ADVERTISEMENT

ಅಚ್ಚುಕಟ್ಟು ಭಾಗದ ಜಮೀನಿಗೆ ನೀರು, ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2016, 9:49 IST
Last Updated 6 ಮೇ 2016, 9:49 IST

ಕೊಳ್ಳೇಗಾಲ: ದನಗೆರೆ ಏತನೀರಾವರಿ ಅಚ್ಚುಕಟ್ಟು ಭಾಗದ ಎಲ್ಲ ಜಮೀನಿಗೂ ನೀರು ಒದಗಿಸಲು ಕ್ರಮವಹಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮು ಒತ್ತಾಯಿಸಿದರು.

ಪಟ್ಟಣದ ಕಬಿನಿ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ  ಕಬಿನಿ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
1000 ಎಕರೆಗೆ ಏತನೀರಾವರಿ ಮೂಲಕ ನೀರು ಪೂರೈಸುವ ಬದಲು ಕೇವಲ 30 ಎಕರೆಗೆ ನೀರು ಪೂರೈಸ ಲಾಗುತ್ತಿದೆ. ಇದರಿಂದ ರೈತರು ಕಿತ್ತಾಡು ವಂತಾಗಿದೆ. ಜತೆಗೆ ವಿದ್ಯುತ್‌ ಸಮಸ್ಯೆ ಕೂಡಾ ಇದ್ದು, 24 ಗಂಟೆಗಳ ವಿದ್ಯುತ್‌ ಪೂರೈಸಿ ಪೂರ್ಣ ನೀರಾವರಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲ್ಲೂಕಿನ ತೆಳ್ಳನೂರು ವ್ಯಾಪ್ತಿಯಲ್ಲಿ ರೈತರಿಗೆ ನೀರು ಪೂರೈಸಲು ಕೋಟ್ಯಂತರ ಹಣ ವ್ಯಯಮಾಡಲಾಗಿದೆ. ನೀರು ಪೂರೈಸಲು ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಸತ್ತೇಗಾಲ ಗ್ರಾಮ ಶಾಖೆ ಅಧ್ಯಕ್ಷ ಜಯರಾಜು, ಕಬಿನಿ ವ್ಯಾಪ್ತಿ ಕೆರೆಗಳನ್ನು ಸಮೀಕ್ಷೆ ಮಾಡಿಸಿ ಒತ್ತುವರಿ ತೆರವಿಗೆ, ಹೂಳು ತೆಗೆಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಗೌಡೇಗೌಡ, ಕಬಿನಿ ವಸತಿ ಗೃಹಗಳು ದುರ್ಬಳಕೆ ಆಗುತ್ತಿದ್ದು, ತಡೆಯಿರಿ ಎಂದು ಆಗ್ರಹಿಸಿದರು.

ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಅವರು, ಏತನೀರಾವರಿ ಮತ್ತು ಕೆರೆ ಒತ್ತುವರಿ ಇತರೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದು ಕ್ರಮ ವಹಿಸುವುದಾಗಿ ಹೇಳಿದರು. ರೈತ ಮುಖಂಡರಾದ ರವಿನಾಯ್ಡು, ರಾಚಪ್ಪ, ಬಾಸ್ಕರ್‌, ಶಿವಕುಮಾರ್‌  ರಾಮಕೃಷ್ಣ, ಪ್ರಶಾಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.