ADVERTISEMENT

10 ಸಾವಿರ ಪರಿಶಿಷ್ಟ ನೌಕರರಿಗೆ ಹಿಂಬಡ್ತಿ

ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:44 IST
Last Updated 14 ಫೆಬ್ರುವರಿ 2017, 8:44 IST
ಬೀದರ್‌ನಲ್ಲಿ ಸೋಮವಾರ ನಡೆದ ಬಿಎಸ್‌ಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ ಮಾತನಾಡಿದರು. ಚೇತನ ಗೋಖಲೆ, ವಿಠ್ಠಲ ನಾಯಕ್‌, ಅಂಕುಶ ಗೋಖಲೆ ಇದ್ದಾರೆ
ಬೀದರ್‌ನಲ್ಲಿ ಸೋಮವಾರ ನಡೆದ ಬಿಎಸ್‌ಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ ಮಾತನಾಡಿದರು. ಚೇತನ ಗೋಖಲೆ, ವಿಠ್ಠಲ ನಾಯಕ್‌, ಅಂಕುಶ ಗೋಖಲೆ ಇದ್ದಾರೆ   
ಬೀದರ್: ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವ ಕಾರಣ ರಾಜ್ಯದ 38 ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10 ಸಾವಿರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಧಿಕಾರಿಗಳು ಮತ್ತು ನೌಕರರಿಗೆ ಹಿಂಬಡ್ತಿ ಆಗುವ ಸಾಧ್ಯತೆ ಇದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ ಹೇಳಿದರು.
 
ರಾಜ್ಯ ಸರ್ಕಾರವು ಸರಿಯಾದ ದಾಖಲೆ ಒದಗಿಸಿ ಮನವರಿಕೆ ಮಾಡುವಲ್ಲಿ ವಿಫಲವಾಗಿರುವ ಕಾರಣ ಸುಪ್ರೀಂ ಕೋರ್ಟ್‌ನಿಂದ ಈ ಆದೇಶ ಹೊರಬಿದ್ದಿದೆ. ರಾಜ್ಯ ಸರ್ಕಾರ, ಮೂರು ತಿಂಗಳ ಒಳಗೆ ನ್ಯಾಯಪೀಠದ ಮುಂದೆ ದಾಖಲೆಗಳೊಂದಿಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯಿಸಿದರು.
 
2006ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಬಡ್ತಿ ಮೀಸಲಾತಿ ಕೊಡುವಾಗ ಹಿಂದುಳಿದಿರುವಿಕೆ ಹಾಗೂ ಹುದ್ದೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಸಂವಿಧಾನದ ಪರಿಚ್ಛೇದ 335ರ ಪ್ರಕಾರ ಆಡಳಿತ ವ್ಯವಸ್ಥೆಯ ದಕ್ಷತೆಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಈ ಮಾನದಂಡ ಅನುಸರಿಸುವ ದಾಖಲೆಗಳನ್ನು ರಾಜ್ಯ ಸರ್ಕಾರದ ವಕೀಲರು ಸುಪ್ರೀಂ ಕೋರ್ಟ್‌ಗೆ ಕೊಟ್ಟಿಲ್ಲ ಎಂದು ಆರೋಪಿಸಿದರು.
 
ಅಧಿಕೃತ ಮಾಹಿತಿ ಪ್ರಕಾರ ಲೋಕೋಪಯೋಗಿ ಇಲಾಖೆಯ 1,750, ಇಂಧನ ಇಲಾಖೆಯ 1,200, ಕಂದಾಯ ಇಲಾಖೆಯ 170,  ಸಾರಿಗೆ ಇಲಾಖೆಯ 125 ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. ಇನ್ನುಳಿದ ಇಲಾಖೆಗಳ ಅಧಿಕೃತ ಮಾಹಿತಿ ಪಡೆಯಲಾಗುತ್ತಿದೆ. ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲೆ ಮಾಡಿದ ಗದಾ  ಪ್ರಹಾರವಾಗಿದೆ ಎಂದು ಹೇಳಿದರು.
 
ರಾಜ್ಯದ 52 ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು.  ರಾಜ್ಯ ಸರ್ಕಾರ, ನ್ಯಾಯಪೀಠದ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ದಾಖಲಿಸಬೇಕು.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಡ್ತಿ ಮೀಸಲಾತಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕು. ಇದರಿಂದ ಯಾವ ಪಕ್ಷದವರು ವಿರೋಧಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.
 
