ್ಸವ ಕಾರ್ಯಕ್ರಮ ಆಯೋಜಿಸಬೇಕು. ವಚನ ಸಾಹಿತ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಸರ್ಕಾರ ಪ್ರತಿ ವರ್ಷ ₨10 ಲಕ್ಷ  ಮೊತ್ತದ ಪ್ರಶಸ್ತಿ ನೀಡಬೇಕು. ಶಾಲಾ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜೀವನ ಮತ್ತು ಸಾಧನೆ ಕುರಿತ ಪರಿಚಯಾತ್ಮಕ ಪಾಠವನ್ನು ಅಳವಡಿ­ಸ­ಬೇಕು.

ADVERTISEMENT

ವಚನ ಸಾಹಿತ್ಯ ಪ್ರಚಾರ, ಪ್ರಸಾರ ಮಾಡುವ ಪ್ರತ್ಯೇಕ ದೂರದ­ರ್ಶನ ಚಾನೆಲ್ ಆರಂಭಿಸಲು ಸರ್ಕಾರ ಮುಂದಾಗಬೇಕು. ಇದುವರೆಗೆ ಪ್ರಕಟ­ವಾದ ವಚನ ಸಾಹಿತ್ಯ ಒಂದೆಡೆ ಸಿಗು­ವಂತಾಗಲು ‘ವಚನ ಗ್ರಂಥ ಭಂಡಾರ’ ನಿರ್ಮಾಣ ಮಾಡಿ ಡಾ. ಫ.ಗು. ಹಳ­ಕಟ್ಟಿ ಹೆಸರನ್ನು ಅಮರ­ಗೊ­ಳಿ­ಸ­ಬೇಕು ಎನ್ನುವುದು ನಿರ್ಣಯಗಳಲ್ಲಿ ಸೇರಿವೆ. ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎಂ. ಪಾಟೀಲ್ ನಿರ್ಣಯಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.