ADVERTISEMENT

ಅಚ್ಚರಿ ಮೂಡಿಸಿದ ಬೂದುಗುಂಬಳ ಧಾರಣೆ

ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲೂ ಕೊಂಚ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:04 IST
Last Updated 7 ಮಾರ್ಚ್ 2017, 7:04 IST
ಚಾಮರಾಜನಗರ: ಕಳೆದ ನಾಲ್ಕು ವಾರದಿಂದ ಏರಿಕೆ ಕಂಡಿದ್ದ ಟೊಮೆಟೊ ಧಾರಣೆ ಇಳಿಕೆಯಾಗಿದೆ. ಇನ್ನೊಂದೆಡೆ ಬೂದುಗುಂಬಳದ ಧಾರಣೆ ಏರಿಕೆ ಯಾಗಿರುವುದು ಅಚ್ಚರಿ ಮೂಡಿಸಿದೆ. ಪ್ರಸ್ತುತ ಬಿಸಿಲಿನ ಝಳ ಹೆಚ್ಚುತ್ತಿದೆ. ಇದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲೂ ಕೊಂಚ ಇಳಿಕೆಯಾಗಿದೆ. ಆದರೆ, ತರಕಾರಿ ಧಾರಣೆ ಹೆಚ್ಚಳವಾಗಿಲ್ಲ. ಕೆಲವು ತರಕಾರಿಗಳ ಬೆಲೆ ಮಾತ್ರ ಎರಡಂಕಿ ದಾಟಿದೆ.
 
ವರ್ಷಪೂರ್ತಿ ಬೂದುಗುಂಬಳದ ಧಾರಣೆ 1 ಕೆಜಿಗೆ ₹ 3ರಿಂದ ₹ 4 ಇರುತ್ತಿತ್ತು. ಈಗ ಧಾರಣೆಯು ಒಂದು ಕೆಜಿಗೆ ₹ 18ರಿಂದ ₹ 20 ಮುಟ್ಟಿದೆ. ಸತತ ಬರಗಾಲದ ಪರಿಣಾಮ ಕೊಳವೆಬಾವಿ ಗಳಲ್ಲಿ ಅಂತರ್ಜಲಮಟ್ಟ ಕಡಿಮೆಯಾಗಿದೆ. ಇದರಿಂದ ಬೂದುಗುಂಬಳ ಬೆಳೆಯುವುದು ಕಡಿಮೆಯಾಗಿದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನುವುದು ವ್ಯಾಪಾರಿಗಳ ಅನಿಸಿಕೆ.
 
ಜಿಲ್ಲೆಯ ವಿವಿಧೆಡೆ ಬೆಳೆಯುತ್ತಿದ್ದ ಬೂದುಗುಂಬಳ ಮಾರುಕಟ್ಟೆಗೆ ಬರು ತ್ತಿತ್ತು. ಪ್ರಸ್ತುತ ಮೈಸೂರು ಮತ್ತು ಮಂಡ್ಯದ ಭಾಗದಲ್ಲಿ ಬೆಳೆದಿರುವ ಬೂದುಗುಂಬಳ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. 
 
ಟೊಮೆಟೊ ಧಾರಣೆಯು ಕೊಂಚ ಕಡಿಮೆಯಾಗಿರುವುದು ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿದೆ. 1 ಕೆಜಿಗೆ ₹ 30 ರಿಂದ ₹ 40 ಮುಟ್ಟಿದ್ದ ಧಾರಣೆಯು ಈಗ ₹ 20ಕ್ಕೆ ಇಳಿದಿದೆ. ಹೊರ ಜಿಲ್ಲೆ ಗಳಿಂದಲೂ ಟೊಮೆಟೊ ಪೂರೈಕೆ ಯಾಗುತ್ತಿದೆ. ಇದರಿಂದ ಬೆಲೆ ಇಳಿಕೆಯಾಗಿದೆ. ಮಳೆ ಇಲ್ಲದೆ ತೆಂಗಿನ ಮರಗಳು ಒಣಗಿಹೋಗಿವೆ. ಹಾಗಾಗಿ, ಮಾರುಕಟ್ಟೆ ಯಲ್ಲಿ ತೆಂಗಿನಕಾಯಿ ಧಾರಣೆಯು ಹೆಚ್ಚಿದೆ. ಗಾತ್ರಕ್ಕೆ ಅನುಗುಣ ವಾಗಿ ದರ ನಿಗದಿಪಡಿಸಲಾಗಿದೆ. ಸಾಧಾರಣ ಗಾತ್ರದ ಒಂದು ತೆಂಗಿನಕಾಯಿಗೆ ₹ 18 ಬೆಲೆ ಇದೆ. ಇದು ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
 
ಉಳಿದಂತೆ 1 ಕೆಜಿ ಕ್ಯಾರೆಟ್‌ ₹ 10ರಿಂದ 12, ಮೂಲಂಗಿ ₹ 8ರಿಂದ 10, ಬೀನ್ಸ್‌ ₹ 30ರಿಂದ 40, ನುಗ್ಗೆ ಕಾಯಿ ₹ 20, ಸೌತೆಕಾಯಿ ₹ 6ರಿಂದ 8, ದಪ್ಪಮೆಣಸಿನಕಾಯಿ ₹ 30, ಹಸಿ ಮೆಣಸಿನಕಾಯಿ ₹ 30, ಅವರೆಕಾಯಿ ₹ 35, ಹಸಿಬಟಾಣಿ ₹ 30 ಬೆಲೆ ಇದೆ.
 
ಯುಗಾದಿ ಹಬ್ಬ ಸಮೀಪಿಸುತ್ತಿದೆ. ಇನ್ನೊಂದೆಡೆ ಬಿಸಿಲಿನ ಝಳವೂ ಹೆಚ್ಚುತ್ತಿದೆ. ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಧಾರಣೆ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನುವುದು ವ್ಯಾಪಾರಿಗಳ ಹೇಳಿಕೆ.
 
‘ಹಿಂದಿನ ವಾರಗಳಿಗೆ ಹೋಲಿಕೆ ಮಾಡಿದರೆ ತರಕಾರಿ ಧಾರಣೆ ಕೊಂಚ ಕಡಿಮೆಯಾಗಿದೆ. ಕೆಲವು ತರಕಾರಿಗಳ ಬೆಲೆ ಸ್ಥಿರವಾಗಿದೆ. ಹಾಗಾಗಿ, ಖರೀದಿಗೆ ಸಮಸ್ಯೆಯಾಗಿಲ್ಲ’ ಎನ್ನುತ್ತಾರೆ ಗೃಹಿಣಿ ಶೋಭಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.