ರಾಜಸ್ತಾನ, ತಮಿಳುನಾಡು, ಹರಿಯಾಣದಲ್ಲಿ ಬಡ್ತಿ ಮೀಸಲಾತಿಗೆ ಹಿನ್ನಡೆಯಾಗಿದೆ. ಇದು ಕೇಂದ್ರಕ್ಕೂ ಅನ್ವಯವಾಗಲಿದೆ. ಸರ್ಕಾರಿ ನೌಕರಿಯಲ್ಲಿರುವ ಪರಿಶಿಷ್ಟ ಜಾತಿ/ ವರ್ಗಗಳ ನೌಕರರಿಗೆ ಹುದ್ದೆಯಲ್ಲಿ ಬಡ್ತಿಗೆ ಸಂಬಂಧಿಸಿದ  ಮಸೂದೆಗೆ 2012ರಲ್ಲಿ  ರಾಜ್ಯಸಭೆ ಒಪ್ಪಿಗೆ ನೀಡಿದೆ.  ಲೋಕಸಭೆ ಒಪ್ಪಿಗೆ ಸೂಚಿಸಬೇಕಿದೆ ಎಂದು ಹೇಳಿದರು.
 
ಕೇಂದ್ರ ಸಚಿವ ರಾಮದಾಸ್ ಅಠವಲೆ ಹಾಗೂ ಲೋಕಸಭೆಯ ಕಾಂಗ್ರೆಸ್‌ ಸಂಸದೀಯ  ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಒಂದು ಮನವಿಯನ್ನೂ ಮಾಡಿಲ್ಲ.  ಅವರು ಸಂಸತ್ತಿನಲ್ಲಿ ಈ ಕುರಿತು ಪ್ರಸ್ತಾಪ ಮಾಡಬೇಕು. ಕೋರ್ಟ್‌ಗಳು ಮೀಸಲಾತಿಗೆ ಕಲ್ಲು ಹಾಕುತ್ತಿರುವ ಕಾರಣ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಕೇಂದ್ರ ಕಾಯ್ದೆಯನ್ನೇ ಮಾಡುವ ಮೂಲಕ  ಮೀಸಲಾತಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
 
ಮಾರ್ಚ್‌ನಲ್ಲಿ  ಬಿಎಸ್‌ಪಿ 100 ಅಭ್ಯರ್ಥಿಗಳ ಪಟ್ಟಿ ಪ್ರಕಟ
 
ಬೀದರ್:  ರಾಜ್ಯ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸಲಿರುವ ಬಹುಜನ ಸಮಾಜ ಪಕ್ಷದ ನೂರು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಮಾರ್ಚ್‌ ಕೊನೆಯ ವಾರ ಇಲ್ಲವೆ ಏಪ್ರಿಲ್‌ ಮೊದಲ ವಾರದಲ್ಲಿ  ಪ್ರಕಟಿಸಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ ಘೋಷಿಸಿದರು.

ನಗರದಲ್ಲಿ ಸೋಮವಾರ ನಡೆದ ಬಿಎಸ್‌ಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ಟಿಕೆಟ್‌ ಆಕಾಂಕ್ಷಿಗಳುಪಕ್ಷದ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಬೇಕು. ಕೊನೆಯ ಹಂತದಲ್ಲಿ ಪ್ರಬಲ ಅಭ್ಯರ್ಥಿಗಳು ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸಿದರೆ ಅವರಿಗೆ ಸ್ಥಾನ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.
ಬಿಎಸ್‌ಪಿ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ವಿಧಾನಸಭೆಯ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗ್ರಾಮ ಮಟ್ಟದಲ್ಲೂ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಬೇಕು. ಪಕ್ಷದ ಧ್ಯೇಯ ಹಾಗೂ ಉದ್ದೇಶಗಳನ್ನು ವಿವರಿಸುವ ಮೂಲಕ ಪಕ್ಷಕ್ಕೆ  ಹೊಸ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಅಂಕುಶ ಗೋಖಲೆ ಅವರ ಮೇಲೆ ಲಾರಿ ಹಾಯಿಸಿ ಕೊಲೆ ಮಾಡಲು ಯತ್ನಿಸಲಾಗಿದೆ. ಪೊಲೀಸರು ಈವರೆಗೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಅಂಕುಶ ಪ್ರಾಣಕ್ಕೆ ಅಪಾಯ ಉಂಟಾದರೆ ಅದಕ್ಕೆ ಪೊಲೀಸರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು. ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ  ಅಂಕುಶ ಗೋಖಲೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚೇತನ ಗೋಖಲೆ, ವಿಠ್ಠಲ ನಾಯಕ್‌ ಉಪಸ್ಥಿತರಿದ್ದರು.
 
* ಬಿಎಸ್‌ಪಿ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ನಡೆಸಲಿದೆ.
ಎನ್. ಮಹೇಶ, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.