ADVERTISEMENT

ಎಪಿಎಂಸಿ ಗೋದಾಮು ನಿರ್ಮಾಣ

ವಿವಿಧ ಕಾಮಗಾರಿಗೆ ಚಾಲನೆ ನಿಡಿದ ಸಚಿವ ಎಚ್.ಎಸ್. ಮಹದೇವಪ್ರಸಾದ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 9:10 IST
Last Updated 1 ಸೆಪ್ಟೆಂಬರ್ 2014, 9:10 IST
ಗುಂಡ್ಲುಪೇಟೆ ಪಟ್ಟಣದ ಜಾಕೀರ್‌ ಹುಸೇನ್‌ನಗರದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ₨ 1.30 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಭಾನುವಾರ ಭೂಮಿಪೂಜೆ ನೆರವೇರಿಸಿದರು
ಗುಂಡ್ಲುಪೇಟೆ ಪಟ್ಟಣದ ಜಾಕೀರ್‌ ಹುಸೇನ್‌ನಗರದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ₨ 1.30 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಭಾನುವಾರ ಭೂಮಿಪೂಜೆ ನೆರವೇರಿಸಿದರು   

ಗುಂಡ್ಲುಪೇಟೆ: ‘ಪಟ್ಟಣದ ಕರ್ನಾಟಕ ಗೃಹಮಂಡಳಿ ಸಮೀಪದ 3 ಎಕರೆಯಲ್ಲಿ ₨ 2.20 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಿಸಲಾಗುವುದು’ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು. ಪಟ್ಟಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಗೋದಾಮು 3 ಸಾವಿರ ಮೆಟ್ರಿಕ್‌ ಟನ್‌ ಸಂಗ್ರಹ ಸಾಮರ್ಥ್ಯ ಉಳ್ಳದ್ದಾಗಿದ್ದು, ರೈತರು ಬೆಳೆಗೆ ಸೂಕ್ತ ಬೆಲೆ ಸಿಗದ ವೇಳೆ ಅತ್ಯಾಧುನಿಕವಾದ ಈ ಗೋದಾಮಿನಲ್ಲಿ ಸಂರಕ್ಷಿಸಿಡಲು ಅವಕಾಶ ನೀಡಲಾಗುವುದು. ಸಂಗ್ರಹಿಸಿಡುವ ದವಸ ಧಾನ್ಯಗಳಿಗೆ ಶೇ 70ರಿಂದ 80ರಷ್ಟು ಬ್ಯಾಂಕ್‌ ಸಾಲ ಸೌಲಭ್ಯದ ಜೊತೆ ಆಹಾರ ಭದ್ರತೆ ಕೂಡ ಸಿಗಲಿದೆ’ ಎಂದರು.

‘ರಾಜ್ಯದಲ್ಲಿ 133 ಕೇಂದ್ರಗಳಲ್ಲಿ 10 ಲಕ್ಷ ಮೆಟ್ರಿಕ್‌ಟನ್ ಆಹಾರ ಸಂಗ್ರಹಿಸಲಾಗಿದೆ. ಬೆಂಬಲ ಬೆಲೆ ನೀಡಿ ಮೆಕ್ಕೆಜೋಳವನ್ನು ಖರೀದಿಸಿ, ಲಾಭಕ್ಕೆ ಮಾರಾಟ ಮಾಡಲಾಗಿದೆ. ಎಪಿಎಂಸಿಗಳಲ್ಲಿ ಆನ್‌ಲೈನ್‌ ಟ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ಎರಡನೇ ರಾಜ್ಯ ನಮ್ಮದು’ ಎಂದರು.

ಇದೇ ಸಂದರ್ಭದಲ್ಲಿ ಸಚಿವರು ಪಟ್ಟಣದ ಜಾಕೀರ್‌ ಹುಸೇನ್‌ನಗರದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ₨ 1.30 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರಿಗೆ ಕೂತನೂರಲ್ಲಿ 10 ಎಕರೆ ಮತ್ತು ಮಡಹಳ್ಳಿಯಲ್ಲಿ 18 ಎಕರೆ ಆಶ್ರಯ ನಿವೇಶನ ವಿತರಿಸಲಾಗುವುದು. ಪಟ್ಟಣದಲ್ಲಿ ವಿಶ್ವಕರ್ಮ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ, ಸದಸ್ಯೆ ಅಂಬಿಕಾ ರಾಜಪ್ಪ, ತಾಲ್ಲೂಕು ಪಂಚಾಯಿತಿ  ಅಧ್ಯಕ್ಷ ಕಣ್ಣೇಗಾಲ ಸ್ವಾಮಿ, ಉಪಾಧ್ಯಕ್ಷ ಬಂಗಾರನಾಯ್ಕ ಪುರಸಭಾಧ್ಯಕ್ಷ ಪಿ. ಚಂದ್ರಪ್ಪ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ  ಸುರೇಶ್‌, ನಾಗೇಂದ್ರ, ಶಶಿಧರ್‌ (ದೀಪು) ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.