ADVERTISEMENT

ಉತ್ತಮ ಆರೋಗ್ಯ ಸೇವೆಗೆ ಆದ್ಯತೆ

14ರಂದು ಮುಖ್ಯಮಂತ್ರಿಯಿಂದ ಜೆಎಸ್ಎಸ್ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:56 IST
Last Updated 12 ಮೇ 2017, 9:56 IST
ಉತ್ತಮ ಆರೋಗ್ಯ ಸೇವೆಗೆ ಆದ್ಯತೆ
ಉತ್ತಮ ಆರೋಗ್ಯ ಸೇವೆಗೆ ಆದ್ಯತೆ   
ಚಾಮರಾಜನಗರ: ‘ನಗರದಲ್ಲಿ ಮೇ 14ರಿಂದ ಜೆಎಸ್‌ಎಸ್‌ ಆಸ್ಪತ್ರೆ ಕಾರ್ಯಾರಂಭ ಮಾಡಲಿದ್ದು, ಜಿಲ್ಲೆಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಟ್‌ಸೂರ್‌ಮಠ್‌ ಹೇಳಿದರು. 
 
‘ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಪಕ್ಕದಲ್ಲೇ 5,700 ಚದರ ಮೀಟರ್‌ ವಿಸ್ತೀರ್ಣದಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಈ ಆಸ್ಪತ್ರೆಯು ಜಿಲ್ಲಾ ಕೇಂದ್ರದಲ್ಲಿ ಅತಿ ದೊಡ್ಡ ಖಾಸಗಿ ಆಸ್ಪತ್ರೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
‘ಆಸ್ಪತ್ರೆಯು 18 ಸ್ಪೆಷಾಲಿಟಿ ಹಾಗೂ 5 ಸೂಪರ್ ಸ್ಪೆಷಾಲಿಟಿ ಸೌಲಭ್ಯ ಹೊಂದಿದೆ. ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌, ದಿನದ 24 ಗಂಟೆ ತುರ್ತು ಚಿಕಿತ್ಸಾ ಘಟಕ ಹಾಗೂ ತಜ್ಞ ವೈದ್ಯರ ತಂಡ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದರು.
 
‘ಅತ್ಯಾಧುನಿಕ ಪ್ರಯೋಗಾಲಯ, ಸಿ.ಟಿ. ಸ್ಕ್ಯಾನ್‌, ಎಕ್ಸ್‌–ರೇ, ಅಲ್ಟ್ರಾಸೌಂಡ್‌, 2 ಶಸ್ತ್ರಚಿಕಿತ್ಸಾ ಕೊಠಡಿಗಳು, ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ತೀವ್ರ ನಿಗಾ ಘಟಕ, ವೈದ್ಯಕೀಯ ತೀವ್ರ ನಿಗಾ ಘಟಕ, ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕ ಒಳಗೊಂಡಿದೆ. ಜನರಿಗೆ ಎಲ್ಲ ರೀತಿಯ ಆರೋಗ್ಯ ಸೇವೆ ದೊರೆಯಲಿದೆ’ ಎಂದು ತಿಳಿಸಿದರು. 
 
‘ಡಯಾಲಿಸಿಸ್ ಸೇವೆಯೂ ಲಭ್ಯ. ಮೂತ್ರಪಿಂಡರೋಗ ಹೊಂದಿರುವ ರೋಗಿಗಳು ಚಿಕಿತ್ಸೆಗೆ ಮೈಸೂರಿಗೆ ತೆರಳಬೇಕಾಗಿತ್ತು. ಇನ್ನು ಇಲ್ಲಿಯೇ  ಚಿಕಿತ್ಸೆ ಪಡೆಯಬಹುದು. ಸರ್ಕಾರದ ವಿವಿಧ ಆರೋಗ್ಯ ಯೋಜನೆ ಫಲಾನುಭವಿಗಳಿಗೂ ಚಿಕಿತ್ಸೆ ಸೌಲಭ್ಯ ನೀಡಲಾಗುವುದು’ ಎಂದರು.
 
ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್‌.ಪಿ. ಮಂಜುನಾಥ್‌, ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹೇಶ್‌, ಬಸವಣ್ಣ, ಕಾಲೇಜು ಶಿಕ್ಷಣ ನಿರ್ದೇಶಕ ನಿರಂಜನ್‌ಕುಮಾರ್‌, ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜಿ. ಶಿವಕುಮಾರ್‌ ಇದ್ದರು.
 
ಆಸ್ಪತ್ರೆ, ಸುವರ್ಣಮಹೋತ್ಸವ ಉದ್ಘಾಟನೆ: ಮೇ 14ರಂದು ಬೆಳಿಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಎಸ್ಎಸ್‌ ಆಸ್ಪತ್ರೆ ಹಾಗೂ ಜೆಎಸ್‌ಎಸ್‌ ಮಹಿಳಾ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟಿಸುವರು. 
 
ಸೂತ್ತೂರು ಮಠದ ಶಿವರಾತ್ರಿ ದೇಸಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವವಹಿಸಲಿದ್ದಾರೆ. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
 
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸುವರ್ಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. 
 
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಶಸ್ತ್ರಚಿಕಿತ್ಸಾ ಘಟಕ ಉದ್ಘಾಟಿಸಲಿದ್ದಾರೆ. ಸಂಸದ ಆರ್. ಧ್ರುವನಾರಾಯಣ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ ಉದ್ಘಾಟಿಸಲಿದ್ದಾರೆ.
 
ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಔಷಧ ಕೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಉಪಾಹಾರ ಗೃಹ ಉದ್ಘಾಟಿಸಲಿದ್ದಾರೆ. ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಡಯಾಲಿಸಿಸ್‌ ಘಟಕ ಉದ್ಘಾಟಿಸಲಿದ್ದಾರೆ.
 
ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌, ಶಾಸಕರಾದ ಎಸ್‌. ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ್‌ಕುಮಾರಿ, ವಿಧಾನಪರಿಷತ್‌ ಸದಸ್ಯರಾದ ಸಂದೇಶ್‌ನಾಗರಾಜ್‌, ಆರ್. ಧರ್ಮಸೇನ, ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕರಾದ ಯು.ಎಂ. ಮಾದಪ್ಪ, ಎ.ಆರ್. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ನಗರಸಭೆ ಅಧ್ಯಕ್ಷ ಎಸ್‌.ಎನ್‌. ರೇಣುಕಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.